ಪರಂವಃ ಎಂಬುದು ರಕ್ಷಿತ್ ಶೆಟ್ಟಿಯ (Rakshit Shetty) ನಿರ್ಮಾಣ ಸಂಸ್ಥೆ (Production House) ಹೆಸರು. ಇದೀಗ ಇದೇ ಹೆಸರಿನ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾಕ್ಕೆ ಕನ್ನಡದ ಮತ್ತೊಬ್ಬ ಜನಪ್ರಿಯ ನಟ, ನಿರ್ಮಾಪಕ ಡಾಲಿ ಧನಂಜಯ್ ಬೆಂಬಲ ನೀಡಿದ್ದಾರೆ. ಹೊಸ ಹುಡುಗರ ಈ ಪ್ರಯತ್ನಕ್ಕೆ ಡಾಲಿ ಪರೋಕ್ಷ ಬಂಬಲ ನೀಡಿದ್ದು, ಇತ್ತೀಚೆಗಷ್ಟೆ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಿಸಿದ್ದಾರೆ.
ಮಕ್ಕಳ ಬೆಳವಣಿಗೆಯಲ್ಲಿ ತಾಯಿಯಷ್ಟೇ ತಂದೆಯ ಪಾತ್ರ ಕೂಡ ದೊಡ್ಡದು. ಇಂತಹ ತಂದೆ – ಮಗನ ಬಾಂಧವ್ಯದ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ ‘ಪರಂವಃ’. ಸಂತೋಷ್ ಕೈದಾಳ ನಿರ್ದೇಶಿಸಿರುವ ಈ ಚಿತ್ರಕ್ಕಾಗಿ ನಾಗೇಶ್ ಕುಂದಾಪುರ, ಶ್ರೀ ತಲಗೇರಿ ಹಾಗೂ ಶಿವರಾಜ್ ಸೇರಿ ಬರೆದಿರುವ “ಭೂರಮೆಲಿ ಮತ್ಯಾರು” ಎಂಬ ತಂದೆ – ಮಗನ ಭಾವನಾತ್ಮಕ ಪಯಣಕ್ಕೆ ಮುನ್ನುಡಿಯಾಗಿರುವ ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಅಪರಾಜಿತ್ ಹಾಗೂ ಜೋಸ್ ಜೋಸ್ಸೆ ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ನಟ ರಾಕ್ಷಸ ಡಾಲಿ ಧನಂಜಯ ಚಿತ್ರದ ಈ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಚಿತ್ರದ ನಾಯಕ ವೀರಗಾಸೆ ಕಲಾವಿದ. ಅವರ ಕುಟಂಬವೇ ವೀರಗಾಸೆ ಕುಟುಂಬ. ನಾಯಕನಿಗೆ ತಂದೆಯಂದರೆ ಪ್ರಾಣ. ತಂದೆಗೆ ಮಗನೇ ಜೀವ. ಇಂತಹ ವಿಭಿನ್ನ ಕಥಾಹಂದರ ಹೊಂದಿರುವ “ಪರಂವಃ” ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಮುಕ್ತಾಯವಾಗಿದೆ. ಜುಲೈನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕ ಸಂತೋಷ್ ಕೈದಾಳ ತಿಳಿಸಿದ್ದಾರೆ.
ಪೀಪಲ್ ವಲ್ಡ್ ಫಿಲಂಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಎ.ಎಸ್ ಶೆಟ್ಟಿ ಛಾಯಾಗ್ರಹಣ, ಅಪರಾಜಿತ್ ಜೋಸ್ ಜೋಸ್ಸೆ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಹಾಗೂ ವೆಂಕಿ ಯು ಡಿ ವಿ ವಿಕಾಸ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ. ಪ್ರೇಮ್ ಸಿಡ್ಗಲ್, ಮೈತ್ರಿ ಜೆ ಕಶ್ಯಪ್, ಗಣೇಶ್ ಹೆಗ್ಗೋಡು, ನಾಜರ್, ಶೃತಿ, ಮುಕುಂದ್, ಅವಿನಾಶ್, ಶಬರೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ:Dhananjay: ‘ಆ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ’; ಸ್ಪಷ್ಟನೆ ನೀಡಿದ ಡಾಲಿ ಧನಂಜಯ್
ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಮೂಲಕ ಹೊಸಬರಿಗೆ ಅವಕಾಶಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗಷ್ಟೆ ಹೊಸ ಹುಡುಗರು ಮಾಡಿರುವ ಸಿನಿಮಾ ಡೇರ್ ಡೆವಿಲ್ ಮುಸ್ತಾಫಾಗೆ ಬೆಂಬಲವಾಗಿ ನಿಂತು ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದರು ಮಾತ್ರವಲ್ಲದೆ ವಿತರಣೆ ಸಹ ಮಾಡಿದ್ದರು. ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
ಡಾಲಿ ಪಿಕ್ಚರ್ಸ್ ಮೂಲಕ ಕೇವಲ ಹೊಸ ನಿರ್ದೇಶಕರ, ಹೊಸ ನಟರ ಸಿನಿಮಾಗಳನ್ನಷ್ಟೆ ನಿರ್ಮಾಣ ಮಾಡುವ ಗುರಿಯನ್ನು ಸಹ ಡಾಲಿ ಧನಂಜಯ್ ಹೊಂದಿದ್ದಾರೆ. ಆ ಹಾದಿಯಲ್ಲಿ ಈಗಾಗಲೇ ಪ್ರಯತ್ನ ಆರಂಭಿಸಿದ್ದಾರೆ ಡಾಲಿ. ಪ್ರಸ್ತುತ ಬಹಳ ಬ್ಯುಸಿ ನಟರಾಗಿರುವ ಡಾಲಿ ಧನಂಜಯ್, ಉತ್ತರಕಾಂಡ, ಜೀಬ್ರಾ, ತಮಿಳಿನ ಒಂದು ಹಾಗೂ ತೆಲುಗಿನ ಪುಷ್ಪ 2 ಇನ್ನು ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