ಸಿಎಂ, ಡಿಸಿಎಂ ಸಹಿತ ಹಲವು ರಾಜಕಾರಣಿಗಳಿಂದ ಶಿವಣ್ಣನಿಗೆ ಶುಭಾಶಯ: ಯಾರು ಏನಂದರು?
Shiva Rajkumar: ಶಿವಣ್ಣನ ಹುಟ್ಟುಹಬ್ಬಕ್ಕೆ ಚಿತ್ರರಂಗದವರು ಮಾತ್ರವಲ್ಲ ಸಿಎಂ, ಡಿಸಿಎಂ ಸಹಿತ ಕೆಲವು ರಾಜಕಾರಣಿಗಳೂ ಶುಭ ಹಾರೈಸಿದ್ದಾರೆ.
ಶಿವರಾಜ್ ಕುಮಾರ್ (Shiva Rajkumar) ಸಿನಿಮಾ ರಂಗದವರಿಗೆ (Sandalwood) ಮಾತ್ರವಲ್ಲ ರಾಜಕೀಯ ರಂಗದವರಿಗೂ ಬಹು ಆಪ್ತರು. ರಾಜಕೀಯದಿಂದ ಬಹು ದೊಡ್ಡ ಅಂತರವನ್ನೇನೂ ಶಿವರಾಜ್ ಕುಮಾರ್ ಕಾಯ್ದುಕೊಂಡಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ (Assembly Election) ಅವರು ಕಾಂಗ್ರೆಸ್ ಪರವಾಗಿ ಪ್ರಚಾರಕ್ಕಿಳಿದಿದ್ದರು. ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್‍ಕುಮಾರ್ ಕಾಂಗ್ರೆಸ್ನ ಸಕ್ರಿಯ ಸದಸ್ಯರು. ಹಾಗಾಗಿ ಇಂದು (ಜುಲೈ 12) ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ (Birthday) ಸಿನಿಮಾ ರಂಗದವರು ಮಾತ್ರವಲ್ಲದೆ ರಾಜ್ಯದ ಹಲವು ಪ್ರಮುಖ ರಾಜಕಾರಣಿಗಳು ಸಹ ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಸಿದ್ದಾರೆ.
”ಕನ್ನಡ ಚಿತ್ರರಂಗದ ಖ್ಯಾತ ಹಾಗೂ ಪ್ರತಿಭಾವಂತ ನಟ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಟನಾ ಕೌಶಲದಿಂದ ಮಾತ್ರವಲ್ಲ ತಮ್ಮ ವಿನಯಶೀಲ ನಡೆ-ನುಡಿಗಳಿಂದಲೂ ಕೋಟ್ಯಂತರ ಜನರ ಪ್ರೀತಿ-ಅಭಿಮಾನಗಳಿಗೆ ಪಾತ್ರರಾಗಿರುವ ಶಿವರಾಜ್ ಕುಮಾರ್ ಅವರಿಗೆ ಆಯುಷ್ಯ ಮತ್ತು ಆರೋಗ್ಯದ ಭಾಗ್ಯ ಕೂಡಿ ಬರಲಿ ಎಂದು ಹಾರೈಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ. ಶಿವರಾಜ್ ಕುಮಾರ್ ಅವರೊಟ್ಟಿಗಿನ ಚಿತ್ರವನ್ನೂ ಹಂಚಿಕೊಂಡಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ”ಕನ್ನಡದ ಖ್ಯಾತ ನಟ, ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶ್ರೀ ಡಾ.ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮಿಂದ ಚಿತ್ರರಂಗ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತಾ, ಭಗವಂತನ ಆಶೀರ್ವಾದ ಸದಾ ತಮ್ಮ ಮೇಲೆ ಇರಲಿ ಎಂದು ಶುಭ ಹಾರೈಸುತ್ತೇನೆ” ಎಂದಿದ್ದಾರೆ. ಇಬ್ಬರೂ ಜೊತೆಗಿರುವ ಚಿತ್ರವೊಂದನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:Shivanna meets DKS: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಗೆ ಪತ್ನಿಯೊಂದಿಗೆ ಆಗಮಿಸಿದ ನಟ ಶಿವರಾಜ್ ಕುಮಾರ್
ಸಚಿವ ಎಂಬಿ ಪಾಟೀಲ್ ಸಹ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ”ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯ, ವ್ಯಕ್ತಿತ್ವ ಹಾಗೂ ಹೋರಾಟಗಳಿಂದ ವಿಶೇಷ ವರ್ಚಸ್ಸು ಹೊಂದಿರುವ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಇನ್ನೂ ಹೆಚ್ಚಿನ ಕಲಾಸೇವೆ ಮಾಡಲು ಉತ್ತಮ ಆರೋಗ್ಯ ಮತ್ತು ಧೀರ್ಘಾಯುಷ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.
ಶಿವರಾಜ್ ಕುಮಾರ್ ಅವರ ಬಂಧುವಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಹ ಭಾವನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ”ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಹಾಗೂ ನನ್ನ ಪ್ರೀತಿಯ ಬಾವ ಡಾ ಶಿವಣ್ಣ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ಸಚಿವ ಜಮೀರ್ ಅಹ್ಮದ್ ಸಹ ಶಿವಣ್ಣನಿಗೆ ಶುಭ ಹಾರೈಸಿದ್ದು, ”ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‍ಕುಮಾರ್ ಅವರ ಹುಟ್ಟುಹಬ್ಬದಂದು ಆತ್ಮೀಯ ಶುಭಾಶಯಗಳು. ತಮ್ಮ ಕಲಾ ಸೇವೆ ನಿರಂತರವಾಗಿರಲಿ, ನಾಡಿನ ಚಿತ್ರರಂಗದ ಕೀರ್ತಿಯನ್ನು ಮತ್ತಷ್ಟು ಬೆಳಗಲಿ, ಉತ್ತಮ ಆಯುರಾರೋಗ್ಯ ತಮಗಿರಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