
ಒಂದು ಗುರಿಯೆಡೆಗೆ ಅಚಲ ವಿಶ್ವಾಸದಿಂದ ಸಾಗುತ್ತಿದ್ದರೆ, ಅದಕ್ಕೆ ಬೇಕಾದ ಶ್ರಮವನ್ನು ಫಲಾಫಲದ ಅಪೇಕ್ಷೆ ಇಲ್ಲದೆ ಹಾಕುತ್ತಿದ್ದರೆ ಯಶಸ್ಸು ತನ್ನಂತಾನೆ ಅರಸಿ ಬರುತ್ತದೆ. ಯಶ್ ವಿಷಯದಲ್ಲಿ ಇದು ನಿಜ ಎನಿಸುತ್ತದೆ. ಅವರು ಗುಣಮಟ್ಟದ, ವಿಶ್ವದರ್ಜೆಯ ಸಿನಿಮಾ ನೀಡಬೇಕು ಎಂಬ ಗುರಿ ಹೊತ್ತು ಆ ಗುರಿಯತ್ತ ಸಾಗುತ್ತಿದ್ದಾರೆ. ಈ ಹಾದಿಯಲ್ಲಿ ಅವರಿಗೆ ತನ್ನಂತಾನೆ ಸಹಾಯ, ಬೆಂಬಲ ವ್ಯಕ್ತವಾಗುತ್ತಿದೆ. ಇದೀಗ ನಟ ಯಶ್ ಹಾಗೂ ಇತರೆ ಕೆಲವು ಸ್ಟಾರ್ ನಟರು ನಟಿಸುತ್ತಿರುವ ಸಿನಿಮಾಕ್ಕೆ ಹಾಲಿವುಡ್ನ ಬಲು ಯಶಸ್ವಿ ನಿರ್ಮಾಪಕರು ಕೈ ಜೋಡಿಸಿದ್ದಾರೆ.
ವಿಶ್ವ ಸಿನಿಮಾ ರಂಗದಲ್ಲಿಯೇ ಅತ್ಯುತ್ತಮ ಸಿನಿಮಾ ಎನಿಸಿಕೊಂಡಿರುವ ‘ದಿ ಡಾರ್ಟ್ ನೈಟ್ ರೈಸಸ್’, ‘ಥ್ರೀ ಕಿಂಗ್ಸ್’ ‘ಆಪನ್ಹೈಮರ್’ ಸೇರಿದಂತೆ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಡಾರ್ಕ್ ನೈಟ್’, ‘ಜಸ್ಟಿಸ್ ಲೀಗ್’, ಸೂಪರ್ ಮ್ಯಾನ್ ಸರಣಿಯ ಹಲವು ಸಿನಿಮಾ. ‘ಸೂಸೈಡ್ ಸ್ಕ್ವಾಡ್’, ‘ವಂಡರ್ ವುಮನ್’, ‘ಬ್ಯಾಟ್ಮ್ಯಾನ್ vs ಸೂಪರ್ ಮ್ಯಾನ್’ ಇನ್ನೂ ಹಲವಾರು ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಚಾರ್ಲ್ಸ್ ರೋವನ್ ಅವರು ಇದೀಗ ಯಶ್ ಅವರೊಟ್ಟಿಗೆ ಕೈ ಜೋಡಿಸಿದ್ದಾರೆ.
ರಣ್ಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾವನ್ನು ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿರುವುದು ಗೊತ್ತಿರುವ ಸಂಗತಿಯೇ ಈ ಸಿನಿಮಾಕ್ಕೆ ನಟ ಯಶ್ ಹಾಗೂ ನಮಿತ್ ಮಲ್ಹೋತ್ರಾ ಅವರು ಬಂಡವಾಳ ಹೂಡಿದ್ದಾರೆ. ಇದೀಗ ಈ ಇಬ್ಬರ ಜೊತೆಗೆ ಹಾಲಿವುಡ್ನ ಯಶಸ್ವಿ ನಿರ್ಮಾಪಕ ಚಾರ್ಲ್ಸ್ ರೋವನ್ ಸಹ ಕೈ ಜೋಡಿಸಿದ್ದಾರೆ. ಆ ಮೂಲಕ ಬಹು ಕೋಟಿ ವೆಚ್ಚದ ‘ರಾಮಾಯಣ’ ಸಿನಿಮಾಕ್ಕೆ ಆನೆ ಬಲ ಬಂದಂತಾಗಿದೆ.
ಇದನ್ನೂ ಓದಿ:ಯಶ್ರಂತಲ್ಲ ಅವರ ತಾಯಿ, ಮೊದಲ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ
ಚಾರ್ಲ್ಸ್ ರೋವನ್ ಅವರು ‘ರಾಮಾಯಣ’ ಸಿನಿಮಾದ ಎರಡೂ ಭಾಗಗಳಿಗೂ ಸಹ ನಿರ್ಮಾಪಕ ಮಾತ್ರವೇ ಅಲ್ಲದೆ ಅಮೆರಿಕ ಸೇರಿದಂತೆ ಇತರೆ ದೇಶಗಳಲ್ಲಿ ಸಿನಿಮಾದ ವಿತರಣೆಯನ್ನೂ ಸಹ ಮಾಡಲಿದ್ದಾರಂತೆ. ‘ರಾಮಾಯಣ’ ಸಿನಿಮಾವನ್ನು ‘ಬ್ಯಾಟ್ಮ್ಯಾನ್’, ‘ಸೂಪರ್ ಮ್ಯಾನ್’, ‘ಆಪನ್ಹೈಮರ್’ ಸಿನಿಮಾಗಳ ರೀತಿ ವಿಶ್ವಮಟ್ಟದಲ್ಲಿ ಜನ ಕೊಂಡಾಡಬೇಕು, ಸ್ವಾಗತಿಸಬೇಕು ಎಂಬುದು ನಿರ್ಮಾಪಕ ನಮಿತ್ ಮಲ್ಹೋತ್ರಾ ಆಸೆಯಂತೆ. ಇದೇ ಕಾರಣಕ್ಕೆ ಅವರು ಇದೀಗ ಖ್ಯಾತ ನಿರ್ಮಾಪಕ ಮತ್ತು ಮಾರುಕಟ್ಟೆ ತಜ್ಞರೂ ಆಗಿರು ಚಾರ್ಲ್ಸ್ ರೋವನ್ ಅವರನ್ನು ಕರೆತಂದಿದ್ದಾರೆ.
ರಾಮಾಯಣ ಕತೆ ಆಧರಿತ ಸಿನಿಮಾನಲ್ಲಿ ರಣ್ಬೀರ್ ಕಪೂರ್ ರಾಮನ ಪಾತ್ರದಲ್ಲಿ, ಯಶ್ ರಾವಣನ ಪಾತ್ರದಲ್ಲಿ ಮತ್ತು ಸಾಯಿ ಪಲ್ಲವಿ ಸೀತಾದೇವಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾಕ್ಕಾಗಿ ಹಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ‘ಮ್ಯಾಡ್ ಮ್ಯಾಕ್ಸ್’ ಸಿನಿಮಾಕ್ಕೆ ಆಕ್ಷನ್ ನಿರ್ದೇಶನ ಮಾಡಿದವರು ಈ ಸಿನಿಮಾಕ್ಕೆ ಆಕ್ಷನ್ ಕೊರಿಯೋಗ್ರಫಿ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