ಕೊರೊನಾದಿಂದ ಅಕ್ಕನನ್ನು ಕಳೆದುಕೊಂಡು ಮರುಗುತ್ತಿರುವ ಬೆಲ್​ ಬಾಟಂ ಸಿನಿಮಾ ನಿರ್ದೇಶಕ ಜಯತೀರ್ಥ

| Updated By: ರಾಜೇಶ್ ದುಗ್ಗುಮನೆ

Updated on: May 07, 2021 | 5:56 PM

ನನಗೆ ಸಾಧ್ಯವಾದಲ್ಲೆಲ್ಲ ರಾತ್ರಿ-ಹಗಲು ಓಡಾಡಿ ಆಕ್ಸಿಜನ್​, ಬೆಡ್​ಗಾಗಿ ಪರದಾಡಿ ಕೊನೆಗೆ ವಿಕ್ಟೋರಿಯಾದಲ್ಲಿ ಬೆಡ್​ ಸಿಗುವಷ್ಟರಲ್ಲಿ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುವ ಚೈತನ್ಯ ಕಳೆದುಕೊಂಡಿತ್ತು ಎಂದು ಜಯತೀರ್ಥ ನೋವು ತೋಡಿಕೊಂಡಿದ್ದಾರೆ.

ಕೊರೊನಾದಿಂದ ಅಕ್ಕನನ್ನು ಕಳೆದುಕೊಂಡು ಮರುಗುತ್ತಿರುವ ಬೆಲ್​ ಬಾಟಂ ಸಿನಿಮಾ ನಿರ್ದೇಶಕ ಜಯತೀರ್ಥ
ಜಯತೀರ್ಥ - ಸಹೋದರಿ ಮನು ಮೋಹನಾಂಬ
Follow us on

ಬೆಂಗಳೂರಿನಲ್ಲಿ ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿದೆ. ಪ್ರತಿದಿನವೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅನೇಕ ಸೆಲೆಬ್ರಿಟಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಸೆಲೆಬ್ರಿಟಿಗಳ ಕುಟುಂಬದವರು ಕೂಡ ನಿಧನ ಹೊಂದುತ್ತಿದ್ದಾರೆ. ತಮ್ಮವರನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಅನೇಕರು ಕಣ್ಣೀರು ಹಾಕುತ್ತಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಜಯತೀರ್ಥ ಕೂಡ ಸಹೋದರಿಯನ್ನು ಕಳೆದುಕೊಂಡು ಮರುಗುತ್ತಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.

‘ಕ್ಷಮಿಸಿ ಅಕ್ಕ. ನನ್ನ ಪ್ರಯತ್ನಗಳಾಚೆಗೂ ನಿಮ್ಮನ್ನು ಉಳಿಸಿಕೊಳ್ಳಲು ಆಗಲಿಲ್ಲ. ಪರಮಮುಗ್ಧರಾದ ನನ್ನಕ್ಕ ಮನು ಮೋಹನಾಂಬ (58). ಇವರನ್ನು ಕೊರೊನಾ ಸೋಂಕಿನಿಂದಾಗಿ ಕಳೆದುಕೊಂಡಿದ್ದೇನೆ. ನನಗೆ ಸಾಧ್ಯವಾದಲ್ಲೆಲ್ಲ ರಾತ್ರಿ-ಹಗಲು ಓಡಾಡಿ ಆಕ್ಸಿಜನ್​, ಬೆಡ್​ಗಾಗಿ ಪರದಾಡಿ ಕೊನೆಗೆ ವಿಕ್ಟೋರಿಯಾದಲ್ಲಿ ಬೆಡ್​ ಸಿಗುವಷ್ಟರಲ್ಲಿ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುವ ಚೈತನ್ಯ ಕಳೆದುಕೊಂಡಿತ್ತು’ ಎಂದು ನೋವಿನಿಂದ ಪೋಸ್ಟ್​ ಮಾಡಿದ್ದಾರೆ ಜಯತೀರ್ಥ.

