ಕನ್ನಡ ಚಿತ್ರಂಗದಲ್ಲಿ ಪ್ರತಿ ವಾರ ಹೊಸ ಹೊಸ ಪ್ರಯತ್ನಗಳು ಪ್ರೇಕ್ಷಕರ ಮುಂದೆ ಬರುತ್ತವೆ. ಈ ವಾರ (ಜುಲೈ 5) ‘ಕಾಗದ’ ಸಿನಿಮಾ ಬಿಡುಗಡೆ ಆಗುತ್ತಿದೆ. ಅರುಣ್ ಕುಮಾರ್ ಆಂಜನೇಯ ಅವರು ಈ ಸಿನಿಮಾವನ್ನು ನಿರ್ಮಿಸಿದಾರೆ. ರಂಜಿತ್ ಅವರು ನಿರ್ದೇಶನ ಮಾಡಿದ್ದಾರೆ. ಮೊಬೈಲ್ ಬರುವುದಕ್ಕೂ ಮುನ್ನ ಜನರು ಕಾಗದ ಬರೆಯುತ್ತಿದ್ದರು. ಆ ಕಾಲದ ಪ್ರೇಮಕಥೆ ‘ಕಾಗದ’ ಸಿನಿಮಾದಲ್ಲಿದೆ. 2005ರ ಸಂದರ್ಭದ ಕಹಾನಿಯೂ ಈ ಸಿನಿಮಾದಲ್ಲಿದೆ. ನಿರ್ಮಾಪಕರ ಪುತ್ರ, ಹೊಸ ನಟ ಆದಿತ್ಯ ಅವರು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಬಾಲನಟಿಯಾಗಿ ಗುರುತಿಸಿಕೊಂಡ ಅಂಕಿತಾ ಜಯರಾಂ ಅವರು ‘ಕಾಗದ’ ಸಿನಿಮಾಗೆ ನಾಯಕಿ ಆಗಿದ್ದಾರೆ.
ಎರಡು ಹಳ್ಳಿಗಳ ನಡುವಿನ ವೈಷಮ್ಯದ ಮಧ್ಯೆಯೂ ಅರಳಿದ ಪ್ರೇಮಕಥೆ ‘ಕಾಗದ’ ಸಿನಿಮಾದಲ್ಲಿ ಇರಲಿದೆ. ಆದಿತ್ಯ ಹಾಗೂ ಅಂಕಿತಾ ಜೊತೆ ನಟಿ ನೇಹಾ ಪಾಟೀಲ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜ್ವಾಡಿ, ಮಠ ಕೊಪ್ಪಳ, ನೀನಾಸಂ ಅಶ್ವತ್ಥ್, ಶಿವಮಂಜು ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ಅಭಿನಯ ಕಲಿತು, ಕಿರುಚಿತ್ರ ಮತ್ತು ನಾಟಕಗಳಲ್ಲಿ ನಟಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಸಿನಿಮಾ’ ಎಂದು ಆದಿತ್ಯ ಹೇಳಿದ್ದಾರೆ.
ಚಿತ್ರದಲ್ಲಿ 4 ಹಾಡುಗಳಿದ್ದು, ಪ್ರದೀಪ್ ವರ್ಮಾ ಸಂಗೀತ ನಿರ್ದೇಶನ ಮಾಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಅವರ ಛಾಯಾಗ್ರಹಣ ಈ ಸಿನಿಮಾಗೆ ಇದೆ. ಪವನ್ ಗೌಡ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ‘ಕಾಗದ’ ಸಿನಿಮಾದ ಟ್ರೇಲರ್ ನೋಡಿದ ರಮೇಶ್ ಅರವಿಂದ್, ಧ್ರುವ ಸರ್ಜಾ, ಅನು ಪ್ರಭಾಕರ್, ಎ.ಪಿ. ಅರ್ಜುನ್ ಮುಂತಾದವರು ಮೆಚ್ಚುಗೆ ಸೂಚಿಸಿದ್ದಾರೆ. ಜಂಕಾರ್ ಮ್ಯೂಸಿಕ್ನಲ್ಲಿ ಈ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆ ಆಗಿವೆ.
ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾಗೆ ‘ಕೆಜಿಎಫ್’ ಸೂತ್ರ ಪಾಲಿಸುವ ಯಶ್? ಕಥೆ ಬಗ್ಗೆ ಸಿಕ್ತು ಸುಳಿವು
ನಿರ್ಮಾಪಕ ಅರುಣ್ ಕುಮಾರ್ ಅವರು ಈ ಮೊದಲು ‘ರಗಡ್’ ಸಿನಿಮಾ ನಿರ್ಮಿಸಿದ್ದರು. ಈಗ ಮಗನಿಗಾಗಿ ‘ಕಾಗದ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಈ ಸಿನಿಮಾದಲ್ಲಿ ಯಾವುದೇ ಧರ್ಮದ ಭಾವನೆಗಳಿಗ ಧಕ್ಕೆ ಉಂಟುಮಾಡುವ ದೃಶ್ಯಗಳನ್ನು ನಾವು ತೋರಿಸಿಲ್ಲ. ಮನುಷ್ಯತ್ವವೇ ಎಲ್ಲಕ್ಕಿಂತ ಮುಖ್ಯ ಎನ್ನುವ ಸಂದೇಶ ನೀಡಿದ್ದೇವೆ. ನನ್ನ ಮಗ ಆದಿತ್ಯ ಈ ಸಿನಿಮಾದ ಮೂಲಕ ಹೀರೋ ಆಗಿ ಪರಿಚಯಗೊಳ್ಳುತ್ತಿದ್ದಾನೆ’ ಎಂದು ನಿರ್ಮಾಪಕ ಅರುಣ್ ಕುಮಾರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.