ಆರು ತಿಂಗಳಲ್ಲಿ 120 ಸಿನಿಮಾ; ಸ್ಯಾಂಡಲ್ವುಡ್ನಲ್ಲಿ ಗೆಲುವಿಗಿಂತ ಸೋಲೇ ಹೆಚ್ಚು
2025ರ ಮೊದಲ ಆರು ತಿಂಗಳಲ್ಲಿ 120 ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ. ಜನವರಿಯಲ್ಲಿ 'ಛೂ ಮಂತರ್' ಮಾತ್ರ ಯಶಸ್ವಿಯಾಯಿತು. ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಯಾವುದೇ ಗಮನಾರ್ಹ ಚಿತ್ರಗಳು ಬಿಡುಗಡೆಯಾಗಲಿಲ್ಲ. ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಇದೆ.

ಪ್ರತಿ ವರ್ಷ ಬಂದಾಗಲೂ ಚಿತ್ರರಂಗದವರು ಹೊಸ ಹೊಸ ಕನಸು ಕಾಣುತ್ತಾರೆ. ಈ ವರ್ಷ ಒಂದೊಳ್ಳೆಯ ಸಿನಿಮಾ (Movie) ಕೊಡಬೇಕು ಎಂಬುದು ತಂತ್ರಜ್ಞರು ಹಾಗೂ ಕಲಾವಿದರ ಕನಸಾಗಿರುತ್ತದೆ. ಅದೇ ರೀತಿ ಪ್ರೇಕ್ಷಕ ಕೂಡ ಒಂದೊಳ್ಳೆಯ ಸಿನಿಮಾ ಬಂದರೆ ನೋಡಿ ಖುಷಿ ಪಡೋಣ ಎಂಬ ಆಸೆ ಇಟ್ಟುಕೊಂಡಿರುತ್ತಾನೆ. ಆದರೆ, ಈ ವರ್ಷ ಕನ್ನಡ ಪ್ರೇಕ್ಷಕರಿಗೆ ನಿರಾಸೆ ಆಗಿದೆ. 2025ರ ಮೊದಲ ಆರು ತಿಂಗಳಲ್ಲಿ ಸುಮಾರು 120 ಚಿತ್ರಗಳು ರಿಲೀಸ್ ಆಗಿದ್ದು, ಈವರೆಗೆ ದೊಡ್ಡ ಗೆಲುವು ಸಿಕ್ಕಿಲ್ಲ.
ಜನವರಿ..
ಸಿನಿಮಾ ರಂಗದಲ್ಲಿ ಜನವರಿ ಬಂತು ಎಂದರೆ ಸುಗ್ಗಿಯ ವಾತಾವರಣ ನಿರ್ಮಾಣ ಆಗುತ್ತದೆ. ಏಕೆಂದರೆ ಸಂಕ್ರಾಂತಿ, ಗಣರಾಜ್ಯೋತ್ಸವದ ಕಾರಣಗಳಿಂದ ಹೆಚ್ಚೆಚ್ಚು ಚಿತ್ರಗಳು ರಿಲೀಸ್ ಆಗುತ್ತವೆ. ಆದರೆ, ಈ ಬಾರಿ ದೊಡ್ಡ ಹಬ್ಬದ ವಾತಾವರಣವೇನು ಇರಲಿಲ್ಲ. ‘ಛೂ ಮಂತರ್’, ‘ಸಂಜು ವೆಡ್ಸ್ ಗೀತಾ 2’, ‘ಫಾರೆಸ್ಟ್’, ‘ಗಣ’, ‘ರುದ್ರ ಗರುಡ ಪುರಾಣ’ ರೀತಿಯ ಚಿತ್ರಗಳು ರಿಲೀಸ್ ಆದವು. ಈ ಪೈಕಿ ಹೆಚ್ಚು ಸದ್ದು ಮಾಡಿದ್ದು ಶರಣ್ ನಟನೆಯ ‘ಛೂ ಮಂತರ್’ ಸಿನಿಮಾ ಮಾತ್ರ. ಈ ಸಿನಿಮಾ ವಿಶ್ವಾದ್ಯಂತ 5 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಎನ್ನಲಾಗಿದೆ. ಅಚ್ಚರಿ ಎಂದರೆ ಈ ವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾ ಇದಾಗಿದೆ.
