ಸಿನಿಮಾದವರ ಕಥೆ ಹೇಳುವ ‘ಫಸ್ಟ್ ಡೇ ಫಸ್ಟ್ ಶೋ’ ಚಿತ್ರ; ಗಮನ ಸೆಳೆದ ಟ್ರೇಲರ್
‘ಫಸ್ಟ್ ಡೇ ಫಸ್ಟ್ ಶೋ’ ಸಿನಿಮಾದ ಟ್ರೇಲರ್ನಲ್ಲಿ ಪ್ರಕಾಶ್ ರಾಜ್ ಅವರ ಧ್ವನಿ ಹೈಲೈಟ್ ಆಗಿದೆ. ಶೀರ್ಷಿಕೆಯೇ ಸೂಚಿಸುವಂತೆ ಇದು ಸಿನಿಮಾ ಜಗತ್ತಿನ ಬಗ್ಗೆ ಇರುವಂತಹ ಸಿನಿಮಾ. ಆ ಕಾರಣದಿಂದ ಟ್ರೇಲರ್ ಗಮನ ಸೆಳೆದಿದೆ. ಗಿರೀಶ್ ನಿರ್ದೇಶನದ ಈ ಸಿನಿಮಾವನ್ನು ಊರ್ಮಿಳಾ ಕಿರಣ್ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಮಂದಿಯ ಬಗ್ಗೆಯೇ ಕಥೆ ಇರುವ ಸಿನಿಮಾಗಳ ಸಾಕಷ್ಟು ಬಂದಿವೆ. ಅವುಗಳ ಸಾಲಿಗೆ ಸೇರ್ಪಡೆ ಆಗುತ್ತಿರುವ ಇನ್ನೊಂದು ಸಿನಿಮಾ ‘ಫಸ್ಟ್ ಡೇ ಫಸ್ಟ್ ಶೋ’. ಈ ಚಿತ್ರದ ಟ್ರೇಲರ್ (1st Day 1st Show Trailer) ಬಿಡುಗಡೆ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ರಂಗದ ಪರಿಸ್ಥಿತಿ ಬದಲಾಗಿದೆ. ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಒಟಿಟಿಯಲ್ಲೇ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಚಿತ್ರಮಂದಿರದ ಸಂಸ್ಕೃತಿ ಮರೆಯಾಗುತ್ತಿದೆ ಎಂಬುದು ಹಲವರ ಅಭಿಪ್ರಾಯ. ಫಸ್ಟ್ ಡೇ ಫಸ್ಟ್ ಶೋ ಎಂಬ ಕ್ರೇಜ್ ಕೂಡ ಕಡಿಮೆ ಆಗುತ್ತಿದೆ. ಇದೆಲ್ಲದರ ನಡುವೆ ‘ಫಸ್ಟ್ ಡೇ ಫಸ್ಟ್ ಶೋ’ (1st Day 1st Show) ಶೀರ್ಷಿಕೆಯಲ್ಲೇ ಕನ್ನಡದ ಈ ಸಿನಿಮಾ (Kannada Cinema) ಸಿದ್ಧವಾಗಿದೆ.
‘ಒಂದ್ ಕಥೆ ಹೇಳ್ಲಾ’ ಖ್ಯಾತಿಯ ನಿರ್ದೇಶಕ ಗಿರೀಶ್ ಅವರು ‘ಫಸ್ಟ್ ಡೇ ಫಸ್ಟ್ ಶೋ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದು ಸಿನಿಮಾದ ಕುರಿತು ಸಿನಿಮಾ ಆದ್ದರಿಂದ ಸಿನಿಮಾ ಮಂದಿಗಂತೂ ತುಂಬಾನೇ ಸ್ಪೆಷಲ್. ಸಿನಿಪ್ರಿಯರಿಗೆ ಬಹಳ ಬೇಗ ಕನೆಕ್ಟ್ ಆಗುತ್ತದೆ. ಹಾಗಾಗಿ ಡಾ. ರಾಜ್ಕುಮಾರ್ , ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಶ್ ಅವರ ಅಭಿಮಾನಿಗಳಿಂದ ಟ್ರೇಲರ್ ಬಿಡುಗಡೆ ಮಾಡಿಸಲಾಯಿತು.

