ಮೆಗಾಸ್ಟಾರ್ ಚಿರಂಜೀವಿ ಭಾರತದ ಟಾಪ್ ಸೂಪರ್ ಸ್ಟಾರ್ಗಳಲ್ಲಿ ಒಬ್ಬರು. ಇಂದಿಗೂ ಅವರ ಸಿನಿಮಾಗಳು ಮೊದಲ ದಿನ ಹೌಸ್ಫುಲ್ ಆಗುತ್ತವೆ. ತೀರಾ ಸಾಮಾನ್ಯ ಕುಟುಂಬದಿಂದ ಬಂದು ಇಡೀ ದೇಶವೇ ಹೆಮ್ಮೆ ಪಡುವಂಥೆ ಸೂಪರ್ ಸ್ಟಾರ್ ಆಗಿದ್ದಾರೆ. ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ಕಲಾ ಸೇವೆ, ಸಮಾಜ ಸೇವೆ ಗುರುತಿಸಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಹಲವು ನಟ-ನಟಿಯರು ಚಿರಂಜೀವಿ ಜೊತೆಗೆ ನಟಿಸಲು ಕಾತರರಾಗಿ ಕಾಯುತ್ತಿದ್ದಾರೆ. ಚಿರಂಜೀವಿ ಜೊತೆಗೆ ನಟಿಸುವ ಅವಕಾಶ ಡಾಲಿ ಧನಂಜಯ್ ಅವರನ್ನು ಹುಡುಕಿ ಬಂದಿತ್ತು, ಆದರೆ ಅವಕಾಶವನ್ನು ಮಿಸ್ ಮಾಡಿಕೊಂಡರು ಡಾಲಿ. ಆ ಬಗ್ಗೆ ಅವರೇ ಮಾತನಾಡಿದ್ದಾರೆ.
ಡಾಲಿ ಧನಂಜಯ್ ಇದೀಗ ‘ಜೀಬ್ರಾ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ನಿನ್ನೆ ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಚಿರಂಜೀವಿ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾಲಿ ಧನಂಜಯ್, ‘ನಾನು ಹಳ್ಳಿಯ ಒಬ್ಬ ಶಿಕ್ಷಕನ ಮಗನಾಗಿ ಬಂದೆ ವಿಲನ್ ಪಾತ್ರದಲ್ಲಿ ನಟಿಸಿದೆ, ಶಿವಣ್ಣನ ಜೊತೆಗೆ ‘ಟಗರು’ ಸಿನಿಮಾದಲ್ಲಿ ನಟಿಸಿದ್ದು ನನ್ನ ಜೀವನಕ್ಕೆ ತಿರುವು ಕೊಟ್ಟಿತು, ಆ ನಂತರವೂ ವಿಲನ್ ಆಗಿ ನಟಿಸಿದೆ, ಬಳಿಕ ‘ಬಡವ ರಾಸ್ಕಲ್’ ಎಂಬ ಸಿನಿಮಾ ನಿರ್ಮಾಣ ಮಾಡಿದೆ. ಅದರ ಬಳಿಕ ಮತ್ತೆ ಹಿರೋ ಆಗಿ ಹೊಸ ಜರ್ನಿ ಆರಂಭಿಸಿದೆ. ಮೊದಲೆಲ್ಲ ಸೋಲುಗಳು, ನಿರಾಸೆ ಬಂದಾಗ ನಿಮ್ಮ ಜರ್ನಿಯನ್ನು ನಾನು ನೆನಪು ಮಾಡಿಕೊಳ್ಳುತ್ತಿದ್ದೆ. ನೀವು ನನ್ನಂಥಹಾ ಹಲವಾರು ಜನರಿಗೆ ಸ್ಪೂರ್ತಿ, ಕಾನ್ಸ್ಟೇಬಲ್ ಮಗನಾಗಿ ಹುಟ್ಟಿ ಇಂದು ಇಷ್ಟು ದೊಡ್ಡ ಸಾಮ್ರ್ಯಾಜ್ಯವನ್ನೇ ನೀವು ಕಟ್ಟಿದ್ದೀರ’ ಎಂದು ಚಿರಂಜೀವಿ ಅವರನ್ನು ಕೊಂಡಾಡಿದರು ಡಾಲಿ ಧನಂಜಯ್.
ಇದನ್ನೂ ಓದಿ:ಮಂತ್ರಾಲಯಕ್ಕೆ ಭೇಟಿ ಕೊಟ್ಟ ಡಾಲಿ ಧನಂಜಯ್
‘ನಾನು ನಿಮ್ಮೊಂದಿಗೆ ನಟಿಸಬೇಕಿತ್ತು ಆದರೆ ಅದೃಷ್ಟ ಇರಲಿಲ್ಲ, ‘ವಾಲ್ತೇರು ವೀರಯ್ಯ’ ಸಿನಿಮಾದಲ್ಲಿ ಬಾಬಿ ಸಿಂಹ ಅವರು ನಟಿಸಿರುವ ಪಾತ್ರದಲ್ಲಿ ನಾನು ನಟಿಸಬೇಕಿತ್ತು, ಆದರೆ ಬೇರೆ ಸಿನಿಮಾ ಇದ್ದಿದ್ದರಿಂದ ನನಗೆ ನಟಿಸಲು ಸಾಧ್ಯವಾಗಲಿಲ್ಲ. ಆದರೆ ನನಗೆ ನಿಮ್ಮೊಂದಿಗೆ ನಟಿಸುವ ಆಸೆ ಇದೆ, ಮತ್ತೊಮ್ಮೆ ಅಂಥಹಾ ಅವಕಾಶ ಸಿಕ್ಕರೆ ಬಿಡುವುದಿಲ್ಲ. ವಿಷ್ಣುವರ್ಧನ್, ಅಂಬರೀಶಣ್ಣ ಈಗ ನಮ್ಮ ನಡುವೆ ಇಲ್ಲ, ಆದರೆ ನಿಮ್ಮನ್ನು ನೋಡಿದಾಗ ನಿಮ್ಮ ಮೂಲಕ ಅವರನ್ನು ನೋಡಿದಂತೆ ಭಾಸವಾಗುತ್ತದೆ’ ಎಂದಿದ್ದಾರೆ ಡಾಲಿ ಧನಂಜಯ್.
ಡಾಲಿ ಧನಂಜಯ್ಗೆ ತೆಲುಗು ಚಿತ್ರರಂಗ ಹೊಸದೇನೂ ಅಲ್ಲ. ಮೊದಲಿಗೆ ಅವರು ‘ಭೈರವ ಗೀತ’ ತೆಲುಗು ಸಿನಿಮಾದಲ್ಲಿ ನಟಿಸಿದರು. ಆ ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಲಿಲ್ಲ. ಅದಾದ ಬಳಿಕ ‘ಪುಷ್ಪ’ ಸಿನಿಮಾದ ಜಾಲಿ ರೆಡ್ಡಿ ಪಾತ್ರದಲ್ಲಿ ನಟಿಸಿದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಇದೀಗ ‘ಜಿಬ್ರಾ’ ಸಿನಿಮಾನಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಧನಂಜಯ್ ಜೊತೆಗೆ ತೆಲುಗು ನಟ ಸತ್ಯದೇವ್ ಸಹ ನಟಿಸಿದ್ದಾರೆ. ನವೆಂಬರ್ 22 ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ಸಹ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