ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರು ಚಿತ್ರರಂಗದವರ ಬಗ್ಗೆ ವ್ಯಕ್ತಪಡಿಸಿದ ಸಿಟ್ಟು, ಆಡಿದ ಮಾತುಗಳು ಚರ್ಚೆಗೆ ಕಾರಣವಾಗಿವೆ. ಚಿತ್ರರಂಗದ ಕಾರ್ಯಕ್ರಮಕ್ಕೆ ಚಿತ್ರರಂಗದವರೇ ಬರುವುದಿಲ್ಲ ಎಂದಾದರೆ ನಾವು ಕಾರ್ಯಕ್ರಮ ಏಕೆ ಮಾಡಬೇಕು ಎಂದು ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದರು. ಅಲ್ಲದೆ, ‘ನಿಮ್ಮ ನೆಟ್ಟು ಬೋಲ್ಟು ಹೇಗೆ ಟೈಟ್ ಮಾಡಬೇಕು ಎಂಬುದು ಗೊತ್ತಿದೆ’ ಎಂದು ಎಚ್ಚರಿಕೆ ನೀಡುವ ರೀತಿಯ ಮಾತುಗಳನ್ನಾಡಿದ್ದರು.
ಡಿಕೆ ಶಿವಕುಮಾರ್ ಮಾತಿನ ಬೆನ್ನಲ್ಲೆ, ಕೆಲವು ನಟರು, ನಮಗೆ ಆಹ್ವಾನವೇ ಇರಲಿಲ್ಲ ಎಂದಿದ್ದರು. ಚಲನಚಿತ್ರ ಅಕಾಡೆಮಿ ನಮಗೆ ಆಹ್ವಾನ ನೀಡಿಲ್ಲ ಹಾಗಿದ್ದ ಮೇಲೆ ಕಾರ್ಯಕ್ರಮಕ್ಕೆ ಹೇಗೆ ಬರುವುದು ಎಂದಿದ್ದರು. ಚಲನಚಿತ್ರ ಅಕಾಡೆಮಿಯ ಮೇಲೆ ತಪ್ಪು ಹೊರಿಸಲಾಗುತ್ತಿರುವ ಹೊತ್ತಿನಲ್ಲೇ ಇದೀಗ ಫಿಲಂ ಫೆಸ್ಟ ಆಯೋಜಕರು ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಯಾವ ಯಾವ ನಟ ಮತ್ತು ನಟಿಯರಿಗೆ ಚಿತ್ರೋತ್ಸವಕ್ಕೆ ಆಹ್ವಾನ ನೀಡಲಾಗಿತ್ತು ಎಂಬ ಮಾಹಿತಿ ಹೊರಹಾಕಿದ್ದಾರೆ.
ಕೈಯಲ್ಲಿ ಬರೆದಿರುವ ಪಟ್ಟಿ ಅದಾಗಿದ್ದು, ಯಾರು ಯಾರಿಗೆ ಆಹ್ವಾನ ಪತ್ರಿಕೆ, ಯಾವ ದಿನಾಂಕದಂದು ನೀಡಲಾಗಿದೆ ಎಂಬ ಮಾಹಿತಿ ಇದೆ. ಜೊತೆಗೆ ಯಾರು ಯಾರು ಆಹ್ವಾನ ಪತ್ರಿಕೆಯನ್ನು ವಾಪಸ್ ಮಾಡಿದ್ದಾರೆ. ಯಾವ ಕಾರಣಕ್ಕೆ ಕೆಲವರಿಗೆ ಆಹ್ವಾನ ಪತ್ರಿಕೆ ನೀಡಲಾಗಿಲ್ಲ ಎಂಬ ಮಾಹಿತಿ ಸಹ ಪಟ್ಟಿಯಲ್ಲಿದೆ. ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಪ್ರಮುಖ ನಟ, ನಟಿ ಮತ್ತು ನಿರ್ದೇಶಕರುಗಳ ಹೆಸರಿದೆ. ಸುದೀಪ್ ದರ್ಶನ್, ಗಣೇಶ್, ಡಾಲಿ ಧನಂಜಯ್, ಚಿಕ್ಕಣ್ಣ, ಹಲವಾರು ಮಂದಿ ಹಿರಿಯ ಮತ್ತು ಹೊಸ ನಟಿಯರ ಹೆಸರುಗಳು ಸಹ ಪಟ್ಟಿಯಲ್ಲಿವೆ.
