ಕಾವೇರಿ ಥಿಯೇಟರ್​ ನೆಲಸಮ; ಏಕಪರದೆ ಚಿತ್ರಮಂದಿರಗಳ ಅಂತ್ಯದಿಂದ ಪ್ರೇಕ್ಷಕರ ಜೇಬಿಗೆ ಕತ್ತರಿ

|

Updated on: May 08, 2024 | 11:00 PM

ಮೊದಲು ಮಲ್ಟಿಪ್ಲೆಕ್ಸ್​ ಬಂದು, ಆಮೇಲೆ ಒಟಿಟಿ ಬಂತು. ಇದರಿಂದಾಗಿ ಏಕಪರದೆ ಚಿತ್ರಮಂದಿರಗಳಿಗೆ ದೊಡ್ಡ ಹೊಡೆತ ಬಿತ್ತು. ವರ್ಷದಿಂದ ವರ್ಷಕ್ಕೆ ಸಿಂಗಲ್​ ಸ್ಕ್ರೀನ್​ ಚಿತ್ರಮಂದಿರಗಳು ಒಂದೊಂದಾಗಿಯೇ ಬಾಗಿಲು ಮುಚ್ಚುತ್ತಿವೆ. ಈಗ ಬೆಂಗಳೂರಿನ ‘ಕಾವೇರಿ’ ಚಿತ್ರಮಂದಿರ ಬಂದ್​ ಆಗಿದೆ. ಚಿತ್ರಮಂದಿರದ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಇದರ ಪರಿಣಾಮ ಸಿನಿಪ್ರಿಯರಿಗೆ ತಟ್ಟಲಿದೆ.

ಕಾವೇರಿ ಥಿಯೇಟರ್​ ನೆಲಸಮ; ಏಕಪರದೆ ಚಿತ್ರಮಂದಿರಗಳ ಅಂತ್ಯದಿಂದ ಪ್ರೇಕ್ಷಕರ ಜೇಬಿಗೆ ಕತ್ತರಿ
ಕಾವೇರಿ ಥಿಯೇಟರ್​ ನೆಲಸಮ
Follow us on

ಬೆಂಗಳೂರಿನ ಜನಪ್ರಿಯ ‘ಕಾವೇರಿ’ ಚಿತ್ರಮಂದಿರ (Cauvery Theatre) ನೆಲಸಮ ಆಗಿದೆ. 50 ವರ್ಷಗಳ ಇತಿಹಾಸ ಹೊಂದಿರುವ ಈ ಥಿಯೇಟರ್​ನಲ್ಲಿ ಹಲವಾರು ಸಿನಿಮಾಗಳು ಸೂಪರ್​ ಹಿಟ್​ ಆಗಿದ್ದವು. ಅದೆಲ್ಲವೂ ಈಗ ನೆನಪು ಮಾತ್ರ. ಸರಿಯಾದ ಬಿಸ್ನೆಸ್​ ಇಲ್ಲದ ಕಾರಣ ಈ ಚಿತ್ರಮಂದಿರವನ್ನು ಮುಚ್ಚಲಾಗಿದೆ. ಕೊರೊನಾ ಲಾಕ್​ಡೌನ್​ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಕಾರಣದಿಂದ ‘ಕಾವೇರಿ’ ಚಿತ್ರಮಂದಿರವನ್ನು ನಡೆಸುವುದು ಮಾಲಿಕರಿಗೆ ಕಷ್ಟ ಆಯಿತು. ಹಾಗಾಗಿ ಚಿತ್ರಮಂದಿರವನ್ನು ಕೆಡವಿ ಆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್​ ಕಟ್ಟುವ ನಿರ್ಧಾರಕ್ಕೆ ಬರಲಾಗಿದೆ. ಈ ರೀತಿ ಏಕಪರದೆ ಚಿತ್ರಮಂದಿರಗಳು (Single Screen Theatre) ಮುಚ್ಚಿದರೆ ನಿಜಕ್ಕೂ ನಷ್ಟ ಆಗುವುದು ಯಾರಿಗೆ? ಚಿತ್ರರಂಗದವರಿಗೆ ಮತ್ತು ಪ್ರೇಕ್ಷಕರಿಗೆ.

