ಕೆಮಿಸ್ಟ್ರಿ ಟೀಚರ್​ ಆಗಿ ಚಂದನವನಕ್ಕೆ ಬಂದ ಅಪ್ಸರ ರಾಣಿ; ಹುಡುಗರಿಗೆ ಕನ್​ಫ್ಯೂಷನ್​

|

Updated on: Jul 08, 2024 | 9:59 PM

‘ಮುದುಡಿದ ಎಲೆಗಳು’ ಸಿನಿಮಾದಲ್ಲಿ ಅಪ್ಸರ ರಾಣಿ ನಟಿಸಿದ್ದಾರೆ. ರಂಜಿತ್ ಕುಮಾರ್ ಅವರು ಈ ಸಿನಿಮಾದ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಪಂಕಜ್ ನಾರಾಯಣ್, ನಿಖಿತಾ ಸ್ವಾಮಿ, ಪಾವನ ಗೌಡ, ಪ್ರೀತಿ, ಸೂರ್ಯದರ್ಶನ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಅಪ್ಸರ ರಾಣಿ ಮಾತ್ರವಲ್ಲದೇ ಹರ್ಷಿಕಾ ಪೂಣಚ್ಚ, ಭವ್ಯ, ರಮೇಶ್ ಭಟ್, ಶೋಭರಾಜ್, ಪೂನಂ ಪಾಂಡೆ, ಶಂಕರ್ ಅಶ್ವತ್ಥ್, ಪದ್ಮಾ ವಾಸಂತಿ, ಜೋಸೈಮನ್ ಮುಂತಾದವರು ಕೂಡ ವಿಶೇಷ ಪಾತ್ರಗಳನ್ನು ಮಾಡಿದ್ದಾರೆ.

ಕೆಮಿಸ್ಟ್ರಿ ಟೀಚರ್​ ಆಗಿ ಚಂದನವನಕ್ಕೆ ಬಂದ ಅಪ್ಸರ ರಾಣಿ; ಹುಡುಗರಿಗೆ ಕನ್​ಫ್ಯೂಷನ್​
ಅಪ್ಸರ ರಾಣಿ
Follow us on

ನಟಿ ಅಪ್ಸರ ರಾಣಿ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದಿ ಮತ್ತು ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ತಮ್ಮ ಛಾಪು ಮೂಡಿಸಿದ್ದಾರೆ. ಗ್ಲಾಮರಸ್​ ಪ್ರಾತ್ರಗಳಿಂದಲೇ ಅವರು ಮಿಂಚಿದ್ದು ಹೆಚ್ಚು. ಈ ಮೊದಲು ರಾಮ್ ಗೋಪಾಲ್ ವರ್ಮ ಅವರ ‘ಡೇಂಜರಸ್’ ಸಿನಿಮಾ ಮೂಲಕ ಅಪ್ಸರ ರಾಣಿ ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತ್ತು. ಈ ಅವರು ಇದೇ ಮೊದಲ ಬಾರಿಗೆ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಎಂ. ಶಂಕರ್ ಅವರು ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿರುವ ‘ಮುದುಡಿದ ಎಲೆಗಳು’ ಸಿನಿಮಾದಲ್ಲಿ ಅಪ್ಸರ ರಾಣಿ ಅವರು ಅತಿಥಿ ಪಾತ್ರ ಮಾಡಿದ್ದಾರೆ.

