ರ್ಯಾಪರ್ ಚಂದನ್ ಶೆಟ್ಟಿ ಇತ್ತೀಚೆಗಷ್ಟೆ ‘ಕಾಟನ್ ಕ್ಯಾಂಡಿ’ ಹೆಸರಿನ ಹಾಡು ಬಿಡುಗಡೆ ಮಾಡಿದ್ದಾರೆ. ಇನ್ಸ್ಟಾಗ್ರಾಂ ರೀಲ್ಗಳಲ್ಲಿ ತಮ್ಮ ಹಾಡನ್ನು ಸಖತ್ ಪ್ರೊಮೋಷನ್ ಮಾಡುತ್ತಿದ್ದಾರೆ. ಬೇರೆ ಬೇರೆ ಸೆಲೆಬ್ರಿಟಿಗಳಿಂದ ತಮ್ಮ ಹಾಡಿಗೆ ರೀಲ್ಸ್ ಮಾಡಿಸುತ್ತಿದ್ದಾರೆ. ಆದರೆ ಇದೀಗ ಚಂದನ್ ಶೆಟ್ಟಿ ವಿರುದ್ಧ ಇದೀಗ ಕೃತಿ ಚೌರ್ಯ ಆರೋಪ ಎದುರಾಗಿದೆ. ಕನ್ನಡದ ರ್ಯಾಪರ್ ಒಬ್ಬರು, ಚಂದನ್ ಶೆಟ್ಟಿ ತಮ್ಮ ಹಳೆಯ ಹಾಡಿನ ಟ್ಯೂನ್ ಕದ್ದು, ‘ಕಾಟನ್ ಕ್ಯಾಂಡಿ’ ಹಾಡಿನಲ್ಲಿ ಬಳಸಿಕೊಂಡಿದ್ದಾರೆ. ತಾವು ಚಂದನ್ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ಹೇಳಿದ್ದಾರೆ.
ಯುವರಾಜ್ ಹೆಸರಿನ ಮತ್ತೊಬ್ಬ ರ್ಯಾಪರ್, ಚಂದನ್ ಶೆಟ್ಟಿ ವಿರುದ್ಧ ಆರೋಪ ಮಾಡಿದ್ದು, ತಾನು ಆರು ವರ್ಷದ ಹಿಂದೆ ‘ವೈ ಬುಲ್ ಪಾರ್ಟಿ’ ಹಾಡಿನ ಮೊದಲ ಪಲ್ಲವಿ ಹಾಗೂ ಎರಡನೇ ಚರಣ ನಕಲು ಮಾಡಿ ತಮ್ಮ ಹಾಡಿನಲ್ಲಿ ಬಳಸಿಕೊಂಡಿದ್ದಾರೆ. ಚಂದನ್ ಶೆಟ್ಟಿಯೇ ಈ ಬಗ್ಗೆ ಮಾತನಾಡುತ್ತಾರೆ ಎಂದು ಕಾದಿದ್ದೆ ಆದರೆ ಅವರು ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ನನ್ನ ಬಳಿಯೂ ಅವರು ಈ ಬಗ್ಗೆ ಕೇಳಿಲ್ಲ. ಹಾಗಾಗಿ ಈಗ ನಾನೇ ಈ ಬಗ್ಗೆ ಮಾತನಾಡುತ್ತಿದ್ದೇನೆ. ಚಂದನ್ ಶೆಟ್ಟಿ ವಿರುದ್ಧ ನಾವು ಕಾನೂನು ಮೊರೆ ಹೋಗಲಿದ್ದೀವಿ’ ಎಂದಿದ್ದಾರೆ ಯುವರಾಜ್.
‘ಆ ಹಾಡನ್ನು ನಾನು ಬಹಳ ಕಷ್ಟಪಟ್ಟು ಮಾಡಿದ್ದೆ. ಆಗಲೇ ಹಣ ಕೂಡಿಟ್ಟು 17 ಲಕ್ಷ ರೂಪಾಯಿ ಖರ್ಚು ಮಾಡಿ ಹಾಡು ಮಾಡಿದ್ದೆ. ‘ಕಾಟನ್ ಕ್ಯಾಂಡಿ’ ಹಾಡಿನಲ್ಲಿ ನನ್ನ ಟ್ಯೂನ್ ಮಾತ್ರವೇ ಅಲ್ಲದೆ ಇನ್ನೊಬ್ಬರ ಬಿಜಿಎಂ ಅನ್ನು ಸಹ ಕದ್ದಿದ್ದಾರೆ. ಚಂದನ್ ಶೆಟ್ಟಿ ಈಗಾಗಲೇ ಬೆಳೆದಿದ್ದಾರೆ. ಆದರೆ ಅವರು ಇನ್ನೊಬ್ಬರನ್ನೂ ಬೆಳೆಯಲು ಬಿಡಬೇಕು. ಚಂದನ್ ಶೆಟ್ಟಿ ನನಗೆ ಮೊದಲಿನಿಂದಲೂ ಪರಿಚಯ. ಟ್ಯೂನ್ ಬೇಕು ಎಂದು ಕೇಳಿದ್ದರೆ ನಾನೇ ಕೊಟ್ಟುಬಿಡುತ್ತಿದ್ದೆ’ ಎಂದಿದ್ದಾರೆ.
ಇದನ್ನೂ ಓದಿ:ಚಂದನ್ ಶೆಟ್ಟಿಯ ‘ಕಾಟನ್ ಕ್ಯಾಂಡಿ’ ಹಾಡಿಗೆ ದಿಶಾ ಮದನ್ ಸಖತ್ ಸ್ಟೆಪ್
‘ಕಾಟನ್ ಕ್ಯಾಂಡಿ’ ಸಿನಿಮಾದ ಹಾಡಿನ ಕೆಲ ಸಾಲುಗಳು, ಯುವರಾಜ್ ಅವರ ಹಳೆಯ ಹಾಡನ್ನು ಹೋಲುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ ಚಂದನ್ ಶೆಟ್ಟಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ಧ್ರುವ ಸರ್ಜಾ ನಟಿಸಿದ್ದ ‘ಪೊಗರು’ ಸಿನಿಮಾಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದರು. ಆ ಸಿನಿಮಾದ ಒಂದು ಹಾಡನ್ನು ಚಂದನ್ ಶೆಟ್ಟಿ ಬೇರೊಂದು ಸಿನಿಮಾದಿಂದ ಎತ್ತಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆಗ ಸ್ಪಷ್ಟನೆ ನೀಡಿದ್ದ ಚಂದನ್ ಶೆಟ್ಟಿ ಎರಡೂ ಹಾಡಿನ ಟೆಂಪೊ ಬೇರೆ ಬೇರೆ ಎಂದು ಸಮಜಾಯಿಷಿ ನೀಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