ಅಬ್ಬಬ್ಬಾ.. ‘ಕಾಂತಾರ: ಚಾಪ್ಟರ್ 1’ ಶನಿವಾರದ ಕಲೆಕ್ಷನ್ ಇಷ್ಟೊಂದಾ?; ಭಾರತದಲ್ಲೇ 400 ಕೋಟಿ ಗಳಿಕೆ
Kantara Chapter 1 Day 10 Collection: ‘ಕಾಂತಾರ: ಚಾಪ್ಟರ್ 1’ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಈ ಸಿನಿಮಾ 396 ಕೋಟಿ ರೂ. ಗಳಿಸಿದೆ. ದೀಪಾವಳಿ ಕಲೆಕ್ಷನ್ ಚಿತ್ರದ ಒಟ್ಟು ಗಳಿಕೆಗೆ ನಿರ್ಣಾಯಕವಾಗಿದೆ. ಸಿನಿಮಾ 1000 ಕೋಟಿ ರೂಪಾಯಿ ಗಡಿ ದಾಟುವ ನಿರೀಕ್ಷೆಯಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ (Kantara Collection) ತನ್ನ ಪಾರುಪತ್ಯವನ್ನು ಮುಂದುವರಿಸಿದೆ. ಈ ಸಿನಿಮಾ ಅಬ್ಬರದ ಕಲೆಕ್ಷನ್ ಮಾಡುತ್ತಾ ಮುಂದಕ್ಕೆ ಸಾಗುತ್ತಿದೆ. ಈ ಸಿನಿಮಾದ ಕಲೆಕ್ಷನ್ ಭಾರತದಲ್ಲೇ ಸುಮಾರು 400 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾ ದೀಪಾವಳಿ ಸಮಯದಲ್ಲಿ ಮತ್ತಷ್ಟು ಅಬ್ಬರದ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್ ಆದ ದಿನದಿಂದಲೂ ಅದ್ದೂರಿ ಕಲೆಕ್ಷನ್ ಮಾಡುತ್ತಾ ಬರುತ್ತಿದೆ. ಈ ಚಿತ್ರ ಅಕ್ಟೋಬರ್ 11ರಂದು (10ನೇ ದಿನ) ಬರೋಬ್ಬರಿ 37 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಪಾಲಿಗೆ ಇದು ಎರಡನೇ ಶನಿವಾರ. ಮೊದಲ ಶನಿವಾರ ಈ ಚಿತ್ರ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ಶನಿವಾರವೂ ಅಬ್ಬರದ ಕಲೆಕ್ಷನ್ ಮುಂದುವರಿದಿದೆ.
ಬಹುತೇಕ ಸಿನಿಮಾಗಳು ಮೊದಲ ವಾರವೇ ಸುಸ್ತಾಗಿ ಬಿಡುತ್ತವೆ. ಎರಡನೇ ವಾರವೂ ತನ್ನ ಪ್ರಾಬಲ್ಯ ಸಾಧಿಸಬೇಕು ಎಂದರೆ ಅದು ಸುಲಭದ ಮಾತು ಅಲ್ಲವೇ ಅಲ್ಲ. ಆದರೆ, ‘ಕಾಂತಾರ: ಚಾಪ್ಟರ್ 1’ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ತನ್ನ ಹಿಡಿತ ಸಾಧಿಸಿದೆ. ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಈ ಸಿನಿಮಾ ಮೇಲುಗೈ ಸಾಧಿಸಿದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ 396 ಕೋಟಿ ರೂಪಾಯಿ ಆಗಿದೆ.
9 ದಿನದ ಲೆಕ್ಕಾಚಾರ
9 ದಿನದಲ್ಲಿ ಸಿನಿಮಾ ಯಾವ ಭಾಷೆಯಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಲೆಕ್ಕಾಚಾರ ಸಿಕ್ಕಿದೆ. ಕನ್ನಡದಲ್ಲಿ ಸಿನಿಮಾ 114 ಕೋಟಿ ರೂಪಾಯಿ, ಹಿಂದಿಯಲ್ಲಿ 116 ಕೋಟಿ ರೂಪಾಯಿ, ತೆಲುಗಿನಲ್ಲಿ 67 ಕೋಟಿ ರೂಪಾಯಿ, ತಮಿಳಿನಲ್ಲಿ 34 ಕೋಟಿ ರೂಪಾಯಿ ಹಾಗೂ ಮಲಯಾಳಂನಿಂದ 28 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಇದನ್ನೂ ಓದಿ: ಹಿಂದಿಯಲ್ಲಿ ‘ಕಾಂತಾರ: ಚಾಪ್ಟರ್ 1’ ಭರ್ಜರಿ ಕಲೆಕ್ಷನ್; ಕರ್ನಾಟಕದ ಗಳಿಕೆ ಹಿಂದಿಕ್ಕಿದ ಉತ್ತರದ ಮಂದಿ
ದೀಪಾವಳಿ ಕಲೆಕ್ಷನ್ ಮುಖ್ಯ
ದೀಪಾವಳಿ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎಂಬ ಬಗ್ಗೆ ಈಗಲೇ ಚರ್ಚೆಗಳು ನಡೆಯುತ್ತಿವೆ. ಹಬ್ಬದ ಸಮಯದಲ್ಲಿ ಮೂರು ದಿನಕ್ಕೆ ವಿದೇಶದಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿದರೆ ಒಟ್ಟಾರೆ ಕಲೆಕ್ಷನ್ 1000 ಕೋಟಿ ರೂಪಾಯಿ ಆಗಬಹುದು ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