ಮಲ್ಟಿಪ್ಲೆಕ್ಸ್​ನಲ್ಲಿ ಎಲ್ಲವೂ ದುಬಾರಿ

ಏಕಪರದೆ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗೆ ಹೋಲಿಸಿದರೆ ಮಲ್ಟಿಪ್ಲೆಕ್ಸ್​ನಲ್ಲಿ ಬೆಲೆ ದುಬಾರಿ ಆಗಿರುತ್ತದೆ. ಟಿಕೆಟ್​ ಬೆಲೆಯಿಂದ ಹಿಡಿದು ತಿಂಡಿ, ಪಾನೀಯ, ಪಾರ್ಕಿಂಗ್​ ದರ ಎಲ್ಲವೂ ಕೂಡ ಸಿಂಗಲ್​ ಸ್ಕ್ರೀನ್​ ಥಿಯೇಟರ್​ನಲ್ಲಿ ಕಡಿಮೆ ಇರುತ್ತದೆ. ಈಗಾಗಲೇ ಕರ್ನಾಟಕದಲ್ಲಿ ನೂರಾರು ಏಕಪರದೆ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಆದರೆ ಹಲವಾರು ಹೊಸ ಮಲ್ಟಿಪ್ಲೆಕ್ಸ್​ಗಳು ತಲೆ ಎತ್ತಿವೆ. ಅಲ್ಲಿ ಸಾಮಾನ್ಯ ಜನರ ಕೈಗೆ ಎಟುಕದ ಬೆಲೆ ಇದೆ. ಹೀಗೆ ಪ್ರತಿಯೊಂದು ಚಿತ್ರಮಂದಿರ ಮುಚ್ಚಿದಾಗಲೂ ಮಲ್ಟಿಪ್ಲೆಕ್ಸ್​ಗೆ ಬೇಡಿಕೆ ಹೆಚ್ಚುತ್ತದೆ. ಆ ಬೇಡಿಕೆಗೆ ತಕ್ಕಂತೆ ಬೆಲೆ ಏರುತ್ತದೆ. ಪ್ರೇಕ್ಷಕರ ಜೇಬಿಗೆ ಹೆಚ್ಚು ಹೆಚ್ಚು ಕತ್ತರಿ ಬೀಳುತ್ತದೆ.

ಚಿತ್ರರಂಗಕ್ಕೂ ನಷ್ಟ

ಬಹುಬೇಡಿಕೆಯ ಸ್ಟಾರ್​ ಸಿನಿಮಾಗಳು ಬಿಡುಗಡೆ ಆದಾಗ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿಕ್ಕಾಪಟ್ಟೆ ಬೆಲೆ ಏರಿಸಲಾಗುತ್ತದೆ. ಒಂದು ಟಿಕೆಟ್​ನ ಬೆಲೆ ಸಾವಿರ ರೂಪಾಯಿ ತನಕವೂ ಏರುವುದುಂಟು. ಮಾಮೂಲಿ ಸಿನಿಮಾಗಳಿಗೂ ಸಹ ಏಕಪರದೆ ಚಿತ್ರಮಂದಿರಗಳಿಂತ ಹೆಚ್ಚು ದರ ಇರುತ್ತದೆ. ಇನ್ನು, ಇದರೊಳಗೆ ಸಿಗುವ ಪಾಪ್​ಕಾರ್ನ್​, ಪಾನೀಯಗಳನ್ನು ಕೊಂಡುಕೊಳ್ಳಲು ಹೋದರೆ ಕೈ ಸುಡುತ್ತದೆ! ಅಷ್ಟರಮಟ್ಟಿಗೆ ದುಬಾರಿ ಆಗಿವೆ ಮಲ್ಟಿಪ್ಲೆಕ್ಸ್​ನಲ್ಲಿ ಸಿಗುವ ತಿನಿಸುಗಳು. ಪಾರ್ಕಿಂಗ್​ ದರ ಕೂಡ ಹೆಚ್ಚಿರುತ್ತದೆ. ಇದರಿಂದ ಸಹಜವಾಗಿಯೇ ಬಡವರು ಮತ್ತು ಮಧ್ಯಮ ವರ್ಗದ ಜನರು ಸಿನಿಮಾ ನೋಡಲು ಮಲ್ಟಿಪ್ಲೆಕ್ಸ್​ ಕಡೆಗೆ ಬರಲು ಹಿಂದೇಟು ಹಾಕುತ್ತಾರೆ. ಅದರಿಂದ ಚಿತ್ರರಂಗಕ್ಕೆ ನಿಜಕ್ಕೂ ನಷ್ಟ ಆಗುತ್ತದೆ.

