ಶ್ರೀಮುರಳಿ ನಟನೆಯ ‘ಬಘೀರ’ ಚಿತ್ರವು ದೀಪಾವಳಿ ಪ್ರಯುಕ್ತ ಅಕ್ಟೋಬರ್ 31ರಂದು ರಿಲೀಸ್ ಆಯಿತು. ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಎಲ್ಲರೂ ಮುಗಿಬಿದ್ದು ಸಿನಿಮಾನ ವೀಕ್ಷಣೆ ಮಾಡುತ್ತಿದ್ದಾರೆ. ದೀಪಾವಳಿ ಹಬ್ಬದ ರಜೆಗಳು ಚಿತ್ರದ ಗಳಿಕೆಯನ್ನು ಹೆಚ್ಚಿಸುವಲ್ಲಿ ಸಹಕಾರಿ ಆಗುತ್ತಿದೆ. ಮೊದಲ ದಿನಕ್ಕಿಂತ ಎರಡನೇ ದಿನ ಚಿತ್ರವು ಉತ್ತಮ ಗಳಿಕೆ ಮಾಡಿದೆ. ಆ ಬಗ್ಗೆ ಇಲ್ಲಿ ನಾವು ಹೇಳುತ್ತಿದ್ದೇವೆ.
‘ಬಘೀರ’ ಚಿತ್ರ ಶ್ರೀಮುರಳಿ ನಟನೆಯ ಕನ್ನಡದ ಸಿನಿಮಾ. ಈ ಚಿತ್ರಕ್ಕೆ ಡಾ. ಸೂರಿ ಅವರ ನಿರ್ದೇಶನ ಇದೆ. ‘ಕೆಜಿಎಫ್’, ‘ಕೆಜಿಎಫ್ 2’, ‘ಕಾಂತಾರ’ ರೀತಿಯ ಸಿನಿಮಾಗಳನ್ನು ನಿರ್ಮಿಸಿದ ‘ಹೊಂಬಾಳೆ ಫಿಲ್ಮ್ಸ್’ ಈ ಚಿತ್ರವನ್ನು ನಿರ್ಮಾಣ ಮಾಡಿದೆ ಎಂಬ ಕಾರಣಕ್ಕೂ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿತ್ತು. ಈ ನಿರೀಕ್ಷೆಯನ್ನು ಸಿನಿಮಾ ತಲುಪಿದೆ.
‘ಬಘೀರ’ ಸಿನಿಮಾ ಮೊದಲ ದಿನ 3.25 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದರಲ್ಲಿ ಕನ್ನಡದ್ದು 2.55 ಕೋಟಿ ರೂಪಾಯಿ ಆದರೆ, ಉಳಿದ ಮೊತ್ತ ತೆಲುಗು ವರ್ಷನ್ನಿಂದ ಹರಿದು ಬಂದಿತ್ತು. ಎರಡನೇ ದಿನ ಚಿತ್ರ 3.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ಹೇಳಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 6.30 ಕೋಟಿ ರೂಪಾಯಿ ಆಗಿದೆ.
ಸದ್ಯ ಎರಡನೇ ದಿನ ಕಲೆಕ್ಷನ್ ದೊರೆತಿರೋದು ಕನ್ನಡದ ವರ್ಷನ್ನಿಂದ ಮಾತ್ರ ಎಂದು ಹೇಳಲಾಗುತ್ತಿದೆ. ತೆಲುಗು ಕಲೆಕ್ಷನ್ ಸೇರಿದರೆ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಲಿದೆ. ಈ ಚಿತ್ರದಿಂದ ನಟ ಶ್ರೀಮುರಳಿ ಅವರಿಗೆ ದೊಡ್ಡ ಗೆಲುವು ಸಿಕ್ಕಂತೆ ಆಗಿದೆ.
2019ರಲ್ಲಿ ರಿಲೀಸ್ ಆದ ‘ಭರಾಟೆ’ ವಿಫಲತೆ ಕಂಡಿತು. 2021ರಲ್ಲಿ ‘ಮದಗಜ’ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಈ ಎಲ್ಲಾ ಕಾರಣಕ್ಕೆ ಶ್ರೀಮುರಳಿ ಅವರಿಗೆ ಒಂದು ದೊಡ್ಡ ಗೆಲುವಿನ ಅವಶ್ಯಕತೆ ಇತ್ತು. ಅದು ಪೂರ್ಣಗೊಂಡಿದೆ. ‘ಬಘೀರ’ ಚಿತ್ರದಿಂದ ಅವರು ಗೆಲುವಿನ ನಗೆ ಬೀರಿದ್ದಾರೆ.
ಇದನ್ನೂ ಓದಿ: Bagheera Review: ಸೂಪರ್ ಹೀರೋ ಆದ ಶ್ರೀಮುರಳಿ; ‘ಬಘೀರ’ ಚಿತ್ರದಲ್ಲಿ ಬ್ಯಾಟ್ಮ್ಯಾನ್ ರೀತಿಯ ಕಥೆ
ಇಂದು (ನವೆಂಬರ್ 2) ಹಾಗೂ ನಾಳೆ (ಡಿಸೆಂಬರ್ 3) ಚಿತ್ರ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಹಬ್ಬ ಹಾಗೂ ವೀಕೆಂಡ್ ಕಾರಣದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಣೆ ಮಾಡುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ಕಥೆ ಬರೆದಿದ್ದು ಪ್ರಶಾಂತ್ ನೀಲ್ ಅವರು. ಪ್ರಶಾಂತ್ ನೀಲ್ಗೆ ತೆಲುಗಿನಲ್ಲಿ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ, ಅಲ್ಲಿನವರು ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.