‘ಮುದುಡಿದ ಎಲೆಗಳು’ ಸಿನಿಮಾದಲ್ಲಿ ಅಪ್ಸರ ರಾಣಿ ಅವರು ನಟಿಸಿದ ಹಾಡಿನ ಚಿತ್ರೀಕರಣವನ್ನು ಇತ್ತೀಚಿಗೆ ನಡೆಸಲಾಯಿತು. ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ಅದ್ದೂರಿಯಾಗಿ ಈ ಶೂಟಿಂಗ್​ ಮಾಡಲಾಯಿತು. ಐಷಾರಾಮಿ ಕಾರಿನಲ್ಲಿ ಕಾಲೇಜಿಗೆ ಹುಡುಗಿ ಬರುತ್ತಾಳೆ. ಅವಳ ಸೌಂದರ್ಯ ಮತ್ತು ಸ್ಟೈಲ್ ಕಂಡು ಕಾಲೇಜು ಹುಡುಗರು ಫಿದಾ ಆಗುತ್ತಾರೆ. ಹೊಸದಾಗಿ ಕಾಲೇಜಿಗೆ ಬಂದ ಹುಡುಗಿ ಇರಬಹುದು ಅಂತ ಹುಡುಗರು ಕನ್​ಫ್ಯೂಸ್ ಆಗುತ್ತಾರೆ. ಆದರೆ ಆಕೆ ವಿದ್ಯಾರ್ಥಿನಿ ಅಲ್ಲ. ಬಂದಿರುವ ಸುಂದರಿ ಕೆಮಿಸ್ಟ್ರಿ ಟೀಚರ್ ಅಂತ ಗೊತ್ತಾಗುತ್ತದೆ ಎಲ್ಲರಿಗೂ ಅಚ್ಚರಿ. ಈ ರೀತಿಯಲ್ಲಿ ಹಾಡು ಮೂಡಿಬರುತ್ತಿದೆ.

ಭಜರಂಗಿ ಮೋಹನ್ ಅವರು ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡಿನಲ್ಲಿ ರಂಜಿತ್ ಕುಮಾರ್, ಪಂಕಜ್ ನಾರಾಯಣ್ ಮತ್ತು ಅಪ್ಸರ ರಾಣಿ ಅವರು ನಟಿಸಿದ್ದಾರೆ. ‘ಮುದುಡಿದ ಎಲೆಗಳು’ ಸಿನಿಮಾಗೆ ಈಗಾಗಲೇ ಶೇಕಡ 90ರಷ್ಟು ಶೂಟಿಂಗ್​ ಪೂರ್ಣಗೊಂಡಿದೆ. ಕೆಲವು ಭಾಗಗಳ ಚಿತ್ರೀಕರಣವಷ್ಟೇ ಬಾಕಿ ಉಳಿದುಕೊಂಡಿದೆ. ಒಂದು ಸಾಂಗ್​ ಶೂಟಿಂಗ್​ ಕಾಶ್ಮೀರದಲ್ಲಿ ಮಾಡಲಾಗಿದೆ. ತಜಿಕಿಸ್ತಾನದಲ್ಲಿ ಮತ್ತೊಂದು ಹಾಡಿನ ಚಿತ್ರೀಕರಣ ನಡೆಯಲಿದೆ.

ಇದನ್ನೂ ಓದಿ: ‘ಡೇಂಜರಸ್​’ ಹುಡುಗಿಯರನ್ನು ಬೆಂಗಳೂರಿಗೆ ಕರೆತಂದು ಪರಿಚಯ ಮಾಡಿಸಿದ ರಾಮ್​ ಗೋಪಾಲ್ ವರ್ಮಾ

ನಿರ್ದೇಶಕ ಎಂ. ಶಂಕರ್ ಅವರೇ ‘ರಿಯೋ ಪ್ರೊಡಕ್ಷನ್ ಫಿಲ್ಮ್ಸ್​’ ಬ್ಯಾನರ್ ಮೂಲಕ ‘ಮುದುಡಿದ ಎಲೆಗಳು’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಅವರೇ ಕಥೆ, ಚಿತ್ರಕಥೆ, ಹಾಗೂ ಸಂಭಾಷಣೆ ಬರೆದಿದ್ದಾರೆ. ರಂಜನಿ ಅವರು ಈ ಸಿನಿಮಾದ ಸಹ-ನಿರ್ಮಾಪಕಿ ಆಗಿದ್ದಾರೆ. ವಿಕಾಸ್ ವಸಿಷ್ಠ ಅವರು ಸಂಗೀತ ನೀಡಿದ್ದಾರೆ. ಶ್ಯಾಮ್ ಸಿಂಧನೂರು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.