‘ಟಾಕ್ಸಿಕ್’ಗೆ ಮತ್ತೊಂದು ಸಂಕಷ್ಟ: ಸಿಬಿಎಫ್​​ಸಿಗೆ ದೂರು ಸಲ್ಲಿಕೆ

Toxic movie teaser: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಜನವರಿ 08 ರಂದು ಬಿಡುಗಡೆ ಆಗಿದೆ. ಟೀಸರ್​​ನಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಕೆಲ ದೃಶ್ಯಗಳು ಇದ್ದು, ಇವು ಟೀಸರ್​​ನ ಬಗ್ಗೆ ಚರ್ಚೆ ಹೆಚ್ಚಾಗಲು ಕಾರಣವಾಗಿವೆ. ಈಗಾಗಲೇ ‘ಟಾಕ್ಸಿಕ್’ ಟೀಸರ್​​ನ ವಿರುದ್ಧ ಕೆಲ ದೂರುಗಳು ದಾಖಲಾಗಿದ್ದು, ಇದೀಗ ಸಿಬಿಎಫ್​ಸಿ (ಸೆನ್ಸಾರ್ ಮಂಡಳಿ)ಗೆ ಸಹ ದೂರು ಸಲ್ಲಿಸಲಾಗಿದೆ.

‘ಟಾಕ್ಸಿಕ್’ಗೆ ಮತ್ತೊಂದು ಸಂಕಷ್ಟ: ಸಿಬಿಎಫ್​​ಸಿಗೆ ದೂರು ಸಲ್ಲಿಕೆ
Toxoc

Updated on: Jan 13, 2026 | 2:26 PM

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಟೀಸರ್ ಬಗ್ಗೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಟೀಸರ್ ತುಂಬಾ ಹಾಟ್ ಆಯ್ತೆಂದು ಕೆಲವರು, ಅನವಶ್ಯಕ ಹಾಟ್ ದೃಶ್ಯ ಸೇರಿಸಲಾಗಿದೆ ಎಂದು ಮತ್ತೊಬ್ಬರು. ಇನ್ನು ಕೆಲವರು ಟೀಸರ್​ನ ಪರವಾಗಿಯೂ ವಾದ ಮಂಡಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ, ಸಿನಿಮಾದ ವಿರುದ್ಧ ದೂರುಗಳು ದಾಖಲಾಗಲು ಆರಂಭವಾಗಿವೆ. ನಿನ್ನೆ ‘ಟಾಕ್ಸಿಕ್’ ಸಿನಿಮಾ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿತ್ತು. ಮಕ್ಕಳ ಆಯೋಗವು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಇದೀಗ ಸಿಬಿಎಫ್​​ಸಿ (ಸೆನ್ಸಾರ್ ಮಂಡಳಿ)ಗೆ ದೂರು ದಾಖಲಾಗಿದೆ.

‘ಟಾಕ್ಸಿಕ್’ ಸಿನಿಮಾದ ಟೀಸರ್​​ನಲ್ಲಿ ಅಶ್ಲೀಲ ಹಾಗೂ ನೈತಿಕತೆಗೆ ವ್ಯತಿರಿಕ್ತವಾದ ದೃಶ್ಯಗಳಿವೆ ಎಂದು ಆರೋಪಿಸಲಾಗಿದ್ದು, ಸಾಮಾಜಿಕ ಕಾರ್ಯಕರ್ತರ ದಿನೇಶ್ ಕಲ್ಲಹಳ್ಳಿ, (ಸಿಬಿಎಫ್​​ಸಿ) ಸೆನ್ಸಾರ್ ಮಂಡಳಿಗೆ ಈ ಬಗ್ಗೆ ದೂರು ದಾಖಲಿಸಿದ್ದು, ‘ಟಾಕ್ಸಿಕ್’ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಬಾರದೆಂದು ಆಗ್ರಹಿಸಿದ್ದಾರೆ. ಟೀಸರ್‌ನಲ್ಲಿ ಲೈಂಗಿಕವಾಗಿ ಪ್ರಚೋದಿಸುವ ಹಾಗೂ ಅಶ್ಲೀಲ ದೃಶ್ಯಗಳಿವೆ, ಅವು ಅಪ್ರಾಪ್ತ ವಯಸ್ಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಕಳವಳ ವ್ಯಕ್ತಪಡಿಸಿರುವ ದಿನೇಶ್ ಕಲ್ಲಹಳ್ಳಿ, ಸಿನೆಮಾದ ಟೀಸರ್ ಸಾಮಾಜಿಕ ನೈತಿಕತೆಯ ಮಿತಿಯನ್ನು ಮೀರಿದೆ, ಆದ್ದರಿಂದ ಕೂಡಲೇ ಈ ದೃಶ್ಯಗಳನ್ನು ತೆಗೆದುಹಾಕಬೇಕು, ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಹೇಳಿದೆ.

ಇದನ್ನೂ ಓದಿ:ಯಶ್ ಜೊತೆ ಕಾರಿನಲ್ಲಿದ್ದ ಯುವತಿ ಯಾರು? ಖಾತ್ರಿ ಪಡಿಸಿದ ನಿರ್ದೇಶಕಿ

‘ಟಾಕ್ಸಿಕ್’ ಸಿನಿಮಾದ ವಿರುದ್ಧ ಕರ್ನಾಟಕ ಎಎಪಿಯ ಮಹಿಳಾ ಘಟಕವು ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಈ ಚಿತ್ರದ ಟೀಸರ್‌ನಲ್ಲಿ ಕೆಲವು ದೃಶ್ಯಗಳು ಅಶ್ಲೀಲವಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ. ಯಾವುದೇ ವಯೋಮಾನದ ಎಚ್ಚರಿಕೆ ಇಲ್ಲದೆ ಸಾರ್ವಜನಿಕ ವಲಯದಲ್ಲಿ ಬಿಡುಗಡೆಯಾದ ಈ ದೃಶ್ಯಗಳು ಮಹಿಳೆಯರ ಘನತೆಯನ್ನು ಕುಗ್ಗಿಸುತ್ತವೆ ಮತ್ತು ಕನ್ನಡ ಸಂಸ್ಕೃತಿಯನ್ನು ಅವಮಾನಿಸುತ್ತವೆ” ಎಂದು ಎಎಪಿ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಟೀಸರ್ ಜನವರಿ 08 ರಂದು ಬಿಡುಗಡೆ ಆಗಿದೆ. ಟೀಸರ್​​ನಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಕೆಲ ದೃಶ್ಯಗಳು ಇದ್ದು, ಇವು ಟೀಸರ್​​ನ ಬಗ್ಗೆ ಚರ್ಚೆ ಹೆಚ್ಚಾಗಲು ಕಾರಣವಾಗಿವೆ. ಸಿನಿಮಾದ ಟೀಸರ್ ಈಗಾಗಲೇ 300 ಮಿಲಿಯನ್​​ಗೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದೆ. ‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಅವರುಗಳು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:26 pm, Tue, 13 January 26