ಮದುವೆ ಸಂಪ್ರದಾಯದ ಬಗ್ಗೆ ಟೀಕೆ ಮಾಡಿದವರಿಗೆ ಡಾಲಿ ಧನಂಜಯ ಖಡಕ್ ಉತ್ತರ

|

Updated on: Feb 17, 2025 | 12:10 PM

ನಟ ಡಾಲಿ ಧನಂಜಯ ಮತ್ತು ಡಾಕ್ಟರ್ ಧನ್ಯತಾ ಅವರ ಮದುವೆಯಲ್ಲಿ ಆಚರಿಸಿದ ಸಂಪ್ರದಾಯಗಳನ್ನು ಕೆಲವರು ಪ್ರಶ್ನಿಸಿದ್ದಾರೆ. ಅಂಥವರ ಪ್ರಶ್ನೆಗೆ ಡಾಲಿ ಉತ್ತರ ನೀಡಿದ್ದಾರೆ. ಆಸ್ತಿಕತೆ ಮತ್ತು ನಾಸ್ತಿಕತೆಯಲ್ಲಿ ತಮ್ಮ ನಿಲುವು ಏನು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಆ ಕುರಿತು ಇಲ್ಲಿದೆ ಪೂರ್ತಿ ವಿವರ..

ಮದುವೆ ಸಂಪ್ರದಾಯದ ಬಗ್ಗೆ ಟೀಕೆ ಮಾಡಿದವರಿಗೆ ಡಾಲಿ ಧನಂಜಯ ಖಡಕ್ ಉತ್ತರ
Daali Dhananjaya, Dhanyatha
Follow us on

ನಟ ಡಾಲಿ ಧನಂಜಯ ಅವರು ತಮ್ಮದೇ ನಿಲುವು ಮತ್ತು ಸಿದ್ಧಾಂತಗಳನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಮೌಢ್ಯಗಳ ವಿರುದ್ಧ ಅವರು ಧ್ವನಿ ಎತ್ತಿದ್ದರು. ಈಗ ಅವರ ಮದುವೆ ಬಗ್ಗೆ ಕೆಲವರು ಟೀಕೆ ಮಾಡಿದ್ದಾರೆ. ಫೆಬ್ರವರಿ 15 ಮತ್ತು 16ರಂದು ನಡೆದ ವಿವಾಹ ಸಮಾರಂಭದಲ್ಲಿ ಅನೇಕ ಆಚರಣೆಗಳನ್ನು ಡಾಲಿ ಧನಂಜಯ ಪಾಲಿಸಿದ್ದಾರೆ. ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪ್ರಶ್ನೆ ಮಾಡಿದ್ದಾರೆ. ಅಂಥ ಟೀಕೆಗಳಿಗೆ ಡಾಲಿ ಪ್ರತಿಕ್ರಿಯೆ ನೀಡಿದ್ದಾರೆ.

‘ಈ ಆಚರಣೆಗಳು ನಮ್ಮ ಹಿರಿಯರಿಗೆ ಖುಷಿ ಕೊಡುವಂತಹ ನಂಬಿಕೆಗಳು ಎಂದಾಗ ಪಾಲಿಸುವುದರಲ್ಲಿ ಏನೋ ತಪ್ಪು ಇದೆ ಎಂದು ನನಗೆ ಅನಿಸುತ್ತಿಲ್ಲ. ಎಲ್ಲದಕ್ಕೂ ಉತ್ತರ ಕೊಡಲು ನನಗೆ ಬರಲ್ಲ. ಆದರೆ ಒಂದು ಘಟನೆ ಬಗ್ಗೆ ಹೇಳುತ್ತೇನೆ. ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ಬಂದಾಗ ಕಾಯುವಂತಹ ನಂಬಿಕೆಗಳು ಬೇರೆ, ಮೂಢ ನಂಬಿಕೆಗಳು ಬೇರೆ. ಮೌಢ್ಯವನ್ನು ನಾವು ಖಂಡಿತ ವಿರೋಧಿಸಬೇಕು’ ಎಂದು ಡಾಲಿ ಧನಂಜಯ ಹೇಳಿದ್ದಾರೆ.

