ನಟ ದರ್ಶನ್ ‘ಕಾಟೇರ’ (Kaatera) ಮೂಲಕ ವೃತ್ತಿ ಜೀವನದ ಬಹು ದೊಡ್ಡ ಹಿಟ್ ಸಿನಿಮಾ ನೀಡಿದ್ದಾರೆ. ಆದರೆ ಆ ಖುಷಿಯ ಜೊತೆಗೆ ಕೆಲವು ವಿವಾದಗಳು ಸಹ ದರ್ಶನ್ ಅವರನ್ನು ಸುತ್ತಿಕೊಂಡಿವೆ. ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸಾಧನೆಯನ್ನು ಸಂಭ್ರಮಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದರ್ಶನ್ ಆಡಿದ ಮಾತುಗಳು ಹಾಗೂ ಆ ನಂತರ ‘ಕಾಟೇರ’ ಸಿನಿಮಾದ 50ನೇ ದಿನದ ಸಂಭ್ರಮಾಚರಣೆಯಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ಆಡಿದ ಮಾತುಗಳು ದರ್ಶನ್ ಅವರಿಗೆ ಸಂಕಷ್ಟ ತಂದೊಡ್ಡಿವೆ.
ದರ್ಶನ್ ವಿರುದ್ಧ ಈಗಾಗಲೇ ನಾಲ್ಕು ದೂರುಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಇದೀಗ ರೇಣುಕಮ್ಮ ಎಂಬುವರು 37ನೇ ACMM ಕೋರ್ಟ್ ನಲ್ಲಿ ಖಾಸಗಿ ದೂರನ್ನು ದರ್ಶನ್ ವಿರುದ್ಧ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 295(A), 509, 298, 504 ಅಡಿ ಕೇಸ್ ನಮೂದಿಸುವಂತೆ ಖಾಸಗಿ ದೂರನ್ನು ರೇಣುಕಮ್ಮ ದಾಖಲಿಸಿದ್ದಾರೆ. IPC 295(A), ಉದ್ದೇಶ ಪೂರ್ವಕವಾಗಿ ಹೇಳಿಕೆ ನೀಡುವುದು, IPC 509- ಮಹಿಳೆಯರನ್ನು ಅವಮಾನಿಸುವ ಉದ್ದೇಶ, IPC-298- ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವುದು, IPC- 504- ಶಾಂತಿ ಭಂಗಕ್ಕೆ ಪ್ರಚೋದನೆ ನೀಡುವ ಕಾರ್ಯಕ್ರಮಗಳನ್ನು ದರ್ಶನ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಇದನ್ನೂ ಓದಿ:‘ಶೀಘ್ರವೇ ಹೊಸ ದಿನಾಂಕ ಪ್ರಕಟಿಸುತ್ತೇವೆ’; ದರ್ಶನ್ ರ‍್ಯಾಲಿ ರದ್ದಾದ ಬಗ್ಗೆ ಮಾಹಿತಿ ನೀಡಿದ ಫ್ಯಾನ್ಸ್
ರೇಣುಕಮ್ಮ ಪರ ವಕೀಲ ರಂಗನಾಥ್ ಅವರು 37ನೇ ACMM ಕೋರ್ಟ್ ನಲ್ಲಿ ವಾದ ಮಂಡನೆ ಮಾಡಿದ್ದಾರೆ. ಪ್ರಕರಣದ ಅರ್ಜಿ ವಿಚಾರಣೆ ನಡೆಸಿ ಮುಂದೂಡಿದ ACMM ನ್ಯಾಯಾಲಯವು ಮಾರ್ಚ್ 1 ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ. ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಸಹ ದೂರುಗಳನ್ನು ದಾಖಲು ಮಾಡಿವೆ. ಆ ದೂರುಗಳ ವಿಚಾರಣೆ ಇನ್ನಷ್ಟೆ ಆಗಬೇಕಿದೆ. ಈಗ ದಾಖಲಾಗಿರುವ ದೂರುಗಳ ಕುರಿತಾಗಿ ದರ್ಶನ್ಗೆ ನೋಟೀಸ್ ಜಾರಿ ಆಗಿರುವ ಬಗ್ಗೆ ಯಾವುದೇ ಮಾಹಿತಿ ಈವರೆಗೆ ಬಂದಿಲ್ಲ.
‘ಕಾಟೇರ’ ಸಿನಿಮಾದ 50ನೇ ದಿನದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಾತನಾಡಿದ್ದ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರನ್ನು ಉದ್ದೇಶಿಸಿ, ‘ತಗಡು’, ‘ಗುಮ್ಮಿಸ್ಕೋತೀಯ’ ಎಂಬಿತ್ಯಾದಿ ಪದಗಳನ್ನು ಬಳಸಿ ಮೂದಲಿಸಿದ್ದರು. ಉಮಾಪತಿ ಶ್ರೀನಿವಾಸ್, ‘ಉಪಾಧ್ಯಕ್ಷ’ ಸಿನಿಮಾದ ಪ್ರಚಾರದ ಸಮಯದಲ್ಲಿ ‘ಕಾಟೇರ’ ಸಿನಿಮಾದ ಕತೆ ತಾವು ಮಾಡಿಸಿದ್ದು ಎಂದು ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ದರ್ಶನ್ ಆ ಪದಗಳನ್ನು ಬಳಸಿ ಎಚ್ಚರಿಕೆಯ ಧ್ವನಿಯಲ್ಲಿ ಮಾತನಾಡಿದ್ದರು.
ಅದಕ್ಕೆ ಮುನ್ನ ದರ್ಶನ್ ಚಿತ್ರರಂಗದಕ್ಕೆ ಕಾಲಿರಿಸಿ 25 ವರ್ಷಗಳಾದ ಸಂಭ್ರಮಾಚರಣೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಇಂದು ಇವಳು ಇರ್ತಾಳೆ, ನಾಳೆ ಅವಳು ಇರ್ತಾಳೆ’ ಎಂಬ ಪದಬಳಕೆ ಮಾಡಿದ್ದರು. ಇದರ ಬಗ್ಗೆಯೂ ಈಗ ವಿವಾದ ಆಗಿದ್ದು, ಮಹಿಳಾಪರ ಸಂಘಟನೆಗಳು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿವೆ. ತಮ್ಮ ವಿರುದ್ಧ ದಾಖಲಾದ ದೂರುಗಳ ಬಗ್ಗೆ ದರ್ಶನ್ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