ರೇಣುಕಾ ಸ್ವಾಮಿ ಕೊಲೆ: ದರ್ಶನ್ ಸೇರಿ ಎಲ್ಲ ಆರೋಪಿಗಳ ಮೊಬೈಲ್ ತಪಾಸಣೆಗೆ ಅನುಮತಿ

|

Updated on: Jun 23, 2024 | 8:13 AM

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 139 ಸಾಕ್ಷಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದೀಗ ನ್ಯಾಯಾಲಯದ ಆದೇಶದಂತೆ ಎಲ್ಲ ಆರೋಪಿಗಳ ಮೊಬೈಲ್ ಅನ್ನು ಸಹ ಪರಿಶೀಲನೆಗೆ ಒಳಪಡಿಸಲಿದ್ದಾರೆ.

ರೇಣುಕಾ ಸ್ವಾಮಿ ಕೊಲೆ: ದರ್ಶನ್ ಸೇರಿ ಎಲ್ಲ ಆರೋಪಿಗಳ ಮೊಬೈಲ್ ತಪಾಸಣೆಗೆ ಅನುಮತಿ
ದರ್ಶನ್-ರೇಣುಕಾ
Follow us on

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಪೊಲೀಸರು ಚುರುಕಾಗಿ ತನಿಖೆ ನಡೆಸಿದ್ದಾರೆ. ಪ್ರಮುಖ ಆರೋಪಿಗಳನ್ನು ಬಂಧಿಸಿ 12 ದಿನಗಳ ಕಾಲ ಕಸ್ಟಡಿಯಲ್ಲಿಟ್ಟುಕೊಂಡು ಸತತ ವಿಚಾರಣೆ ಮಾಡಿದ್ದಾರೆ, ಹಲವು ಕಡೆ ಸ್ಥಳ ಮಹಜರು ಮಾಡಿದ್ದಾರೆ. ನೂರಾರು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಇದೀಗ ಮತ್ತೊಂದು ಪ್ರಮುಖ ಸಾಕ್ಷಿಯನ್ನು ಪಡೆದುಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ. ಅದುವೇ ಆರೋಪಿಗಳ ಮೊಬೈಲ್ ಪರಿಶೀಲನೆ. ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ಮೊಬೈಲ್ ಪರಿಶೀಲನೆಗೆ ನ್ಯಾಯಾಲಯ ಅನುಮತಿ ನೀಡಿದ್ದು, ಹಲವು ಮಹತ್ವದ ಅಂಶಗಳು ಇದರಿಂದ ಹೊರಗೆ ಬರುವ ಸಾಧ್ಯತೆ ಇದೆ.

ಆರೋಪಿ ರಾಘು ಹೊರತುಪಡಿಸಿ ಬಂಧಿತ ಎಲ್ಲ ಆರೋಪಿಗಳಿಂದ ಅವರ ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟು ದಿನ ಅವನ್ನು ಸೀಲ್ ಮಾಡಿ ಇರಿಸಲಾಗಿತ್ತು. ಆದರೆ ಈಗ ನ್ಯಾಯಾಲಯ ಅನುಮತಿ ನೀಡಿರುವ ಕಾರಣ ಆ ಎಲ್ಲ ಮೊಬೈಲ್​ಗಳನ್ನು ಎಫ್​ಎಸ್​ಎಲ್​ಗೆ ರವಾನಿಸಿ ಡಾಟಾ ರಿಟ್ರೀವ್ ಮಾಡಿಸಲಾಗುತ್ತದೆ. ಕೊಲೆಯಾದ ದಿನ ಯಾರು ಎಲ್ಲಿದ್ದರು, ಯಾರಿಗೆ ಕರೆ ಮಾಡಿದರು. ಮೊಬೈಲ್​ನಲ್ಲಿ ಘಟನೆಯ ಚಿತ್ರ, ವಿಡಿಯೋ ಸೆರೆ ಹಿಡಿಯಲಾಗಿದೆಯೇ? ಯಾರು ಯಾರಿಗೆ? ಎಷ್ಟು ಹಣ ಕಳಿಸಿದರು. ಕೊಲೆ ನಡೆದಾಗ ಯಾರು ಎಲ್ಲಿದ್ದರು ಎಂಬ ಎಲ್ಲ ಮಾಹಿತಿಯೂ ಮೊಬೈಲ್ ಪರಿಶೀಲನೆಯಿಂದ ಹೊರಗೆ ಬರಲಿದೆ. ಇದು ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಆಗಲಿದೆ.

