ಗೌರಿ ಶಂಕರ್ ನಟನೆಯ, ರಾಜ್ಗುರು ನಿರ್ದೇಶನದ ‘ಕೆರೆಬೇಟೆ’ (Kerebete) ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಒಂದಷ್ಟು ಕಾರಣಗಳಿಂದಾಗಿ ಈ ಸಿನಿಮಾ ಸುದ್ದಿ ಆಗುತ್ತಿದೆ. ‘ಕೆರೆಬೇಟೆ’ ಸಿನಿಮಾದ ಟ್ರೇಲರ್, ಟೀಸರ್ ಹಾಗೂ ರೊಮ್ಯಾಂಟಿಕ್ ಸಾಂಗ್ ಈಗಾಗಲೇ ಬಿಡುಗಡೆಯಾಗಿ ಸದ್ದು ಮಾಡಿದೆ. ಈಗ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿ ಮತ್ತೊಂದು ಹಾಡು ಬಿಡುಗಡೆ ಮಾಡಲಾಗಿದೆ. ‘ಕೆರೆಬೇಟೆ’ ಸಿನಿಮಾದಿಂದ ಶೀರ್ಷಿಕೆ ಗೀತೆ ರಿಲೀಸ್ ಆಗಿದೆ. ವಿಶೇಷ ಏನೆಂದರೆ, ಬಿ.ವೈ. ರಾಘವೇಂದ್ರ (BY Raghavendra) ಹಾಗೂ ಆರಗ ಜ್ಞಾನೇಂದ್ರ (Araga Jnanendra) ಅವರು ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಅದ್ದೂರಿಯಾಗಿ ‘ಕೆರೆಬೇಟೆ’ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಮಲೆನಾಡಿನ ಕುರಿತ ಕಥೆ ಇದೆ. ಹಾಗಾಗಿ ಶಿವಮೊಗ್ಗದಲ್ಲಿ ಹೊಸ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷ.
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಪ್ರಮೋದ್ ಮರವಂತೆ ಅವರು ‘ಕೆರಿಬ್ಯಾಟಿ ಶುರುವಾತು…’ ಎಂಬ ಈ ಹಾಡನ್ನು ಬರೆದಿದ್ದಾರೆ. ಗಗನ್ ಬಡೇರಿಯಾ ಅವರು ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕರಿಬಸವ ತಡಕಲ್ ಅವರ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ‘ಕೆರೆಬೇಟೆ’ ಸಿನಿಮಾ ಈ ಗೀತೆಯನ್ನು ಕೇಳಿ ಆರಗ ಜ್ಞಾನೇಂದ್ರ ಮತ್ತು ಬಿ.ವೈ. ರಾಘವೇಂದ್ರ ಅವರು ಮೆಚ್ಚುಗೆ ಸೂಚಿಸಿದರು. ಬಳಿಕ ಶುಭ ಕೋರಿದರು.
ಇದನ್ನೂ ಓದಿ: ಮಲೆನಾಡಿನ ಕಥೆಯ ಝಲಕ್ ತೋರಿಸಿದ ‘ಕೆರೆಬೇಟೆ’ ಟ್ರೇಲರ್; ಮಾ.15ಕ್ಕೆ ಸಿನಿಮಾ ಬಿಡುಗಡೆ
ಹಾಡು ಬಿಡುಗಡೆ ಆದ ಬಳಿಕ ಮಾತನಾಡಿದ ಬಿ.ವೈ. ರಾಘವೇಂದ್ರ ಅವರು ‘ಈ ಚಿತ್ರ ಸಂಪೂರ್ಣವಾಗಿ ಮಲೆನಾಡಿನ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಅಲ್ಲದೇ, ಮಲೆನಾಡಿನವರೇ ಸೇರಿಕೊಂಡು ಈ ಸಿನಿಮಾವನ್ನು ಮಾಡಿದ್ದಾರೆ. ಮಲೆನಾಡಿನ ಪರಿಸರದ ಸೌಂದರ್ಯವನ್ನು ಬಹಳ ಸುಂದರವಾಗಿ ತೋರಿಸಲಾಗಿದೆ. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಹೇಳಿದರು.
ಇದನ್ನೂ ಓದಿ: ‘ಕೆರೆಬೇಟೆ’ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್ ಮಾಡಿದ ಉಪೇಂದ್ರ
ಆರಗ ಜ್ಞಾನೇಂದ್ರ ಅವರು ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ಮಲೆನಾಡ ಸಂಸ್ಕೃತಿ ಕಣ್ಮರೆ ಆಗುತ್ತಿದೆ. ಹಲವು ಪದ್ಧತಿಗಳು ಮರೆಯಾಗಿವೆ. ಈಗ ಕೆರೆಬೇಟೆ ಸಂಸ್ಕೃತಿ ಕುರಿತು ಸಿನಿಮಾ ಮಾಡಿರುವುದು ಬಹಳ ಖುಷಿ ಆಗುತ್ತದೆ. ಟ್ರೇಲರ್ ಹಾಗೂ ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ಹೀರೋ, ನಿರ್ಮಾಪಕ, ನಿರ್ದೇಶಕ ಸೇರಿದಂತೆ ಈ ಚಿತ್ರತಂಡದಲ್ಲಿ ಎಲ್ಲರೂ ಮಲೆನಾಡಿನವರೇ ಎಂಬುದು ಖುಷಿಯ ಸಂಗತಿ. ಈ ಸಿನಿಮಾ ಎಲ್ಲ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನವಾಗಲಿ’ ಎಂದು ಹಾರೈಸಿದರು.
‘ಜನಮನ ಸಿನಿಮಾಸ್’ ಸಂಸ್ಥೆಯ ಮೂಲಕ ಮೂಡಿಬಂದಿರುವ ಈ ಸಿನಿಮಾ ಮಾರ್ಚ್ 15ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರಕ್ಕಾಗಿ ‘ಕೆರೆಬೇಟೆ’ ತಂಡದವರು ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ನಿಜವಾದ ಕೆರೆಬೇಟೆ ಆಟಗಾರರು ಕೂಣಿ ಹಿಡಿದು ಎಲ್ಲ ಜಿಲ್ಲೆಗಳಲ್ಲಿ ಬೈಕ್ ರ‍್ಯಾಲಿ ಹೊರಡಲಿದ್ದಾರೆ. ಹಾಡಿನ ಬಿಡುಗಡೆ ಬಳಿಕ ರ‍್ಯಾಲಿಗೆ ಚಾಲನೆ ನೀಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.