ರ‍್ಯಾಪ್ ಸಿಂಗರ್, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ಅವರು ನಟನೆಯಲ್ಲೂ ಆಸಕ್ತಿ ಹೊಂದಿರುವುದು ಗೊತ್ತೇ ಇದೆ. ಈಗಾಗಲೇ ಅವರು ಒಂದೆರಡು ಸಿನಿಮಾಗಳಿಗೆ ಹೀರೋ ಆಗಿದ್ದಾರೆ. ಆ ಚಿತ್ರಗಳು ಬಿಡುಗಡೆ ಆಗುವುದಕ್ಕೂ ಮುನ್ನವೇ ಅವರಿಗೆ ಹೊಸ ಹೊಸ ಅವಕಾಶಗಳು ಬರುತ್ತಿವೆ. ಈಗ ಅವರ ಹೊಸ ಸಿನಿಮಾ (Chandan Shetty New Movie) ಬಗ್ಗೆ ಮಾಹಿತಿ ಕೇಳಿಬಂದಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫಿಕ್ಸ್ ಆಗಿಲ್ಲ. ಸಾಮಾನ್ಯವಾಗಿ ಚಿತ್ರದ ಟೈಟಲ್ ಅನ್ನು ಸ್ಟಾರ್ ನಟ-ನಟಿಯರ ಕೈಯಿಂದ ಅನಾವರಣ ಮಾಡಿಸಲಾಗುತ್ತದೆ. ಆದರೆ ಚಂದನ್ ಶೆಟ್ಟಿಯ ಹೊಸ ಸಿನಿಮಾದ ಶೀರ್ಷಿಕೆ ಬಿಡುಗಡೆ ಮಾಡಲು ಸಾಕ್ಷಾತ್ ವರಮಹಾಲಕ್ಷ್ಮಿ (Varamahalakshmi) ಬರ್ತಾಳಂತೆ. ಏನಿದು ಟ್ವಿಸ್ಟ್ ಅಂತೀರಾ? ಆ ಬಗ್ಗೆ ಇಲ್ಲಿದೆ ಮಾಹಿತಿ..
ಚಂದನ್ ಶೆಟ್ಟಿ ಅವರು ಅಭಿನಯಿಸಲಿರುವ ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನೀಡಲು ಒಂದು ಪ್ರಮೋಷನಲ್ ವಿಡಿಯೋ ಮಾಡಲಾಗಿದೆ. ಅದರಲ್ಲಿ ಟೈಟಲ್ ಲಾಂಚ್ ಬಗ್ಗೆಯೇ ಚರ್ಚೆ ನಡೆದಿದೆ. ಯಾರಿಂದ ಶೀರ್ಷಿಕೆ ಬಿಡುಗಡೆ ಮಾಡಿಸೋದು ಎಂಬ ಬಗ್ಗೆ ನಿರ್ದೇಶನ ತಂಡದವರು ಮತ್ತು ಚಂದನ್ ಶೆಟ್ಟಿ ತಲೆ ಕೆಡಿಸಿಕೊಳ್ಳುತ್ತಾರೆ. ಅಂದು ರಾತ್ರಿ ನಿರ್ದೇಶಕರ ಕನಸಿನಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ಬರುತ್ತಾಳೆ. ‘ನಿಮ್ಮ ಸಿನಿಮಾದ ಟೈಟಲ್ ಅನ್ನು ವರಮಹಾಲಕ್ಷ್ಮಿ ಹಬ್ಬದ ದಿನ ನಾನೇ ಲಾಂಚ್ ಮಾಡ್ತೀನಿ’ ಎಂದು ಆಕೆ ಭರವಸೆ ನೀಡುತ್ತಾಳೆ. ಈ ರೀತಿ ತಮಾಷೆಯ ಪ್ರಸಂಗ ಈ ಪ್ರೋಮೋ ವಿಡಿಯೋದಲ್ಲಿದೆ.
ಈ ಸಿನಿಮಾದಲ್ಲಿ ಚಂದನ್ ಶೆಟ್ಟಿ ಜತೆ ಭಾವನಾ, ಅಮರ್, ವಿವಾನ್, ಮಾನಸಿ, ಸುನೀಲ್ ಪುರಾಣಿಕ್, ಭವ್ಯ, ಸಿಂಚನಾ, ಅರವಿಂದ ರಾವ್, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ ಸೇರಿದಂತೆ ಅನೇಕರು ಅಭಿನಯಿಸಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಇದನ್ನೂ ಓದಿ: ನೀರಿನೊಳಗೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ರೊಮ್ಯಾನ್ಸ್; ವೈರಲ್ ವಿಡಿಯೋ ನೋಡಿ ಜನ ಹೇಳಿದ್ದೇನು?
ಅರುಣ್ ಅಮುಕ್ತ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ. ಸಿನಿಮಾದ ಶೀರ್ಷಿಕೆಯನ್ನು ಆಗಸ್ಟ್ 25ರಂದು ಮಧ್ಯಾಹ್ನ 12.21ಕ್ಕೆ ಬಿಡುಗಡೆ ಮಾದಲು ಟೈಮ್ ಫಿಕ್ಸ್ ಮಾಡಲಾಗಿದೆ. ಟೈಟಲ್ ಜೊತೆಗೆ ಸಿನಿಮಾದ ಕಥೆ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಡುವ ನಿರೀಕ್ಷೆ ಇದೆ. ಈ ಹಿಂದೆ ‘ಲೂಸ್ಗಳು’ ಚಿತ್ರಕ್ಕೆ ಅರುಣ್ ಅಮುಕ್ತ ಅವರು ನಿರ್ದೇಶನ ಮಾಡಿದ್ದರು. ಜಾಹೀರಾತು ಕ್ಷೇತ್ರದಲ್ಲೂ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಯುವ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಕಹಾನಿಯನ್ನು ಇಟ್ಟುಕೊಂಡು ಅವರೀಗ ಚಂದನ್ ಶೆಟ್ಟಿಗೆ ಆ್ಯಕ್ಷನ್-ಕಟ್ ಹೇಳಲು ಸಜ್ಜಾಗಿದ್ದಾರೆ.