ಆರೋಪಿ ರಾಘು ಹಾಗೂ ಸಂತ್ರಸ್ತ ರೇಣುಕಾ ಸ್ವಾಮಿಯ ಮೊಬೈಲ್​ ಅನ್ನು ಆರೋಪಿಗಳು ಮೋರಿಗೆ ಎಸದಿದ್ದು, ಸತತ ಹುಡುಕಾಟದ ಬಳಿಕವೂ ಆ ಮೊಬೈಲ್​ಗಳು ಸಿಕ್ಕಿಲ್ಲವಾದ್ದರಿಂದ ಅವರ ಮೊಬೈಲ್ ಸಿಮ್​ಗಳನ್ನು ಹೊಸದಾಗಿ ಪಡೆದು, ಸಿಮ್​ನ ಕರೆ ಮಾಹಿತಿಗಳನ್ನು ಪೊಲೀಸರು ತೆಗೆದುಕೊಳ್ಳಲು ನ್ಯಾಯಾಲಯ ಸೂಚಿಸಿದೆ. ಒಂದೊಮ್ಮೆ ಆ ಎರಡು ಮೊಬೈಲ್ ಸಿಕ್ಕಿದ್ದಲ್ಲಿ ಪೊಲೀಸರು ತನಿಖೆಗೆ ದೊಡ್ಡ ಯಶಸ್ಸು ದೊರೆತಿರುತ್ತಿತ್ತು.

ಇದನ್ನೂ ಓದಿ:ದರ್ಶನ್ ಬೆಂಬಲಿಸುವವರು, ರೇಣುಕಾ ಸ್ವಾಮಿ ತಂದೆಯ ಪ್ರಶ್ನೆಗೆ ಉತ್ತರಿಸುವರೇ?

ಇನ್ನು ಈ ಪ್ರಕರಣದಲ್ಲಿ ಈವರೆಗೆ 139 ಸಾಕ್ಷಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಫ್​ಎಸ್​ಎಲ್​ ಪರೀಕ್ಷೆಗೆ ಕಳಿಸಿದ ಕೆಲವು ವಸ್ತುಗಳ ವರದಿಗಳು ಬಂದಲ್ಲಿ ಸಾಕ್ಷ್ಯಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಈ ಎಲ್ಲ ಸಾಕ್ಷ್ಯಗಳನ್ನು ಒಂದಕ್ಕೊಂದು ಹೇಗೆ ಕನೆಕ್ಟ್ ಮಾಡಿ ಚಾರ್ಜ್​ ಶೀಟ್ ತಯಾರಿಸುತ್ತಾರೆ ಎಂಬುದರ ಮೇಲೆ ದರ್ಶನ್ ಪ್ರಕರಣ ನಿಂತಿದೆ. ಈಗ ಹೇಳುತ್ತಿರುವಂತೆ ಕೊಲೆಗೆ ಮೂಲ ಕಾರಣಕರ್ತರಲ್ಲಿ ದರ್ಶನ್​ ಸಹ ಒಬ್ಬರಾಗಿದ್ದರು ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದ್ದು, ಅದಕ್ಕೆ ಪೂರಕವಾಗಿ ಕೆಲವು ಸಮರ್ಥನೀಯ ಸಾಕ್ಷ್ಯಗಳು ದೊರಕಿವೆ ಎನ್ನಲಾಗುತ್ತಿದೆ.

ಜೂನ್ 11 ರಂದು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದರು. ಈವರೆಗೆ ಸುಮಾರು 17 ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲ ಆರೋಪಿಗಳು ಸಹ ನ್ಯಾಯಾಂಗ ಬಂಧನದಲ್ಲಿದ್ದು, ಜುಲೈ 4ಕ್ಕೆ ಅವರ ನ್ಯಾಯಾಂಗ ಬಂಧನ ಅಂತ್ಯವಾಗಲಿದೆ ಅಂದು ಜಾಮೀನು ಸಿಗುತ್ತದೆಯೋ ಅಥವಾ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ ಆಗಲಿದೆಯೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:59 am, Sun, 23 June 24