AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bagheera Review: ಸೂಪರ್ ಹೀರೋ ಆದ ಶ್ರೀಮುರಳಿ; ‘ಬಘೀರ’ ಚಿತ್ರದಲ್ಲಿ ಬ್ಯಾಟ್​ಮ್ಯಾನ್ ರೀತಿಯ ಕಥೆ

ದೀಪಾವಳಿ ಹಬ್ಬದ ಪ್ರಯುಕ್ತ ‘ಬಘೀರ’ ಸಿನಿಮಾ ತೆರೆಕಂಡಿದೆ. ನಟ ಶ್ರೀಮುರಳಿ ಅವರು ಈ ಸಿನಿಮಾದಲ್ಲಿ ಸೂಪರ್​ ಹೀರೋ ರೀತಿಯ ಪಾತ್ರ ಮಾಡಿದ್ದಾರೆ. ಅವರ ವೃತ್ತಿಜೀವನದಲ್ಲಿ ಒಂದು ಡಿಫರೆಂಟ್​ ಸಿನಿಮಾವಾಗಿ ‘ಬಘೀರ’ ಮೂಡಿಬಂದಿದೆ. ಡಾ. ಸೂರಿ ನಿರ್ದೇಶನ ಮಾಡಿರುವ ಈ ಸಿನಿಮಾದ ವಿಮರ್ಶೆ ಇಲ್ಲಿದೆ ಓದಿ..

Bagheera Review: ಸೂಪರ್ ಹೀರೋ ಆದ ಶ್ರೀಮುರಳಿ; ‘ಬಘೀರ’ ಚಿತ್ರದಲ್ಲಿ ಬ್ಯಾಟ್​ಮ್ಯಾನ್ ರೀತಿಯ ಕಥೆ
ಶ್ರೀಮುರಳಿ
ಮದನ್​ ಕುಮಾರ್​
|

Updated on: Oct 31, 2024 | 2:44 PM

Share

ಸಿನಿಮಾ: ಬಘೀರ. ನಿರ್ಮಾಣ: ವಿಜಯ್ ಕಿರಗಂದೂರು. ನಿರ್ದೇಶನ: ಡಾ. ಸೂರಿ. ಪಾತ್ರವರ್ಗ: ಶ್ರೀಮುರಳಿ, ರುಕ್ಮಿಣಿ ವಸಂತ್, ಗರುಡ ರಾಮ್, ಪ್ರಕಾಶ್​ ರಾಜ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ ಮುಂತಾದವರು. ಸ್ಟಾರ್​ 3.5/5

ಲವ್​​ಸ್ಟೋರಿ ಮತ್ತು ಆ್ಯಕ್ಷನ್​ ಎರಡೂ ಬಗೆಯ ಸಿನಿಮಾಗಳಿಗೆ ಸೂಕ್ತವಾಗುವಂತಹ ಕಲಾವಿದ ಶ್ರೀಮುರಳಿ. ಆದರೆ ‘ಉಗ್ರಂ’ ಯಶಸ್ಸಿನ ಬಳಿಕ ಅವರು ಆ್ಯಕ್ಷನ್​ ಪ್ರಧಾನ ಸಿನಿಮಾಗಳ ಕಡೆಗೆ ಹೆಚ್ಚು ಒತ್ತು ನೀಡಿದ್ದರು. ಹಾಗಿದ್ದರೂ ಕೂಡ ಅವರಿಗೆ ನಿರೀಕ್ಷಿತ ಪ್ರಮಾಣದ ಆ್ಯಕ್ಷನ್​ ಇರುವಂತಹ ಸ್ಕ್ರಿಪ್ಟ್ ಮತ್ತು ಪಾತ್ರ ಸಿಕ್ಕಿರಲಿಲ್ಲ. ಈಗ ಆ ಕೊರತೆಯನ್ನು ನೀಗಿಸುವ ರೀತಿಯಲ್ಲಿ ‘ಬಘೀರ’ ಸಿನಿಮಾ ಮೂಡಿಬಂದಿದೆ. ಈ ಸಿನಿಮಾಗೆ ಪ್ರಶಾಂತ್ ನೀಲ್ ಅವರು ಕಥೆ ಬರೆದಿದ್ದಾರೆ. ಆ ಕಥೆಗೆ ನಿರ್ದೇಶಕ ಡಾ. ಸೂರಿ ಅವರು ಸಿನಿಮಾದ ರೂಪ ನೀಡಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ಎಂದು ತಿಳಿಯಲು ಈ ವಿಮರ್ಶೆ ಓದಿ..

