ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆಗಿರುವ ದರ್ಶನ್ ಅವರು ಮನೆ ಊಟ, ಹಾಸಿಗೆ ಹಾಗೂ ಪುಸ್ತಕ ಕೋರಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಇಂದು (ಜುಲೈ 22) ನಡೆದಿದೆ. ಬೆಂಗಳೂರಿನ ಆರ್ಥಿಕ ಅಪರಾಧಗಳ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಮಾಡಲಾಗಿದೆ. ದರ್ಶನ್ ಪರ ವಕೀಲ ರಾಘವೇಂದ್ರ ಅವರು ವಾದ ಮಂಡಿಸಿದ್ದಾರೆ. ಆದರೆ ಕೊಲೆ ಆರೋಪಿಗೆ ಈ ಸೌಕರ್ಯಗಳನ್ನು ನೀಡಲು ಸಾಧ್ಯವಿಲ್ಲ ಎಂದು ಪೊಲೀಸರ ಪರ ವಕೀಲರಾದ ಎಸ್ಪಿಪಿ ಪ್ರಸನ್ನ ಕುಮಾರ್ ವಾದಿಸಿದ್ದಾರೆ. ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡರ್ ಅವರು ಆದೇಶ ಕಾಯ್ದಿರಿಸಿದ್ದಾರೆ. ಜು.25ರಂದು ತೀರ್ಪು ಬರಲಿದೆ.
‘ಸ್ಟಾರ್ ಎಂಬ ಕಾರಣಕ್ಕೆ ಕೈದಿಯ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಹಾಗಾಗಿ ದರ್ಶನ್ ಅವರಿಗೆ ಮನೆ ಊಟ ನೀಡಲು ಅವಕಾಶ ಕಲ್ಪಿಸಬೇಕು’ ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದರು. ‘ಸ್ಟಾರ್ ಎಂಬ ಕಾರಣಕ್ಕೆ ನಿರಾಕರಿಸುತ್ತಿಲ್ಲ. ಕೊಲೆ ಆರೋಪಿಯಾದ ಕಾರಣಕ್ಕೆ ನಿರಾಕರಿಸಬೇಕು’ ಎಂದು ಪೊಲೀಸರ ಪರ ವಕೀಲರು ವಾದ ಮುಂದಿಟ್ಟರು. ಜೈಲು ಊಟದ ಜೊತೆಗೆ ಹೆಚ್ಚಿನ ಪ್ರೊಟೀನ್ ಬೇಕು ಎಂದು ದರ್ಶನ್ ಕೇಳಿದ್ದಾರೆ. ವ್ಯಾಯಾಮ ಮಾಡುತ್ತಿರುವುದರಿಂದ ಪ್ರೊಟೀನ್ ಬೇಕೆಂದು ಕೇಳಿದ್ದಾರೆ. ತಮ್ಮ ದೇಹದ ತೂಕ 10 ಕೆಜಿ ಇಳಿದಿದೆ, ಹೀಗಾಗಿ ಮನೆ ಊಟ ಬೇಕು ಎಂದು ಅವರು ಕೋರಿದ್ದಾರೆ. ‘ಜೈಲಿನಲ್ಲಿ ಇರುವವರಿಗೆ ಎಲ್ಲಾ ಮೂಲಭೂತ ಹಕ್ಕು ಸಿಗುವುದಿಲ್ಲ. ಮೂಲಭೂತ ಹಕ್ಕಿನ ಕೆಲ ಅಂಶಗಳು ಮಾತ್ರ ಸಿಗುತ್ತವೆ’ ಎಂದು ಸುಪ್ರೀಂ ಕೋರ್ಟ್ನ ತೀರ್ಪು ಉಲ್ಲೇಖಿಸಿ ಎಸ್ಪಿಪಿ ಪ್ರಸನ್ನ ಕುಮಾರ್ ವಾದಿಸಿದರು.
ಚಾರ್ಲ್ಸ್ ಶೋಭರಾಜ್ ತೀರ್ಪಿನಲ್ಲೂ ಸಂಪೂರ್ಣ ಹಕ್ಕುಗಳಿಲ್ಲ ಎಂದು ಹೇಳಲಾಗಿದೆ. ಜೈಲು ಕೈಪಿಡಿಯಲ್ಲಿ ಮನೆ ಊಟಕ್ಕೆ ಅವಕಾಶವಿಲ್ಲ. ಬಡವ, ಶ್ರೀಮಂತ, ಹೀರೋ, ಸ್ಟಾರ್ ಎಲ್ಲರೂ ಸಮಾನರೇ. ಸಿನಿಮಾ ಸ್ಟಾರ್ ಎಂದು ತಾರತಮ್ಯ ಮಾಡುವಂತಿಲ್ಲ. ಜೈಲಿನಲ್ಲಿ ಐದು ಸಾವಿರಕ್ಕೂ ಅಧಿಕ ಕೈದಿಗಳಿದ್ದಾರೆ. ಹೀಗಾಗಿ ಈ ಕೇಸಿನಲ್ಲಿ ಯಾವುದೇ ವಿಶೇಷ ವಿನಾಯಿತಿ ನೀಡದಂತೆ ಪ್ರಸನ್ನ ಕುಮಾರ್ ಮನವಿ ಮಾಡಿದರು.
