ಕೊರೊನಾದಿಂದ ಸ್ನೇಹಿತನನ್ನ ಕಳೆದುಕೊಂಡು ಸ್ಮಶಾನದಲ್ಲಿ ಮರುಗಿದ ಜಿಮ್​ ರವಿ

ಮೃತರ ಅಂತ್ಯಕ್ರಿಯೆಗಾಗಿ ಕುಟುಂಬದವರು ಸಾಲುಗಟ್ಟಿ ನಿಂತಿರುವ ದೃಶ್ಯ ನೋಡಿದರೆ ಮನ ಕಲಕುತ್ತದೆ. ಚಾಮರಾಜಪೇಟೆಯ ಸ್ಮಶಾನದಲ್ಲಿ ವಿಡಿಯೋ ಮಾಡಿರುವ ರವಿ ಅವರು ಅಲ್ಲಿನ ಚಿತ್ರಣವನ್ನು ವಿವರಿಸಿದ್ದಾರೆ.

ಕೊರೊನಾದಿಂದ ಸ್ನೇಹಿತನನ್ನ ಕಳೆದುಕೊಂಡು ಸ್ಮಶಾನದಲ್ಲಿ ಮರುಗಿದ ಜಿಮ್​ ರವಿ
ಜಿಮ್ ರವಿ
Follow us
ಮದನ್​ ಕುಮಾರ್​
|

Updated on: May 02, 2021 | 7:57 AM

ಕೋವಿಡ್​​ 2ನೇ ಅಲೆಗೆ ಇಡೀ ದೇಶವೇ ತತ್ತರಿಸಿದೆ. ಪ್ರತಿದಿನ ಹೆಣಗಳು ಉರುಳುತ್ತಿವೆ. ಪ್ರಾಣ ಹೋಗುತ್ತಿದ್ದರೂ ಕೂಡ ಆಸ್ಪತ್ರೆಗಳಲ್ಲಿ ಬೆಡ್​ ಸಿಗದಂತಹ ದುಸ್ಥಿತಿ ನಿರ್ಮಾಣ ಆಗಿದೆ. ಬೆಂಗಳೂರಿನಲ್ಲಂತೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸೆಲೆಬ್ರಿಟಿಗಳು ಕೂಡ ಈ ಸಂದರ್ಭದಲ್ಲಿ ಅಸಹಾಯಕರಾಗಿದ್ದಾರೆ. ತಮ್ಮವರನ್ನು ಕಳೆದುಕೊಂಡು ಅನೇಕರು ಕಷ್ಟ ಪಡುತ್ತಿದ್ದಾರೆ. ಇತ್ತೀಚೆಗೆ ನಟ ಜಿಮ್​ ರವಿ ಅವರ ಸ್ನೇಹಿತರೊಬ್ಬರು ನಿಧನರಾಗಿದ್ದು, ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ರವಿ ದುಃಖ ತೋಡಿಕೊಂಡಿದ್ದಾರೆ.

ಮೃತರ ಅಂತ್ಯಕ್ರಿಯೆಗಾಗಿ ಕುಟುಂಬದವರು ಸಾಲುಗಟ್ಟಿ ನಿಂತಿರುವ ದೃಶ್ಯ ನೋಡಿದರೆ ಮನ ಕಲಕುತ್ತದೆ. ಚಾಮರಾಜಪೇಟೆಯ ಸ್ಮಶಾನದಲ್ಲಿ ವಿಡಿಯೋ ಮಾಡಿರುವ ರವಿ ಅವರು ಅಲ್ಲಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ನೂರಾರು ಹೆಣಗಳನ್ನು ಸುಡುತ್ತಿರುವ ದೃಶ್ಯ ಪರಿಸ್ಥಿತಿಯ ಭೀಕರತೆಯನ್ನು ಕಣ್ಣಿಗೆ ಕಟ್ಟುತ್ತಿದೆ.