ಕನ್ನಡದಲ್ಲಿ ಸೂಪರ್​ ಹೀರೋ ರೀತಿಯ ಸಿನಿಮಾಗಳ ಸಂಖ್ಯೆ ಕಡಿಮೆ. ‘ಬಘೀರ’ ಸಿನಿಮಾದಲ್ಲಿ ಸೂಪರ್​ ಹೀರೋ ಕಥೆ ಇದೆ. ಜನರೆಲ್ಲ ಕಷ್ಟದಲ್ಲಿ ಇದ್ದಾಗ ಅವರನ್ನು ಕಾಪಾಡಲು ಬರುವ ಆಪದ್ಭಾಂದವನ ರೀತಿ ಇದೆ ‘ಬಘೀರ’ ಸಿನಿಮಾದ ಕಥಾನಾಯಕನ ಪಾತ್ರ. ಹಾಗಂತ ಈ ಪಾತ್ರ ಸ್ಪೈಡರ್​ ಮ್ಯಾನ್​ ರೀತಿ ವಿಶೇಷ ಶಕ್ತಿಯುಳ್ಳ ಸೂಪರ್ ಹೀರೋ ಅಲ್ಲ. ಬದಲಿಗೆ, ಬ್ಯಾಟ್​ಮ್ಯಾನ್ ರೀತಿ ಕೆಲವು ಸಾಧನಗಳನ್ನು ಬಳಸಿಕೊಂಡು ಜನರನ್ನು ಕಾಪಾಡುವ ಸೂಪರ್​ ಹೀರೋ. ಈತ ಜನರ ನಡುವೆ ಇರುವ ವ್ಯಕ್ತಿ. ಆತನಿಗೆ ಶಕ್ತಿಗಿಂತಲೂ ಜಾಸ್ತಿ ಇತಿ-ಮಿತಿಗಳು ಇರುತ್ತವೆ. ಅಂತಹ ಪಾತ್ರವನ್ನು ಇಟ್ಟುಕೊಂಡು ಸೂಪರ್​ ಹೀರೋ ಕಥೆ ಹೆಣೆಯುವುದು ಸವಾಲಿನ ಕೆಲಸ. ಅದನ್ನು ಪ್ರಶಾಂತ್ ನೀಲ್ ಮಾಡಿದ್ದಾರೆ.

ಶ್ರೀಮುರಳಿ ಅವರು ತಮ್ಮ ಮ್ಯಾನರಿಸಂ ಅನ್ನು ಸಂಪೂರ್ಣ ಬಿಟ್ಟುಕೊಟ್ಟಿಲ್ಲ. ಅದನ್ನು ಜೊತೆಯಲ್ಲಿ ಇಟ್ಟುಕೊಂಡೇ ಸ್ವಲ್ಪ ಹೊಸದಾಗಿ ಜನರನ್ನು ರಂಜಿಸಲು ಪ್ರಯತ್ನಿಸಿದ್ದಾರೆ. ಅನಗತ್ಯವಾದ ಬಿಲ್ಡಪ್​ಗಳಿಗೆ ಈ ಸಿನಿಮಾದಲ್ಲಿ ಜಾಗವಿಲ್ಲ. ಅದರ ಬದಲು ನೇರವಾಗಿ ಕಥೆ ಹೇಳಲು ನಿರ್ದೇಶಕರು ಹೆಚ್ಚು ಒತ್ತು ನೀಡಿದ್ದಾರೆ. ಯಾವುದೇ ಉದ್ದುದ್ದ ಡೈಲಾಗ್​ಗಳ ಬದಲು ಆ್ಯಕ್ಷನ್​ ಮೂಲಕವೇ ಶ್ರೀಮುರಳಿ ಅವರು ವಿಲನ್​ಗಳಿಗೆ ಉತ್ತರ ನೀಡುತ್ತಾರೆ. ಸ್ವಲ್ಪ ಸಮಯ ಪೊಲೀಸ್ ಅಧಿಕಾರಿಯಾಗಿ, ಇನ್ನುಳಿದ ಸಮಯ ಸೂಪರ್​ ಹೀರೋ ಆಗಿ ಅವರು ಮನರಂಜನೆ ನೀಡುತ್ತಾರೆ.