1st Day 1st Show Movie Team
ಸಾರಾ ಗೋವಿಂದು, ವೀರಕಪುತ್ರ ಶ್ರೀನಿವಾಸ್, ಮಾಲ್ಗುಡಿ ಡೇಸ್ ಖ್ಯಾತಿಯ ಮಂಜುನಾಥ್ ಮುಂತಾದವರು ‘ಫಸ್ಟ್ ಡೇ ಫಸ್ಟ್ ಶೋ’ ಸಿನಿಮಾ ತಂಡಕ್ಕೆ ಶುಭ ಕೋರಿದ್ದಾರೆ. ಟ್ರೇಲರ್ನಲ್ಲಿ ನಟ ಪ್ರಕಾಶ್ ರಾಜ್ ಅವರ ನಿರೂಪಣೆ ಇದೆ. ಗಿರೀಶ್ ಜಿ, ಜೀವಿತಾ ವಸಿಷ್ಟ, ಅನಿರುದ್ಧ ಶಾಸ್ತ್ರಿ, ರೋಹಿತ್ ಶ್ರೀನಾಥ್, ಬಿಎಂ ವೆಂಕಟೇಶ್, ಗಿಲ್ಲಿ ನಟ, ರೇಷ್ಮಾ ಲಿಂಗರಾಜಪ್ಪ, ಚಂದ್ರು, ಹರೀಶ್ ಅರಸು, ಶ್ಯಾಮ್, ಶೋಭಿತಾ ಶಿವಣ್ಣ, ಗಣೇಶ್, ಪ್ರಶಾಂತ್ ವೈಎನ್ ಮುಂತಾದವರು ನಟಿಸಿದ್ದಾರೆ.
ನಿರ್ದೇಶಕ ಗಿರೀಶ್ ಅವರ ಕನಸಿಗೆ ಬಂಡವಾಳ ಹೂಡಿದ್ದಾರೆ ಊರ್ಮಿಳಾ ಕಿರಣ್. ಮಧು ಕುಮಾರ್, ಯೋಗೇಶ್ ಶ್ರೀನಿವಾಸ್, ಸುನಿಲ್ ಸಿಬಿ, ವರುಣ್ ಜೆ, ಭಾಸ್ಕರ್ ಸಿಎಸ್ ಅವರು ಸಹ-ನಿರ್ಮಾಪಕರಾಗಿದ್ದಾರೆ. ಉಜ್ವಲ್ ಚಂದ್ರ ಅವರು ಸಂಕಲನ ಮಾಡಿದ್ದಾರೆ. ರಾಕೇಶ್ ಸಿ. ತಿಲಕ್ ಮತ್ತು ಅರುಣ್ ಕುಮಾರ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಸ್ವಾಮಿನಾಥನ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: ಯಶ್ ಸಿನಿಮಾ ಮೇಲೆ ಬಂಡವಾಳ ಹೂಡಿದ ಆಸ್ಕರ್ ವಿಜೇತ ಹಾಲಿವುಡ್ ನಿರ್ಮಾಪಕ
‘ಫಸ್ಟ್ ಡೇ ಫಸ್ಟ್ ಶೋ’ ಸಿನಿಮಾದ ಟ್ರೇಲರ್ ಬಿಡುಗಡೆ ನಂತರ ನಿರ್ದೇಶಕ ಗಿರೀಶ್ ಮಾತನಾಡಿದರು. ‘ಒಂದ್ ಕಥೆ ಹೇಳ್ಲಾ, ವಾವ್, ಶಾಲಿವಾಹನ ಶಕೆ ಬಳಿಕ ಫಸ್ಟ್ ಡೇ ಫಸ್ಟ್ ಶೋ ನನ್ನ ನಾಲ್ಕನೇ ಸಿನಿಮಾ. ಪ್ರತಿ ಸಿನಿಮಾ ಕೂಡ ಬೇರೆ ರೀತಿ ಅಭಿರುಚಿ ಹೊಂದಿವೆ. ಫಸ್ಟ್ ಡೇ ಫಸ್ಟ್ ಶೋ ಒಂದು ಕಥೆ ಎನ್ನುವುದಕ್ಕಿಂತ ಇಡೀ ಚಿತ್ರರಂಗವನ್ನು ಪ್ರತಿನಿಧಿಸುವ ಸೆಲೆಬ್ರೆಷನ್. ಕನ್ನಡ ಚಿತ್ರರಂಗದ ಬಗ್ಗೆ ಪಾಸಿಟಿವ್ ಭಾವನೆ ಮೂಡಲಿ ಎಂದು ಮಾಡಿರುವ ಸಿನಿಮಾ ಇದು’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.