ಸರಿಯಾಗಿ ಒಂದು ವರ್ಷದ ಹಿಂದಿನ ಮಾತು. ಹೀಗಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. 2020ರ ಜೂನ್ 7ರ ಮಧ್ಯಾಹ್ನ ‘ಹೃದಯಾಘಾತದಿಂದ ಚಿರಂಜೀವಿ ಸರ್ಜಾ ನಿಧನ ಹೊಂದಿದ್ದಾರೆ’ ಎನ್ನುವ ವಿಚಾರ ಸಿಡಿಲಂತೆ ಬಂದಪ್ಪಳಿಸಿತ್ತು. ಈ ವಿಚಾರವನ್ನು ಅನೇಕರು ನಂಬಲೂ ಸಾಧ್ಯವಾಗಿರಲಿಲ್ಲ. ಅವರ ಕುಟುಂಬ ಹಾಗೂ ಅಭಿಮಾನಿಗಳು ಕಣ್ಣೀರಲ್ಲಿ ಮುಳುಗುವಂತಾಯಿತು. ಈ ಕಹಿ ನೆನಪಿಗೆ ಈಗ ಒಂದು ವರ್ಷ.
2020 ಇಡೀ ಜಗತ್ತಿನ ಪಾಲಿಗೆ ಕೆಟ್ಟ ವರ್ಷ ಎಂದು ಪರಿಗಣಿಸಲ್ಪಟ್ಟಿದೆ. 2020ರ ಆರಂಭದಲ್ಲಿ ಕೊರೊನಾ ವೈರಸ್ ವಿಶ್ವಾದ್ಯಂತ ಹರಡಿತ್ತು. ಅಲ್ಲದೆ, ಸಾಕಷ್ಟು ಸೆಲೆಬ್ರಿಟಿಗಳು ಕೂಡ ಮೃತಪಟ್ಟಿದ್ದು ಸಿನಿಪ್ರಿಯರಿಗೆ ತೀವ್ರ ನೋವಾಗಿತ್ತು. ಅದೆ ರೀತಿ ಜೂನ್ 7ರಂದು ಚಿರು ಹೃದಯಾಘಾತದಿಂದ ಮೃತಪಟ್ಟರು. ಇದನ್ನು ಅರಗಿಸಿಕೊಳ್ಳೋಕೆ ಅವರ ಪತ್ನಿ ಮೇಘನಾ ರಾಜ್ ತುಂಬಾನೇ ಕಷ್ಟಪಟ್ಟಿದ್ದಾರೆ.
ಚಿರಂಜೀವಿ ಸರ್ಜಾ ನಿಧನರಾಗುವುದಕ್ಕೂ ಒಂದು ದಿನ ಮೊದಲು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತಂತ. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರ ವಯುಸ್ಸು ಚಿಕ್ಕದಾದ್ದರಿಂದ ಇದು ಹೃದಯ ಸಂಬಂಧಿ ಕಾಯಿಲೆ ಇರಬಹುದು ಎಂದು ಕುಟುಂಬದವರು ಭಾವಿಸಿರಲಿಲ್ಲ. ಮನೆಗೆ ಬಂದ ನಂತರ ಉಸಿರಾಟದ ತೊಂದರೆ ಜೊತೆಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಆಗಲೇ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿತ್ತು.
2009ರಲ್ಲಿ ತೆರೆಗೆ ಬಂದ ವಾಯುಪುತ್ರ ಸಿನಿಮಾ ಮೂಲಕ ಚಿರು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದರು. ಅವರು ನಿಧನರಾಗುವುದಕ್ಕೂ ಕೆಲ ತಿಂಗಳ ಮೊದಲು ಅವರ ನಟನೆಯ ‘ಶಿವಾರ್ಜುನ’ ಸಿನಿಮಾ ರಿಲೀಸ್ ಆಗಿತ್ತು. ಲಾಕ್ಡೌನ್ ಕಾರಣದಿಂದ ಸಿನಿಮಾ ಚಿತ್ರಮಂದಿರಗಳಿಂದ ತೆಗೆಯಬೇಕಾದ ಅನಿವಾರ್ಯತೆ ಬಂದಿತ್ತು.
ಮೊದಲ ವರ್ಷದ ಪುಣ್ಯತಿಥಿಗೂ ಮೊದಲು ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ‘ನನ್ನವನು’ ಎಂದು ಬರೆದುಕೊಂಡಿದ್ದಾರೆ. ಕೊರೊನಾ ವೈರಸ್ ಮಿತಿಮೀರಿದೆ. ಹೀಗಾಗಿ, ಇಂದು (ಜೂನ್ 7) ಚಿರು ಅವರ ಒಂದು ವರ್ಷದ ಪುಣ್ಯಸ್ಮರಣೆ ಕಾರ್ಯವನ್ನ ಸರ್ಜಾ ಕುಟುಂಬ ಸಿಂಪಲ್ ಆಗಿ ಮಾಡಲಿದೆ.
ಇದನ್ನೂ ಓದಿ: ಮೇಘನಾ ರಾಜ್ - ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರುಗೆ ಹೆಜ್ಜೆ ಹೆಜ್ಜೆಗೂ ಪ್ರೀತಿ ತೋರಿಸುತ್ತಿರುವ ಫ್ಯಾನ್ಸ್