ಇದನ್ನೂ ಓದಿ:ನಟ್ಟು ಬೋಲ್ಟು ಹೇಳಿಕೆ: ಡಿಕೆ ಶಿವಕುಮಾರ್ ಬಳಸಿದ ಭಾಷೆ ಸರಿ ಇಲ್ಲ ಎಂದ ನಾಗಾಭರಣ
ಡಾಲಿ ಧನಂಜಯ್ ಮನೆ ಬದಲಿಸಿದ್ದ ಕಾರಣ ಅವರಿಗೆ ನೀಡಲಾಗಿಲ್ಲ ಎಂಬ ಒಕ್ಕಣೆ ಪಟ್ಟಿಯಲ್ಲಿದೆ. ಮಾನ್ವಿತಾ, ಆಹ್ವಾನವನ್ನು ವಾಪಸ್ ಕಳಿಸಿದ್ದಾರೆ, ಫೋನ್ ರಿಸೀವ್ ಮಾಡಿಲ್ಲ ಎಂಬ ಒಕ್ಕಣೆ ಇದೆ. ನಟ ಚಿಕ್ಕಣ್ಣ ಸಹ ಆಹ್ವಾನವನ್ನು ನಿರಾಕರಿಸಿದ್ದಾರೆ ಎಂಬ ಒಕ್ಕಣೆ ಪಟ್ಟಿಯಲ್ಲಿದೆ. ಅಶೋಕ್ ಅವರು ಸಹ ಆಹ್ವಾನ ಪತ್ರಿಕೆ ವಾಪಸ್ ಕಳಿಸಿದ್ದಾರೆ ಎಂಬ ಒಕ್ಕಣೆ ಇದೆ.
ರವಿಚಂದ್ರನ್, ಶ್ರೀನಾಥ್, ಸುಧಾರಾಣಿ, ಮಾಲಾಶ್ರಿ, ಅನುರಾಧಾ, ಮಾಳವಿಕಾ ಅವಿನಾಶ್, ಅವಿನಾಶ್, ಡಿಂಗ್ರಿ ನಾಗರಾಜ್, ನಿಶ್ವಿಕಾ ನಾಯ್ಡು, ಪೂಜಾ ಗಾಂಧಿ, ಅರ್ಜುನ್ ಜನ್ಯ, ಗಿರಿಜಾ ಲೋಕೇಶ್, ಸೃಜನ್ ಲೋಕೇಶ್, ಜಯಂತ್ ಕಾಯ್ಕಿಣಿ, ರಮೇಶ್ ಅರವಿಂದ್, ಧ್ರುವ ಸರ್ಜಾ, ಟಿಎನ್ ಸೀತಾರಾಮ್, ಸುರೇಶ್ ಹಬ್ಳೀಕರ್, ಭಾರತಿ ವಿಷ್ಣುವರ್ಧನ್, ಅನಿರುದ್ಧ್, ಉಮಾಶ್ರೀ, ಪದ್ಮಾವಾಸಂತಿ, ಮುಖ್ಯಮಂತ್ರಿ ಚಂದ್ರು ಹೀಗೆ ಹಲವಾರು ನಟ-ನಟಿಯರಿಗೆ ಆಹ್ವಾನ ಪತ್ರಿಕೆ ವಿತರಣೆ ಮಾಡಲಾಗಿದೆ.
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಒಟ್ಟು 515 ಸಿನಿಮಾ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲು ಪಟ್ಟಿ ಮಾಡಿಕೊಳ್ಳಲಾಗಿತ್ತು ಎಂಬ ಮಾಹಿತಿಯನ್ನು ಆಯೋಜಕರು ನೀಡಿದ್ದಾರೆ. ಅದರಲ್ಲಿ 400 ಜನರಿಗೆ ಆಹ್ವಾನ ನೀಡಲಾಗಿದೆ. 100 ಸೆಲೆಬ್ರಿಟಿಗಳನ್ನು ವಿಐಪಿಗಳೆಂದು ಪರಿಗಣಿಸಲಾಗಿದೆ. 15 ಮಂದಿಯನ್ನು ವಿವಿಐಪಿ ಎಂದು ಪರಿಗಣಿಸಲಾಗಿದೆ ಎಂದು ಆಯೋಜಕರು ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಚಿತ್ರೋತ್ಸವದ ಉದ್ಘಾಟನೆ ಕಾರ್ಯಕ್ರಮಕ್ಕೆ ಹಾಜರಾಗಿದ್ದು ಸುಮಾರು 20 ಮಂದಿ ಮಾತ್ರ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Tue, 4 March 25