ಟ್ರೇಲರ್​ನಲ್ಲಿ ರುಕ್ಮಿಣಿ ವಸಂತ್ ಅವರ ಪಾತ್ರವನ್ನು ನೋಡಿ ಜನರು ಬಗೆಬಗೆಯಲ್ಲಿ ಪ್ರತಿಕ್ರಿಯಿಸಿದ್ದರು. ನಿರೀಕ್ಷೆಯೂ ಜಾಸ್ತಿ ಆಗಿತ್ತು. ಆದರೆ ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ಸೆಕೆಂಡ್​ ಹಾಫ್​ನಲ್ಲಿ ಸ್ವಲ್ಪ ಮಹತ್ವ ಸಿಕ್ಕಿದೆ. ತಮಗೆ ಸಿಕ್ಕಷ್ಟು ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಗರುಡ ರಾಮ್ ಅವರು ಈ ಸಿನಿಮಾದ ಮುಖ್ಯ ವಿಲನ್. ಸೂಪರ್ ಹೀರೋಗೆ ಎದುರಾಗಿ ನಿಲ್ಲುವ ರಾಕ್ಷಸನಾಗಿ ಅವರು ಅಬ್ಬರಿಸಿದ್ದಾರೆ. ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾರಾಣಿ ಅವರಂತಹ ಹಿರಿಯ ಕಲಾವಿದರಿಂದಾಗಿ ಸಿನಿಮಾದ ತೂಕ ಹೆಚ್ಚಿದೆ.

ಇದನ್ನೂ ಓದಿ: Ibbani Tabbida lleyali Review: ಇಬ್ಬನಿಯಂತೆ ತಂಪಾದರೂ ದೀರ್ಘ ಎನಿಸುವ ಎಮೋಷನಲ್ ಪ್ರೇಮಕಥೆ

ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣ ಹಾಗೂ ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ ‘ಬಘೀರ’ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದೆ. ನಿರ್ದೇಶನ ಮಾತ್ರವಲ್ಲದೇ ಡೈಲಾಗ್​ಗಳಿಂದಲೂ ಡಾ. ಸೂರಿ ಅವರು ತಮ್ಮ ಕಸುಬುದಾರಿಕೆ ತೋರಿಸಿದ್ದಾರೆ. ಸಿನಿಮಾದಲ್ಲಿ ಕೆಲವು ಮೈನಸ್ ಅಂಶಗಳು ಕೂಡ ಇವೆ. ಈಗಾಗಲೇ ಹಲವಾರು ಸೂಪರ್ ಹೀರೋ ಸಿನಿಮಾಗಳನ್ನು ನೋಡಿದ ಪ್ರೇಕ್ಷಕರಿಗೆ ‘ಬಘೀರ’ ಸಿನಿಮಾದ ಕಥೆ ಕೊಂಚ ಸಪ್ಪೆ ಎನಿಸಬಹುದು. ಮುಂದಿನ ಟ್ವಿಸ್ಟ್ ಏನು ಎಂಬುದನ್ನು ಕೂಡ ಊಹಿಸಬಹುದು. ಲಾಜಿಕ್ ಬಗ್ಗೆ ಕೇಳುವಂತೆಯೇ ಇಲ್ಲ. ಇಡೀ ಕಥೆ ಮಂಗಳೂರಿನಲ್ಲಿ ನಡೆದರೂ ಸಂಭಾಷಣೆಯ ಶೈಲಿಯಲ್ಲಿ ನೇಟಿವಿಟಿ ಕಾಣಿಸಿಲ್ಲ. ಇಂಥ ಒಂದಷ್ಟು ಮೈನಸ್​ ಅಂಶಗಳನ್ನು ಮರೆಸುವ ರೀತಿಯಲ್ಲಿ ಈ ಸಿನಿಮಾದ ಮೇಕಿಂಗ್ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.