ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ (Chandan Shetty) ಅವರು ನಟನಾಗಿಯೂ ಸಕ್ರಿಯರಾಗಿದ್ದಾರೆ. ಕೆಲವು ತಿಂಗಳ ಹಿಂದೆ ಸೆಟ್ಟೇರಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದಲ್ಲಿ ಅವರು ಹೀರೋ ಆಗಿ ನಟಿಸುತ್ತಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಈಗ ಈ ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ಈ ಬಗ್ಗೆ ಮಾಹಿತಿ ನೀಡಲು ಇಂದು (ಮಾರ್ಚ್ 25) ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಅರುಣ್ ಅಮುಕ್ತ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಒಂದಷ್ಟು ಕಾರಣಗಳಿಂದಾಗಿ ಚಂದನ್ ಶೆಟ್ಟಿ ಅವರ ಅಭಿಮಾನಿಗಳ ಬಳಗದಲ್ಲಿ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ.
ಈ ಸಿನಿಮಾದಲ್ಲಿ ಚಂದನ್ ಶೆಟ್ಟಿ ಜೊತೆ ಹಿರಿಯ ನಟಿ ಭವ್ಯಾ, ಪ್ರಶಾಂತ್ ಸಂಬರ್ಗಿ, ರಘು ರಾಮನಕೊಪ್ಪ, ಸುನೀಲ್ ಪುರಾಣಿಕ್, ಅಮರ್, ಮಾನಸಿ, ಭಾವನಾ, ಮನೋಜ್ ವಿವಾನ್, ಅರವಿಂದ ರಾವ್, ಕಾಕ್ರೋಚ್ ಸುಧಿ, ಸಿಂಚನಾ ಮುಂತಾದ ಕಲಾವಿದರು ನಟಿಸಿದ್ದಾರೆ. ಸೂಕ್ತ ಪ್ಲ್ಯಾನ್ ಪ್ರಕಾರ ನಿರ್ದೇಶಕ ಅರುಣ್ ಅಮುಕ್ತ ಅವರು ಶೂಟಿಂಗ್ ಮುಗಿಸಿದ್ದಾರೆ. ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಮಂಗಳೂರು ಮುಂತಾದ ಕಡೆಗಳಲ್ಲಿ 50 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಈ ಬಗ್ಗೆ ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಜಿ. ಕಶ್ಯಪ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾಗೆ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸದ್ಯಕ್ಕೆ ಎಲ್ಲೆಲ್ಲೂ ರಾಜಕೀಯದ ಕಾವು ಇದೆ. ಹಾಗಾಗಿ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟ ಆದ ಬಳಿಕ ಈ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡದವರು ನಿರ್ಧರಿಸಿದ್ದಾರೆ. ಸುಬ್ರಮಣ್ಯ ಕುಕ್ಕೆ ಹಾಗೂ ಎ.ಸಿ. ಶಿವಲಿಂಗೇಗೌಡ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ಕೆಂಡ’ ಸಿನಿಮಾಗೆ ಜಯಂತ್ ಕಾಯ್ಕಿಣಿ ಪುತ್ರ ರಿತ್ವಿಕ್ ಸಂಗೀತ ನಿರ್ದೇಶನ
ಕುಮಾರ್ ಗೌಡ ಅವರ ಛಾಯಾಗ್ರಹಣ, ಭರ್ಜರಿ ಚೇತನ್ ಕುಮಾರ್ ಹಾಗೂ ವಾಸುಕಿ ವೈಭವ್ ಅವರ ಸಾಹಿತ್ಯ, ಪವನ್ ಗೌಡ ಅವರ ಸಂಕಲನ ಈ ಸಿನಿಮಾಗಿದೆ. ನರಸಿಂಹ, ಟೈಗರ್ ಶಿವು ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ವಿಜೇತ್ ಕೃಷ್ಣ, ಶಶಾಂಕ್ ಶೇಷಗಿರಿ ಮತ್ತು ವಾಸು ದೀಕ್ಷಿತ್ ಅವರು ಸಂಗೀತ ನೀಡಿದ್ದಾರೆ.
ಈ ಸಿನಿಮಾದಲ್ಲಿ ಚಂದನ್ ಶೆಟ್ಟಿ ಅವರು ಮೂರು ಶೇಡ್ ಇರುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅದಕ್ಕಾಗಿ ಹಲವು ದಿನಗಳ ಕಾಲ ತಯಾರಿ ನಡೆಸಿ, ಅವರು ಶೂಟಿಂಗ್ ಮುಗಿಸಿದ್ದಾರೆ. ಈ ಮೂರೂ ಶೇಡ್ಗಳು ಡಿಫರೆಂಟ್ ಆಗಿವೆ. ಚಂದನ್ ಶೆಟ್ಟಿ ಅವರ ಅಸಲಿ ವ್ಯಕ್ತಿತ್ವಕ್ಕೆ ವಿರುದ್ಧ ಆಗಿರುವಂಥ ಪಾತ್ರಗಳನ್ನು ಅವರು ಚಾಲೆಂಜಿಂಗ್ ಆಗಿ ತೆಗೆದುಕೊಂಡು ನಟಿಸಿದ್ದಾರೆ ಎಂಬ ಕಾರಣದಿಂದ ಅವರ ನಟನೆ ಮತ್ತು ಬದ್ಧತೆಗೆ ಚಿತ್ರತಂಡದವರು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.