ದರ್ಶನ್​ಗೆ ಪೊಲೀಸರಿಂದ ಮತ್ತೊಂದು ನೋಟಿಸ್​; ಈ ಬಾರಿ ದಾಸ ಮಾಡಿದ ಕಿರಿಕ್ ಏನು?

ನಟ ದರ್ಶನ್​ ಅವರಿಗೆ ಜಾಮೀನು ಸಿಕ್ಕಿರುವುದು ಗೊತ್ತೇ ಇದೆ. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕಿರಿಕ್​ಗಳು ನಿಂತಿಲ್ಲ. ಈಗ ಬೆಂಗಳೂರು ಪೊಲೀಸರಿಂದ ದರ್ಶನ್​ಗೆ ಹೊಸದೊಂದು ನೋಟಿಸ್ ಕಳಿಸಲಾಗಿದೆ. 7 ದಿನಗಳ ಒಳಗೆ ಈ ನೋಟಿಸ್​ಗೆ ಉತ್ತರ ನೀಡಬೇಕು ಎಂದು ತಿಳಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ದರ್ಶನ್​ಗೆ ಪೊಲೀಸರಿಂದ ಮತ್ತೊಂದು ನೋಟಿಸ್​; ಈ ಬಾರಿ ದಾಸ ಮಾಡಿದ ಕಿರಿಕ್ ಏನು?
Darshan
Follow us
Prajwal Kumar NY
| Updated By: ಮದನ್​ ಕುಮಾರ್​

Updated on:Jan 12, 2025 | 2:50 PM

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಸಿಲುಕಿರುವ ನಟ ದರ್ಶನ್​ಗೆ ಈಗ ಹೊಸ ಸಂಕಷ್ಟ ಶುರುವಾಗಿದೆ. ದರ್ಶನ್ ವಿರುದ್ಧ ಮತ್ತೊಂದು ಕ್ರಮಕ್ಕೆ ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ನಟನಿಗೆ ಇರುವ ಪ್ರಮುಖ ಸವಲತ್ತು ಹಿಂಪಡೆಯಲು ನಿರ್ಧಾರ ಮಾಡಲಾಗಿದೆ. ದರ್ಶನ್​ ಅವರ ಬಳಿ ಗನ್ ಲೈಸೆನ್ಸ್​ ಇದೆ. ಅದನ್ನು ಹಿಂಪಡೆಯುವ ಬಗ್ಗೆ ಪೊಲೀಸರು ಆಲೋಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ದರ್ಶನ್​ ಅವರಿಗೆ ಪೊಲೀಸರಿಂದ ನೋಟಿಸ್ ರವಾನೆ ಆಗಿದೆ. ಇದಕ್ಕೆ ದರ್ಶನ್ ಈಗ ಉತ್ತರ ನೀಡಬೇಕಿದೆ.

ಸೆಲೆಬ್ರಿಟಿ ಆಗಿರುವ ಕಾರಣದಿಂದ ದರ್ಶನ್ ಅವರು ತಮ್ಮ ಭದ್ರತೆಗಾಗಿ ಗನ್ ಲೈಸೆನ್ಸ್ ಪಡೆದಿದ್ದರು. ಆದರೆ ಈಗ ಅವರು ಕೊಲೆ ಪ್ರಕರಣದ ಆರೋಪಿ ಆಗಿರುವ ಕಾರಣ ಲೈನೆನ್ಸ್ ರದ್ದು ಮಾಡುವ ಕುರಿತು ಆಯೋಚಿಸಲಾಗಿದೆ. ‘ನಿಮ್ಮ ಬಳಿ ಇರುವ ಗನ್‌ ಲೈಸೆನ್ಸ್ ಯಾಕೆ ರದ್ದು ಮಾಡಬಾರದು’ ಎಂದು ಪ್ರಶ್ನಿಸಿ ನೋಟಿಸ್ ಕಳಿಸಲಾಗಿದೆ. 7 ದಿನಗಳಲ್ಲಿ ಈ ನೋಟಿಸ್​ಗೆ ಉತ್ತರ ನೀಡುವಂತೆ ದರ್ಶನ್ ಅವರಿಗೆ ಸೂಚಿಸಲಾಗಿದೆ.

ಒಂದಷ್ಟು ದಿನಗಳ ಹಿಂದೆ ದರ್ಶನ್​ ಮತ್ತು ಅವರ ಸಹಚರರಿಗೆ ಜಾಮೀನು ಸಿಕ್ಕಿತು. ಈ ಪ್ರಕರಣದ ಸಾಕ್ಷಿಗಳಿಗೆ ದರ್ಶನ್​ ಬೆದರಿಕೆ ಹಾಕುವ ಸಾಧ್ಯತೆ ಇದೆ. ಅಲ್ಲದೆ, ದರ್ಶನ್ ಅವರು ಗನ್ ಲೈಸೆನ್ಸ್ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಕೂಡ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್​ ಜಾರಿ ಮಾಡಿದ್ದಾರೆ. ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹು ಅವರಿಂದ ಈ ನೋಟಿಸ್ ಜಾರಿಯಾಗಿದೆ. ಜ.10ರಂದು ದರ್ಶನ್ ಅವರಿಗೆ ನೋಟಿಸ್ ತಲುಪಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಹೊರ ನಗರ, ರಾಜ್ಯಗಳಿಗೆ ತೆರಳಲು ದರ್ಶನ್, ಪವಿತ್ರಾ ಗೌಡಗೆ ನ್ಯಾಯಾಲಯ ಅನುಮತಿ

ಇನ್ನು, ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಕೂಡ ಅರ್ಜಿ ಸಲ್ಲಿಸಲಾಗಿದೆ. ಅದರ ವಿಚಾರಣೆ ಕೂಡ ಸದ್ಯದಲ್ಲೇ ನಡೆಯಲಿದೆ. ಒಂದು ವೇಳೆ ಸುಪ್ರೀಂ ಕೋರ್ಟ್​ನಲ್ಲಿ ಜಾಮೀನು ರದ್ದಾದರೆ ದರ್ಶನ್​ ಹಾಗೂ ಅವರ ಸಹಚರರಿಗೆ ಸಂಕಷ್ಟ ಹೆಚ್ಚಾಗಲಿದೆ. ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಹತ್ಯೆ ಮಾಡಿದ ಆರೋಪ ಅವರ ಮೇಲಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್​ ಈವರೆಗೂ ಶಸ್ತ್ರ ಚಿಕಿತ್ಸೆ ಮಾಡಿಸಿಲ್ಲ. ಆದರೆ ಬಳ್ಳಾರಿ ಜೈಲಿನಲ್ಲಿ ಇದ್ದಾಗ ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆ ಆಗಬೇಕಿದೆ ಎಂಬ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:49 pm, Sun, 12 January 25