‘ಈ ಪರದಾಟ, ಆತಂಕ, ಟೆನ್ಷನ್​ ಯಾರಿಗೂ ಬೇಡ. ದಯವಿಟ್ಟು ಸೇಫ್​ ಆಗಿರಿ. ಇಷ್ಟೆಲ್ಲದರ ನಂತರ ನನಗೆ ಅನಿಸಿದ್ದು ವಾರ್​ ರೂಮ್​ನಿಂದ ಹಿಡಿದು ಆ್ಯಂಬುಲೆನ್ಸ್​ ಡ್ರೈವರ್​, ಕೊವಿಡ್ ಸೆಂಡರ್​ನ ವಾಲಂಟಿಯರ್ಸ್​, ಆಸ್ಪತ್ರೆಯ ಸಿಬ್ಬಂದಿಗಳು, ವೈದ್ಯರು, ಚಿತಾಗಾರದ ಸಿಬ್ಬಂದಿಗಳೆಲ್ಲರೂ ದಿನದ 16-18 ಘಂಟೆಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಯಾರನ್ನೂ ನಿಂದಿಸಬೇಡಿ’ ಎಂದು ಜಯತೀರ್ಥ ಹೇಳಿದ್ದಾರೆ.

‘ಈ ವಿಷಮ ಪರಿಸ್ಥಿತಿಯನ್ನು ಎಲ್ಲರೂ ಕೂಡಿ ಹಿಮ್ಮೆಟ್ಟಿಸಬೇಕಿದೆ. ಪ್ರಭಾವಿಗಳು, ರಾಜಕಾರಣಿಗಳು ಸಮರೋತ್ಸಾಹದಲ್ಲಿ ಕೆಲಸ ಮಾಡುತ್ತಿರುವವರಿಗೆ ಕಿರುಕುಳ ಕೊಡುತ್ತಿದ್ದಾರೆ. ಸರ್ಕಾರ ಮುನ್ನೆಚ್ಚರಿಕೆ ವಹಿಸಿದ್ದರೆ ಸಂಭವಿಸುತ್ತಿರುವ ಸಾವುಗಳನ್ನು ತಡೆಯಬಹುದಿತ್ತು. ಆದರೆ ದೂಷಣೆ, ನಿಂದನೆಗೆ ಇದು ಸಮಯವಲ್ಲ. ದಯವಿಟ್ಟು ಜಾಗರೂಕರಾಗಿರಿ’ ಎಂದು ಜಯತೀರ್ಥ ಮನವಿ ಮಾಡಿಕೊಂಡಿದ್ದಾರೆ.

ಪ್ರತಿದಿನ ಚಿತ್ರರಂಗದ ಅನೇಕರು ಕೊವಿಡ್​ಗೆ ಬಲಿಯಾಗುತ್ತಿದ್ದಾರೆ. ಶಂಕನಾದ ಅರವಿಂದ್​, ತಮಿಳು ನಟ ಪಾಂಡು, ನಿರ್ದೇಶಕ ಕೆ.ವಿ. ಆನಂದ್, ಕನ್ನಡದ ಖ್ಯಾತ ನಿರ್ಮಾಪಕ ಕೋಟಿ ರಾಮು, ಯುವ ನಟ-ನಿರ್ಮಾಪಕ ಡಿ.ಎಸ್​. ಮಂಜುನಾಥ್​, ಕಾರ್ಯಕಾರಿ ನಿರ್ಮಾಪಕ ರಾಜಶೇಖರ್​, ಪೋಸ್ಟರ್​ ಡಿಸೈನರ್​ ಮಸ್ತಾನ್​, ಪುಟ್ಟಣ್ಣ ಕಣಗಾಲ್ ಪುತ್ರ ರಾಮು, ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ, ಮರಾಠಿಯ ಖ್ಯಾತ ನಟಿ ಅಭಿಲಾಷಾ ಪಾಟಿಲ್ ಸೇರಿದಂತೆ ಅನೇಕರು ಈ ಮಹಾಮಾರಿಗೆ ಬಲಿ ಆಗಿದ್ದಾರೆ.

ಇದನ್ನೂ ಓದಿ:

ಛಿಛೋರೆ ಸಿನಿಮಾ ನಟಿ ಅಭಿಲಾಷಾ ಪಾಟಿಲ್​ ಕೊರೊನಾ ವೈರಸ್​ಗೆ ಬಲಿ

ತಲೆ ಬಾಗಿ ಕ್ಷಮೆ ಕೋರುವೆ; ರಾಮು ನಿಧನದ ಬಗ್ಗೆ ಮಾಲಾಶ್ರೀಗೆ ಜಗ್ಗೇಶ್​ ಹೀಗೆ ಹೇಳಿದ್ದೇಕೆ?