ಫೆಬ್ರವರಿ
ಫೆಬ್ರವರಿ ಲವರ್ಸ್ ತಿಂಗಳು. ಹೀಗಾಗಿ, ಲವ್ಸ್ಟೋರಿ ಕಥೆಯ ಚಿತ್ರಗಳು ಹೆಚ್ಚೆಚ್ಚು ರಿಲೀಸ್ ಆಗುತ್ತವೆ. ಆದರೆ, ಈ ಬಾರಿ ಯಾವ ಚಿತ್ರವನ್ನೂ ಪ್ರೇಕ್ಷಕ ಕೈ ಹಿಡಿದಿಲ್ಲ. ‘ಅಧಿಪತ್ರ’, ‘ಭುವನಂ ಗಗನಂ’, ‘ಸಿದ್ಲಿಂಗು 2’, ಚಿತ್ರಗಳು ತೆರೆಗೆ ಬಂದವು. ಆದರೆ, ಯಾವುದೂ ಸದ್ದು ಮಾಡಲೇ ಇಲ್ಲ.
ಮಾರ್ಚ್ to ಜೂನ್.
ಮಾರ್ಚ್ ತಿಂಗಳಲ್ಲಿ ಐಪಿಎಲ್ ಕ್ರೇಜ್ ಜೋರಾಗಿತ್ತು. ಹೀಗಾಗಿ, ಈ ವೇಳೆ ಹೆಚ್ಚು ಸಿನಿಮಾಗಳನ್ನು ರಿಲೀಸ್ ಮಾಡಲು ಯಾರೂ ಆಸಕ್ತಿ ತೋರಿಸಿಲ್ಲ. ಹೀಗಾಗಿ, ಈ ಅವಧಿಯಲ್ಲಿ ಚಿತ್ರರಂಗ ಡಲ್ ಆಗಿಯೇ ಇತ್ತು. ‘ಮನದ ಕಡಲು’, ‘ವಿದ್ಯಾಪತಿ’, ‘ಅಜ್ಞಾತವಾಸಿ’, ‘ವೀರ ಚಂದ್ರಹಾಸ’, ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗಳು ತೆರೆಗೆ ಬಂದವು. ಆದರೆ, ಈ ಪೈಕಿ ‘ಅಜ್ಞಾತವಾಸಿ’, ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗಳು ಮೆಚ್ಚುಗೆ ಪಡೆದವು.
ನಿರಾಸೆ ಬೇಡ..
ಕಳೆದ ಆರು ತಿಂಗಳಿಂದ ವಿವಿಧ ಕಾರಣಕ್ಕೆ ಸಿನಿಮಾಗಳು ರಿಲೀಸ್ ಆಗದೇ ಇರಬಹುದು. ಆದರೆ, ಮುಂಬರುವ ತಿಂಗಳಲ್ಲಿ ಹಲವು ದೊಡ್ಡ ಸಿನಿಮಾಗಳು ರಿಲೀಸ್ಗೆ ರೆಡಿ ಇವೆ. ಸಿವಣ್ಣ, ಉಪೇಂದ್ರ ನಟನೆಯ ‘45’, ಧ್ರುವ ಅಭಿನಯದ ‘ಕೆಡಿ’ ಚಿತ್ರಗಳ ಬಗ್ಗೆ ನಿರೀಕ್ಷೆ ಇದೆ. ದರ್ಶನ್ ನಟನೆಯ ‘ಡೆವಿಲ್’ ಕೂಡ ಈ ವರ್ಷವೇ ಬರಲಿ ಎಂಬುದು ಫ್ಯಾನ್ಸ್ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Sat, 21 June 25