ಇದನ್ನೂ ಓದಿ: ‘ಸ್ಟಾರ್ ನಟರು ಎರಡು ವರ್ಷಕ್ಕೊಂದು ಸಿನಿಮಾ ಮಾಡಿದರೆ ಚಿತ್ರಮಂದಿರಗಳು ಉಳಿಯಲ್ಲ’

ಆ ಫೀಲಿಂಗ್​ ಈಗ ಉಳಿದಿಲ್ಲ

ಒಂದು ಕಾಲದಲ್ಲಿ ಪ್ರತಿ ಚಿತ್ರಮಂದಿರಗಳ ಜೊತೆ ಸಾವಿರಾರು ನೆನಪುಗಳು ಬೆಸೆದುಕೊಂಡಿರುತ್ತಿದ್ದವು. ‘ಕಾವೇರಿ’ ಚಿತ್ರಮಂದಿರವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಇಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ಆಗಿತ್ತು. ಅಮಿತಾಭ್​ ಬಚ್ಚನ್​, ಯಶ್​ ಚೋಪ್ರಾ, ರಜನಿಕಾಂತ್​, ಡಾ. ರಾಜ್​ಕುಮಾರ್​, ವಿಷ್ಣುವರ್ಧನ್​ ಮುಂತಾದ ಸ್ಟಾರ್​ಗಳು ಇಲ್ಲಿಗೆ ಭೇಟಿ ನೀಡಿದ್ದರು. ಇಂಥ ಚಿತ್ರಮಂದಿರಗಳಲ್ಲಿ ಯಾವುದೇ ಸಿನಿಮಾ 100 ಡೇಸ್​ ಪ್ರದರ್ಶನ ಕಂಡಾಗ ವಿಶೇಷ ಸಂಭ್ರಮ ಮನೆ ಮಾಡಿರುತ್ತಿತ್ತು. ಆ ಎಲ್ಲ ಸಿನಿಮಾಗಳ ಸ್ಮರಣಿಕೆ​ಗಳನ್ನು ಚಿತ್ರಮಂದಿರದ ಶೋಕೇಸ್​ನಲ್ಲಿ ಇರಿಸಲಾಗುತ್ತಿತ್ತು. ಆಯಾ ಏರಿಯಾಗಳನ್ನು ಚಿತ್ರಮಂದಿರದ ಹೆಸರಿನಿಂದಲೇ ಗುರುತಿಸಲಾಗುತ್ತಿತ್ತು. ಆದರೆ ಅಂಥ ಫೀಲಿಂಗ್​ ಈಗ ಮಲ್ಟಿಪ್ಲೆಕ್ಸ್​ಗಳಲ್ಲಿ ಕಾಣಲು ಸಿಗುವುದಿಲ್ಲ. ತುಂಬಾ ಯಾಂತ್ರಿಕವಾಗಿ ಅಲ್ಲಿ ವ್ಯವಹಾರ ನಡೆಯುತ್ತದೆ ಅಷ್ಟೇ.

ಇದನ್ನೂ ಓದಿ: ಅಕ್ಟೋಬರ್​ಗೆ ಮತ್ತೆ ಬರ್ತೀನಿ, ಚಿತ್ರಮಂದಿರ ಖಾಲಿ ಇಟ್ಟಿರಿ: ದರ್ಶನ್

ಸಿಂಗಲ್​ಸ್ಕ್ರೀನ್​ ಮುಚ್ಚಲು ಕಾರಣ?