‘ಇಲ್ಲಿ ಎಷ್ಟು ಸಾವಿರ ಜನ ಸಾಯುತ್ತಿದ್ದಾರೆ ನೋಡಿ. ಇವತ್ತು ನನ್ನ ಸ್ನೇಹಿತರೊಬ್ಬರು ತೀರಿಕೊಂಡರು. ಅವರ ಅಂತ್ಯ ಸಂಸ್ಕಾರಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ತುಂಬ ದುಃಖ ಆಗುತ್ತಿದೆ. ಎಲ್ಲರೂ ಮನೆಯಲ್ಲೇ ಇರಿ. ಆಗ ನಿಮಗೆ ಒಳ್ಳೆಯದಾಗುತ್ತದೆ. ತಂದೆ-ತಾಯಿಯನ್ನು ನೀವು ಕಾಪಾಡಿಕೊಳ್ಳಬಹುದು. ಇವತ್ತು ಬೆಂಗಳೂರಿನ ಪರಿಸ್ಥಿತಿ ಹೀಗಾಗಿದೆ. ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ’ ಎಂದು ರವಿ ಮನವಿ ಮಾಡಿಕೊಂಡಿದ್ದಾರೆ.

‘ಇಲ್ಲಿ ಸಾಲು ಸಾಲು ಹೆಣಗಳು ಬರುತ್ತಿವೆ. ಎಲ್ಲರೂ ನಿಮ್ಮ ಕ್ಷೇಮ ನೋಡಿಕೊಳ್ಳಿ. ಮಾಸ್ಕ್​ ಹಾಕಿಕೊಳ್ಳಿ. ಸ್ಯಾನಿಟೈಸರ್​ ಉಪಯೋಗಿಸಿ. ಉಡಾಫೆ ಮಾತುಬೇಡ. ಸರ್ಕಾರ ಯಾರೋ ಸತ್ತರು ಅಂತ ರಜೆ ಕೊಡುತ್ತಿತ್ತು. ಆದರೆ ಈಗ ನಾವು ಬದುಕಲಿ ಅಂತ ರಜೆ ಕೊಟ್ಟಿದಾರೆ. ಯೋಚನೆ ಮಾಡಿ. ನಮ್ಮ ಪ್ರಾಣ ನಮ್ಮ ಕೈಯಲ್ಲಿ ಇದೆ’ ಎಂದು ರವಿ ಹೇಳಿದ್ದಾರೆ.

ಚಿತ್ರರಂಗದ ಅನೇಕರು ಕೊರೊನಾ ಮಹಾಮಾರಿಗೆ ಬಲಿ ಆಗುತ್ತಿದ್ದಾರೆ. ಏ.26ರಂದು ಖ್ಯಾತ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ಕೋಟಿ ರಾಮು ಅವರು ನಿಧನರಾದರು. ಯುವ ನಟ-ನಿರ್ಮಾಪಕ ಡಿ.ಎಸ್​. ಮಂಜುನಾಥ್, ಪೆಟ್ರೋಮ್ಯಾಕ್ಸ್​ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಜಶೇಖರ್​ ಅವರು ಕೂಡ ಕೊವಿಡ್​ನಿಂದ ಮೃತಪಟ್ಟಿದ್ದಾರೆ. ಹೀಗೆ ಕೊರೊನಾ ಮಹಾಮಾರಿಯ ಮರಣ ಮೃದಂಗ ಮುಂದುವರಿಸಿದೆ.

ಇದನ್ನೂ ಓದಿ: ಕೊವಿಡ್​ ಸೋಂಕಿತ ಸ್ನೇಹಿತರಿಗೆ ಬೆಡ್​ ಸಿಗದೇ 13 ಗಂಟೆ ಅಲೆದಾಡಿದ ನಟಿ ಶ್ರುತಿ ಹರಿಹರನ್​

ಕೊರೊನಾಗೆ ಬಲಿಯಾದ ಮತ್ತೋರ್ವ ಸ್ಯಾಂಡಲ್​ವುಡ್​ ಯುವ ನಿರ್ಮಾಪಕ