ಪುನೀತ್ ರಾಜ್ಕುಮಾರ್ ಅವರು ನಟನೆ ಜತೆಗೆ ಗಾಯಕನಾಗಿಯೂ ಗುರುತಿಸಿಕೊಂಡಿದ್ದರು. ಹಲವು ಸಿನಿಮಾಗಳಲ್ಲಿ ಅವರು ಹಾಡಿದ್ದರು. ಪುನೀತ್ ನಮ್ಮನ್ನು ಅಗಲಿ ತಿಂಗಳಾಗಿದೆ. ಅವರ ಕಂಠದಲ್ಲಿ ಮೂಡಿ ಬಂದ ಹಾಡೊಂದು ಈಗ ರಿಲೀಸ್ ಆಗಿದೆ. ಈ ಹಾಡು ಪುನೀತ್ ಲೈಫ್ಗೆ ಹತ್ತಿರವಾಗಿದೆ ಅನ್ನೋದು ವಿಶೇಷ. ಪುನೀತ್ ರಾಜ್ಕುಮಾರ್ ‘ಬಾಡಿ ಗಾಡ್’ ಚಿತ್ರಕ್ಕಾಗಿ ‘ಆರೇಸ ಡಂಕನಕ..’ ಎಂಬ ಹಾಡನ್ನು ಹಾಡಿದ್ದಾರೆ. ಇತ್ತೀಚೆಗೆ ಈ ಹಾಡು ಬಿಡುಗಡೆಯಾಗಿದೆ. ಎಸ್.ಕೆ.ಎಸ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಈ ಮೊದಲು ಈ ಹಾಡನ್ನು ರಾಘವೇಂದ್ರ ರಾಜ್ಕುಮಾರ್ ಬಿಡುಗಡೆ ಮಾಡಿದ್ದರು.
‘ಇಷ್ಟು ದಿನ ನನ್ನ ತಮ್ಮನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಇಂದು ಗೀತಾಂಜಲಿ ಸಲ್ಲಿಸಿದ್ದೇನೆ. ಅವನು ಇಲ್ಲ ಎಂದು ಕೊರಗುವುದು ಬೇಡ. ಅವನು ಹಾಡಿರುವ ಹಾಡಿನಲ್ಲಿ, ಮಾಡಿರುವ ಕೆಲಸದಲ್ಲಿ ಅವನಿದ್ದಾನೆ. ನಿರ್ದೇಶಕ ಪ್ರಭು ಶ್ರೀನಿವಾಸ್ ನನಗೆ ಮೊದಲಿನಿಂದಲೂ ಪರಿಚಯ. ಅವರ ಈ ಪ್ರಯತ್ನಕ್ಕೆ ಶುಭವಾಗಲಿ’ ಎಂದು ರಾಘಣ್ಣ ಹಾರೈಸಿದ್ದರು.
ಸಿನಿಮಾ ನಿರ್ದೇಶಕ ಪ್ರಭು ಶ್ರೀನಿವಾಸ್ ಮಾತನಾಡಿ, ‘ಅಪ್ಪು ಸರ್ ಅವರನ್ನು ಭೇಟಿಯಾಗಿ ಈ ಹಾಡನ್ನು ಹಾಡಲು ಕೇಳಿದೆ. ‘ಇದನ್ನು ತುಂಬಾ ಹೈಪಿಚ್ನಲ್ಲಿ ಹಾಡಬೇಕು. ನನ್ನ ಧ್ವನಿ ಸರಿ ಹೊಂದುತ್ತದೆಯಾ? ಸರಿ ಹೊಂದದಿದ್ದಲ್ಲಿ ಬೇರೆ ಅವರ ಬಳಿ ಹಾಡಿಸಿ’ ಎಂದಿದ್ದರು. ಇಲ್ಲ ಈ ಹಾಡನ್ನು ನೀವೇ ಹಾಡಬೇಕು ಎಂದು ಕೇಳಿದೆ. ಅವರ ಸ್ಟುಡಿಯೋದಲ್ಲೇ ಈ ಹಾಡನ್ನು ಹಾಡಿದರು. ನನಗೆ ತಿಳಿದ ಹಾಗೆ ಇದು ಅವರು ಹಾಡಿರುವ ಕೊನೆಯ ಗೀತೆ ಅನಿಸುತ್ತದೆ. ಈ ಹಾಡಿನಲ್ಲಿ ಬರುವ ಕೆಲವು ಸಾಲುಗಳು ಪುನೀತ್ ಅವರಿಗೆ ಹತ್ತಿರವಾಗಿದೆ. ‘ಬಾಡಿ ಗಾಡ್’ ಕೆಲಸ ಮುಗಿದಿದ್ದು, ಜನವರಿಯಲ್ಲಿ ತೆರೆಗೆ ತರುತ್ತೇವೆ’ ಎಂದರು.
ನಟ ಮನೋಜ್ ಮಾತನಾಡಿ, ‘ನನಗೆ ಅಪ್ಪು ಅವರು ಹಾಡುವ ಹಾಡಿಗೆ ಡ್ಯಾನ್ಸ್ ಮಾಡಬೇಕೆಂದು ಆಸೆಯಿತ್ತು. ಈ ಹಾಡಿನ ಬಗ್ಗೆ ಮಾತನಾಡಲು ನಿರ್ದೇಶಕರೊಂದಿಗೆ ಅಪ್ಪು ಸರ್ ಮನೆಗೆ ಹೋದಾಗ, ಅವರ ಸ್ವಾಗತ ನೋಡಿ ನನಗೆ ಆಶ್ಚರ್ಯವಾಯಿತು. ‘ ಬನ್ನಿ ಮನೋಜ್. ಹೇಗಿದ್ದೀರಿ ಎಂದು ಅದ್ಭುತವಾಗಿ ಸ್ವಾಗತಿಸಿದ್ದರು’ ಎಂಬುದಾಗಿ ಹೇಳಿದರು. ನಟಿ ದೀಪಿಕಾ ಅವರು ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದಾರೆ.
ಮಠ ಗುರುಪ್ರಸಾದ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಪದ್ಮಜಾರಾವ್, ನಿರಂಜನ್, ಅಶ್ವಿನ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕರಣ್ ಬಿ ಕೃಪ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೇಲ್ ಮುರುಗನ್ ಅವರ ಛಾಯಾಗ್ರಹಣವಿದೆ. ಮತ್ತೊಂದು ಗೀತೆಗೆ ವೆಂಕಟೇಶ್ ಕುಲಕರ್ಣಿ ಅವರ ಸಾಹಿತ್ಯವಿದೆ.
ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಸಾಂತ್ವನ
Published On - 4:52 pm, Thu, 2 December 21