ಏಕಪರದೆ ಚಿತ್ರಮಂದಿರಗಳಿಗೆ ಈಗ ಕಾಲ ಇಲ್ಲ ಎಂಬಂತೆ ಆಗಿದೆ. ಅದಕ್ಕೆ ಕಾರಣವೂ ಇದೆ. ಪ್ರತಿ ಚಿತ್ರಮಂದಿರ ಕೂಡ 700, 800 ಅಥವಾ 1000 ಸೀಟ್​ಗಳನ್ನು ಹೊಂದಿರುತ್ತವೆ. ಈಗಿನ ಪರಿಸ್ಥಿತಿಯಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಚಿತ್ರಮಂದಿರಗಳು ಹೌಸ್​ಫುಲ್ ಆಗುವುದು ತೀರಾ ಅಪರೂಪ. ‘ಕಾವೇರಿ’ ಚಿತ್ರಮಂದಿರದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಈ ಚಿತ್ರಮಂದಿರಲ್ಲಿ ಇದ್ದ ಒಟ್ಟು ಸೀಟ್​ಗಳ ಸಂಖ್ಯೆ 1384. ಒಮ್ಮೆ ಯಾವುದೇ ಸಿನಿಮಾ ಇಲ್ಲಿ ಹೌಸ್​ಫುಲ್​ ಪ್ರದರ್ಶನ ಆಯಿತು ಎಂದರೆ ಅದು ಒಂದು ಉತ್ಸವಕ್ಕೆ ಸಮ! ಈಗ ಆ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ.

ಇದನ್ನೂ ಓದಿ: ಒಟಿಟಿಗೆ ಬಂದ್ಮೇಲೂ ಚಿತ್ರಮಂದಿರದಲ್ಲಿ ಕೋಟಿ ರೂಪಾಯಿ ಕಲೆಕ್ಷನ್​; ಇದು ‘12th ಫೇಲ್​’ ತಾಕತ್ತು

ಈಗ ಏನಿದೆ ಟ್ರೆಂಡ್​?

ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಮಲ್ಟಿಪ್ಲೆಕ್ಸ್​ಗಳು ವಿನ್ಯಾಸಗೊಂಡಿವೆ. 200ರಿಂದ 300 ಜನರು ಕೂರುವಂತಹ ಚಿಕ್ಕ ಚಿಕ್ಕ ಆಡಿಟೋರಿಯಂ ಈಗ ಮಲ್ಟಿಪ್ಲೆಕ್ಸ್​ಗಳಲ್ಲಿ ಹೆಚ್ಚಾಗಿವೆ. 50 ಡೇಸ್​, 100 ಡೇಸ್​ ಎನ್ನುವ ಟ್ರೆಂಡ್​ ಈಗ ಕಡಿಮೆ ಆಗಿದೆ. ಮೊದಲ ದಿನ ಎಷ್ಟು ಕಲೆಕ್ಷನ್​ ಆಗಿದೆ? ಮೊದಲ ವೀಕೆಂಡ್​ನಲ್ಲಿ ಸಿನಿಮಾಗೆ ಎಷ್ಟು ಬಿಸ್ನೆಸ್​ ಆಗಿದೆ? 100 ಕೋಟಿ ರೂಪಾಯಿ ಕಮಾಯಿ ಆಗಿದೆಯೋ ಇಲ್ಲವೋ ಎಂಬುದಷ್ಟೇ ಈಗ ಯಶಸ್ಸಿನ ಅಳತೆಗೋಲು ಆಗಿದೆ. ಆದ್ದರಿಂದ ಸಾವಿರಾರು ಸೀಟ್​ಗಳಿರುವ ಚಿತ್ರಮಂದಿರಗಳು ವರ್ಷಪೂರ್ತಿ ವ್ಯವಹಾರ ನಡೆಸುದು ನಿಜಕ್ಕೂ ಕಷ್ಟ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:11 pm, Wed, 8 May 24