ನಟ ಪ್ರಥಮ್ (Pratham) ಮೈಕ್ ಹಿಡಿದು ನಿಂತರೆ ಅವರು ಮಾತುಗಳೆಲ್ಲ ಚಿತ್ರ ವಿಚಿತ್ರ. ಈಗ ಅವರ ಹೊಸ ಸಿನಿಮಾದ ಟೈಟಲ್ ಕೂಡ ಅಷ್ಟೇ ವಿಚಿತ್ರ ಆಗಿದೆ. ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ಪ್ರಥಮ್ ಅವರು ಹೀರೋ ಆಗಿ ನಟಿಸುತ್ತಿರುವ ನೂತನ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕೆ ‘ಫಸ್ಟ್ ನೈಟ್ ವಿತ್ ದೆವ್ವ’ (First Night with Devva) ಎಂದು ಶೀರ್ಷಿಕೆ ಇಡಲಾಗಿದೆ. ಟೈಟಲ್ ಮೂಲಕವೇ ಈ ಸಿನಿಮಾ ಕೌತುಕ ಸೃಷ್ಟಿ ಮಾಡಿದೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ನಡೆಯಿತು. ಈ ವೇಳೆ ಚಿತ್ರತಂಡದವರು ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು.
ಪ್ರಥಮ್ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಫಸ್ಟ್ ನೈಟ್ ವಿತ್ ದೆವ್ವ’ ಸಿನಿಮಾಗೆ ಪಿ.ವಿ.ಆರ್. ಸ್ವಾಮಿ ಗೂಗಾರದೊಡ್ಡಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ಈ ಸಿನಿಮಾದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತಾಡಿದರು.
ಇದನ್ನೂ ಓದಿ: ಪ್ರಥಮ್ ಪ್ರಕಾರ ಬಿಗ್ಬಾಸ್ 10ರ ಅತ್ಯುತ್ತಮ ಐದು ಸ್ಪರ್ಧಿಗಳು ಇವರೇ
ಹಾರರ್ ಮತ್ತು ಕಾಮಿಡಿ ಶೈಲಿಯಲ್ಲಿ ‘ಫಸ್ಟ್ ನೈಟ್ ವಿತ್ ದೆವ್ವ’ ಸಿನಿಮಾ ಮೂಡಿಬರಲಿದೆ. ಈ ಸಿನಿಮಾಗೆ ಪ್ರಥಮ್ ಅವರೇ ಕಥೆ ಬರೆದಿದ್ದಾರೆ ಎಂಬುದು ವಿಶೇಷ. ‘ಕಥೆಯನ್ನು ನಾನೇ ಬರೆದಿದ್ದೇನೆ. ನಾನು ಕಥೆ ಬರೆಯಲು ಸ್ಫೂರ್ತಿಯಾಗಿದ್ದು ‘ವಿಕ್ರಮ ಮತ್ತು ಬೇತಾಳ’ ಕಥೆ. ಈಗಾಗಲೇ ಅನೇಕ ಹಾರರ್ ಸಿನಿಮಾಗಳು ಬಂದಿವೆ. ಆದರೆ ನಾವು ಸ್ವಲ್ಪ ಡಿಫರೆಂಟ್ ಆಗಿ ತೋರಿಸುತ್ತೇವೆ. ನನ್ನ ಪತ್ನಿಯ ಪಾತ್ರದಲ್ಲಿ ನಿಖಿತಾ ಅವರು ನಟಿಸುತ್ತಿದ್ದಾರೆ. ನನ್ನ ಫ್ರೆಂಡ್ ನವೀನ್ ಅವರು ಈ ಸಿನಿಮಾ ನಿರ್ಮಿಸುತ್ತಿದ್ದಾರೆ’ ಎಂದರು ಪ್ರಥಮ್.
ಇದನ್ನೂ ಓದಿ: ನಾನು, ಪ್ರತಾಪ್, ರಕ್ಷಕ್ ಬೆಸ್ಟ್ ಕಾಂಬಿನೇಷನ್ ಎಂದ ಪ್ರಥಮ್
ಶ್ರೀನಿವಾಸಮೂರ್ತಿ, ಹರೀಶ್ ರಾಜ್, ಸಂಗೀತಾ, ತನುಜಾ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಮಾನ್ಯ ಸಿಂಗ್ ಅವರು ದೆವ್ವದ ಪಾತ್ರ ಮಾಡುತ್ತಿದ್ದಾರೆ. ನಿರ್ದೇಶಕ ಪಿ.ವಿ.ಆರ್. ಸ್ವಾಮಿ ಅವರು ಛಾಯಾಗ್ರಹಣವನ್ನೂ ಮಾಡುತ್ತಿದ್ದಾರೆ. ‘ಪ್ರಥಮ್ ಬರೆದ ಕಥೆ ಚೆನ್ನಾಗಿದೆ. ಈ ಚಿತ್ರಕ್ಕೆ ನನ್ನದೇ ಛಾಯಾಗ್ರಹಣ. ಇವತ್ತಿಂದ ಬೆಂಗಳೂರಲ್ಲಿ ಶೂಟಿಂಗ್ ಆರಂಭ ಮಾಡುತ್ತಿದ್ದೇವೆ. ವಿದೇಶದಲ್ಲಿ ಹಾಡಿನ ಚಿತ್ರೀಕರಣ ಮಾಡಲಿದ್ದೇವೆ’ ಎಂದು ನಿರ್ದೇಶಕರು ಹೇಳಿದ್ದಾರೆ.
‘ಫಸ್ಟ್ ನೈಟ್ ವಿತ್ ದೆವ್ವ’ ಸಿನಿಮಾದ ನಾಯಕಿರಾದ ನಿಖಿತಾ ಮತ್ತು ಮಾನ್ಯಾ ಸಿಂಗ್ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಶ್ರೀನಿವಾಸಮೂರ್ತಿ, ಸಂಗೀತಾ ಹಾಗೂ ಹರೀಶ್ ರಾಜ್ ಕೂಡ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಅದ್ವಿಕ್ ವರ್ಮ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ನಾಗೇಶ್ ಅವರು ಸಂಭಾಷಣೆ ಬರೆದು, ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.