‘ಕಾಂತಾರ’ ಹಾದಿಯಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’: ರಕ್ಷಿತ್ ಶೆಟ್ಟಿ ಭರವಸೆ
Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಪ್ಯಾನ್ ಇಂಡಿಯಾ ಸಿನಿಮಾನಾ? 'ಕಾಂತಾರ' ಸಿನಿಮಾದ ಉದಾಹರಣೆಯೊಂದಿಗೆ ಉತ್ತರಿಸಿದ ರಕ್ಷಿತ್ ಶೆಟ್ಟಿ.
ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ‘ (Sapta sagaradaache ello) ಸಿನಿಮಾದ ಟ್ರೈಲರ್ ನಿನ್ನೆ (ಆಗಸ್ಟ್ 17) ಬಿಡುಗಡೆ ಆಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾದಲ್ಲಿ ಸುಂದರವಾದ ಪ್ರೇಮಕತೆ ಇರುವ ಸುಳಿವನ್ನು ನೀಡಿರುವ ಟ್ರೈಲರ್, ಗುಣಮಟ್ಟದ ಸಿನಿಮಾ ಒಂದನ್ನು ಪ್ರೇಕ್ಷಕ ನಿರೀಕ್ಷಿಸಬಹುದೆಂಬ ಭರವಸೆಯನ್ನು ನೀಡಿದೆ. ‘777 ಚಾರ್ಲಿ’ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ನಟ ಎನಿಸಿಕೊಂಡಿರುವ ರಕ್ಷಿತ್ ಶೆಟ್ಟಿ, ತಮ್ಮ ‘ಸಪ್ತ ಸಾಗರದರಾಚೆ ಎಲ್ಲೋ’ ಸಿನಿಮಾವನ್ನೂ ಪ್ಯಾನ್ ಇಂಡಿಯಾ ಮಾಡುತ್ತಿದ್ದಾರಾ? ಎಂಬ ಪ್ರಶ್ನೆ ಎದುರಾಗಿದ್ದು, ಅದಕ್ಕೆ ರಕ್ಷಿತ್ ಶೆಟ್ಟಿ ಉತ್ತರ ನೀಡಿದ್ದಾರೆ.
ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಕ್ಷಿತ್ ಶೆಟ್ಟಿ, ”ನಾವು ಈಗಾಗಲೇ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ಎಲ್ಲ ಭಾಷೆಗಳಿಗೂ ಡಬ್ ಮಾಡಿಟ್ಟಿದ್ದೇವೆ. ಈ ಸಿನಿಮಾವನ್ನು ಉದ್ದೇಶಪೂರ್ವಕವಾಗಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ, ಬದಲಿಗೆ ಈ ಸಿನಿಮಾವೇ ಪ್ರಪಂಚದಾದ್ಯಂತ ಸಂಚಾರ ಮಾಡುವ ವಿಶ್ವಾಸವಿದೆ” ಎಂದಿದ್ದಾರೆ.
ಈ ಸಮಯದಲ್ಲಿ ಗೆಳೆಯ ರಿಷಬ್ ಶೆಟ್ಟಿ ಸಿನಿಮಾದ ಉದಾಹರಣೆ ತೆಗೆದುಕೊಂಡ ರಕ್ಷಿತ್ ಶೆಟ್ಟಿ, ”ಕಾಂತಾರ’ ಸಿನಿಮಾ ಹೇಗೆ ತನಗೆ ತಾನೇ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಭಾರತ, ವಿಶ್ವದಾದ್ಯಂತ ಸಂಚರಿಸಿತೋ ಹಾಗೆಯೇ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸಹ ತನ್ನ ಕತೆಯಿಂದ, ಭಿನ್ನತೆಯಿಂದ ಜನರನ್ನು ಸೆಳೆದು ಎಲ್ಲ ಬೇರೆ ಭಾಷೆಗಳಿಗೂ ಸಂಚರಿಸಲಿದೆ, ಅದರ ಜೊತೆಗೆ ನಾವು ಸಂಚರಿಸುತ್ತೇವೆ” ಎಂದಿದ್ದಾರೆ.
ಇದನ್ನೂ ಓದಿ:ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡ ‘ಸಪ್ತ ಸಾಗರದಾಚೆ ಎಲ್ಲೋ’ ನಾಯಕಿ ಚೈತ್ರಾ ಆಚಾರ್
ತಮ್ಮ ‘777 ಚಾರ್ಲಿ’ ಸಿನಿಮಾದ ಬಗ್ಗೆ ಇದೇ ಸಮಯದಲ್ಲಿ ಮಾತನಾಡಿದ ರಕ್ಷಿತ್ ಶೆಟ್ಟಿ, ”777 ಚಾರ್ಲಿ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ ಉದ್ದೇಶ ಬೇರೆಯೇ ಇತ್ತು. ಎಲ್ಲೆಡೆ ಡಾಗ್ ಲವರ್ಸ್ ಇದ್ದಾರೆ, ಯಾರು ನೋಡದಿದ್ದರೂ ಅವರಾದರೂ ನಮ್ಮ ಸಿನಿಮಾ ನೋಡಲು ಬಂದೇ ಬರುತ್ತಾರೆ ಎಂಬ ವಿಶ್ವಾಸದಿಂದ ಆ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಅನ್ನಾಗಿ ಮಾಡಿದೆವು” ಎಂದಿದ್ದಾರೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವು ಸಮುದ್ರ ತೀರದ ಊರಿನಲ್ಲಿ ನಡೆವ ಪ್ರೇಮಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಪ್ರೀತಿ, ಅಧಿಕಾರ, ಹಣ, ದ್ವೇಷ ಎಲ್ಲವೂ ಇರುವುದು ಟ್ರೈಲರ್ನಿಂದ ತಿಳಿದು ಬರುತ್ತಿದೆ. ಸಿನಿಮಾದಲ್ಲಿ ರಕ್ಷಿತ್ ಎದುರು ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಅವಿನಾಶ್ ಇನ್ನಿತರರು ಇದ್ದಾರೆ. ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 1 ರಂದು ಬಿಡುಗಡೆ ಆಗುತ್ತಿದೆ. ಸಿನಿಮಾದ ಎರಡನೇ ಭಾಗ ಕೇವಲ ಒಂದು ತಿಂಗಳ ಅಂತರದಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದು, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