ಆಹಾರ ಜೀರ್ಣವಾಗುತ್ತಿಲ್ಲ ಹಾಗೂ ಭೇದಿ ಆಗಿದೆ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ. ವೈದ್ಯರ ವರದಿಯನ್ನು ಕೋರ್ಟ್ಗೆ ಸಲ್ಲಿಸಲಾಗಿದೆ. ಈ ವರದಿಯಲ್ಲಿ ಒಂದು ಬಾರಿಯೂ ಭೇದಿಯಾಗಿದೆ ಎಂದು ವೈದ್ಯರಿಗೆ ಹೇಳಿಲ್ಲ. ಆಹಾರ ಜೀರ್ಣವಾಗುತ್ತಿಲ್ಲ ಎಂದು ಕೂಡ ದರ್ಶನ್ ಹೇಳಿಲ್ಲ. ಕೇವಲ ಶೂಟಿಂಗ್ ವೇಳೆ ಆದ ಗಾಯಕ್ಕೆ ಫಿಸಿಯೋಥೆರಪಿ ಕೇಳಿದ್ದಾರೆ. ಸೊಂಟ, ಕಾಲಿಗೆ ಆದ ಗಾಯದ ಬಗ್ಗೆ ಮಾತ್ರ ದರ್ಶನ್ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಜೈಲೂಟದಿಂದ ಸಮಸ್ಯೆ ಆಗಿದೆ ಎಂಬ ವಾದದಲ್ಲಿ ಹುರುಳಿಲ್ಲ ಎಂದು ಜೈಲು ಅಧಿಕಾರಿಗಳ ವರದಿ ಉಲ್ಲೇಖಿಸಿ ಎಸ್ಪಿಪಿ ವಾದಿಸಿದರು.
ಇದನ್ನೂ ಓದಿ: ಸೋನಲ್-ತರುಣ್ ಸುಧೀರ್ ಮದುವೆಗೆ ನಟ ದರ್ಶನ್ ಬರಲ್ವಾ? ಫ್ಯಾನ್ಸ್ ಬೇಸರ
ಜೈಲು ಕೈಪಿಡಿಯಲ್ಲಿ ಮನೆ ಊಟ ಎಂಬ ಪದವೇ ಇಲ್ಲ. ನಿಯಮ 322ರಲ್ಲಿ ವೈದ್ಯಕೀಯ ಕಾರಣಕ್ಕೆ ಪರಿಷ್ಕೃತ ಆಹಾರ ನೀಡಬಹುದು. 30 ದಿನಗಳವರೆಗೆ ಮಾತ್ರ ಪರಿಷ್ಕೃತ ಆಹಾರ ನೀಡಬಹುದು. ಅನಾರೋಗ್ಯದಂತಹ ವಿಶೇಷ ಸಂದರ್ಭದಲ್ಲಿ ಮಾತ್ರ ವಿಶೇಷ ಆಹಾರ ನೀಡಲು ಅವಕಾಶ ಇದೆ. ವಾರದಲ್ಲೊಮ್ಮೆ ಮೊಟ್ಟೆ ಅಥವಾ ಬಾಳೆಹಣ್ಣು ನೀಡಬಹುದು. ದಿನವೂ ಬಿರಿಯಾನಿ ತಿನ್ನಲು ನಿಯಮದಲ್ಲಿ ಅವಕಾಶವಿಲ್ಲ. ವೈರಲ್ ಜ್ವರವಿದ್ದರೆ ಬಿಸಿನೀರು ಕೊಡುತ್ತಾರೆ. ದರ್ಶನ್ ವೈದ್ಯಕೀಯ ವರದಿಯಲ್ಲಿ ಬೆಡ್ ರೆಸ್ಟ್ ಬೇಕು ಎಂದಿದೆ. ಪೌಷ್ಟಿಕಾಂಶದ ಡಯಟ್ ನೀಡಬೇಕೆಂದು ವರದಿಯಲ್ಲಿದೆ. ಜ್ವರವಿದ್ದರೆ ವೈದ್ಯಾಧಿಕಾರಿ ನಿಗಾದಲ್ಲಿ ಇಡುತ್ತಾರೆ. ಜೈಲು ಆಹಾರ ಅಥವಾ ಆಸ್ಪತ್ರೆಯ ಆಹಾರ ನೀಡಬಹುದು. ಆದರೆ ಮನೆ ಊಟ ನೀಡಲು ನಿಯಮದಲ್ಲಿ ಅವಕಾಶವಿಲ್ಲ. ಜೈಲು ವೈದ್ಯಾಧಿಕಾರಿಗಳು ವಿಶೇಷ ಆಹಾರವನ್ನು ಅಗತ್ಯವಿದ್ದರೆ ನೀಡಬಹುದು. ಅದು ಕೇವಲ 15 ದಿನ ಮಾತ್ರ. ನಿಯಮ 728ರಲ್ಲಿ ಬಟ್ಟೆ, ಹಾಸಿಗೆ ಬಗ್ಗೆ ನಿಯಮವಿದೆ. ಆದರೆ ಕೊಲೆ ಆರೋಪಿ ಬಿಟ್ಟು ಉಳಿದವರಿಗೆ ಮಾತ್ರ ಅವಕಾಶವಿದೆ. ಇಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಪುಸ್ತಕ ಕೇಳಿಲ್ಲ ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.