‘ಆಚರಣೆಯಲ್ಲಿ ತುಂಬ ರೀತಿಯ ಆಚರಣೆಗಳು ಇವೆ. ಉದಾಹರಣೆಗೆ, ಕೆಂಡ ಹಾಯುವಾಗ ನಮ್ಮ ಚಿಕ್ಕಪ್ಪ ಒಂದು ಪೂಜೆ ಮಾಡಿದರು. ನನಗೆ ಅದರ ಬಗ್ಗೆ ಗೊತ್ತಿಲ್ಲ. ಅದು ಮಡಿವಾಳ ಪದ್ಧತಿಯಲ್ಲಿ ಮಾಡುವುದು ಅಂತ ಕೆಲವರು ಹೇಳಿದರು. ಅದನ್ನು ತಮ್ಮ ಚಿಕ್ಕಪ್ಪ ತುಂಬ ಚೆನ್ನಾಗಿ ಮಾಡಿದರು. ಆ ರೀತಿ ತಮ್ಮ ಆಚರಣೆಗಳು ಮಿಕ್ಸ್ ಆಗಿವೆ. ಕೆಂಡ ಹಾಯುವುದನ್ನು ನಾನು ಚಿಕ್ಕ ವಯಸ್ಸಿನಿಂದ ಜಾತ್ರೆಯಲ್ಲಿ ನೋಡಿಕೊಂಡು ಬಂದಿದ್ದೇನೆ. ಅದು ನನಗೆ ಜನಪದ. ಆ ಪ್ರಕ್ರಿಯೆಯನ್ನು ಒಂದು ಮಗು ರೀತಿ ನಾನು ಎಂಜಾಯ್ ಮಾಡಿದ್ದೇನೆ. ಅವುಗಳಲ್ಲಿ ನನಗೆ ತಪ್ಪು ಕಂಡಿಲ್ಲ’ ಎಂದಿದ್ದಾರೆ ಡಾಲಿ ಧನಂಜಯ.

‘ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ನನ್ನ ಜೀವನದ ಉದಾಹರಣೆಯನ್ನೇ ಕೊಡುತ್ತೇನೆ. ನನ್ನ ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ಒಂದು ಸಣ್ಣ ಸರ್ಜರಿ ಇತ್ತು. ನನಗೆ ಮತ್ತು ವೈದ್ಯರಿಗೆ ವಿಜ್ಞಾನ ಗೊತ್ತು. ಆದರೆ ಆಪರೇಷನ್​ ಥಿಯೇಟರ್​ಗೆ ಹೋಗುವಾಗ ನನ್ನ ತಾಯಿ ಜೇಲುಕಲ್ಲು ಸಿದ್ದಪ್ಪ ಅಂತ ಕೈ ಮುಗಿಯುತ್ತಾರೆ. ಅವರಿಗೆ ಜೇನುಕಲ್ಲು ಸಿದ್ಧಪ್ಪ ಒಂದು ಶಕ್ತಿ. ಅವರ ನಂಬಿಕೆ ಮತ್ತು ಶಕ್ತಿಯನ್ನು ನಾನು ಗೌರವಿಸಬೇಕು’ ಎಂದು ಡಾಲಿ ಹೇಳಿದ್ದಾರೆ.

ಇದನ್ನೂ ಓದಿ: ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ

‘ಎಲ್ಲದರಲ್ಲೂ ತಪ್ಪು ಹುಡುಕಿದರೆ ನಾವು ಒಟ್ಟಿಗೆ ಸೇರೋಕೆ ಆಗಲ್ಲ. ಸಾಕಷ್ಟು ವಿಷಯ ಇದೆ. ಅದನ್ನೆಲ್ಲ ನಾನು ಈ ಮಾತನಾಡಲು ಹೋದರೆ ಮದುವೆ ಬಿಟ್ಟು ಬೇರೆ ಬೇರೆ ಚರ್ಚೆ ಶುರುವಾಗುತ್ತದೆ. ನನ್ನನ್ನು ಪ್ರಶ್ನೆ ಮಾಡುತ್ತಿರುವವರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಕೂಡ ಇರಲಿ. ನಾನು ಕೂಡ ಇನ್ನೂ ಕಲಿಯುತ್ತಾ ಇರುತ್ತೇನೆ, ಬೆಳೆಯುತ್ತಾ ಇರುತ್ತೇನೆ. ಅನುಭವಗಳಿಂದ ಹೊರಗೆ ಉಳಿಯೋಕೆ ನನಗೆ ಆಗಲ್ಲ. ನಾನೊಬ್ಬ ಕಲಾವಿದ. ನನಗೆ ಎಲ್ಲ ಅನುಭವಗಳು ತುಂಬ ಮುಖ್ಯ’ ಎಂದಿದ್ದಾರೆ ಧನಂಜಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.