ನಟ ಡಾಲಿ ಧನಂಜಯ (Daali Dhananjaya) ಅವರು ‘ಕೋಟಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಡಿಫರೆಂಟ್ ಆಗಿರಲಿದೆ. ಪರಮ್ (Param) ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಹಾಡು, ಟೀಸರ್ ಮೂಲಕ ಜನರಲ್ಲಿ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್ ಇಂದು (ಜೂನ್ 5) ಬಿಡುಗಡೆ ಆಗಿದೆ. ‘ಕೋಟಿ’ ಟ್ರೇಲರ್ (Kotee Trailer) ನೋಡಿ ಸಿನಿಪ್ರಿಯರಲ್ಲಿ ಕೌತುಕ ಹೆಚ್ಚಿದೆ. ಕಥೆಯ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಡಲಾಗಿದೆ. ಜೂನ್ 14ರಂದು ‘ಕೋಟಿ’ ತೆರೆಕಾಣಲಿದ್ದು, ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ನಟ ರಮೇಶ್ ಇಂದಿರಾ ಅವರು ವಿಲನ್ ಪಾತ್ರ ಮಾಡಿ ಜನರ ಚಪ್ಪಾಳೆ ಗಿಟ್ಟಿಸಿದ್ದರು. ಈಗ ಅವರು ‘ಕೋಟಿ’ ಸಿನಿಮಾದಲ್ಲೂ ವಿಲನ್ ಆಗಿದ್ದಾರೆ. ದೀನು ಸಾಹುಕಾರ್ ಎಂಬ ಪಾತ್ರವನ್ನು ಅವರು ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ಡಾಲಿ ಧನಂಜಯ್ ವರ್ಸಸ್ ರಮೇಶ್ ಇಂದಿರಾ ಅವರ ಮುಖಾಮುಖಿ ದೃಶ್ಯಗಳು ಇರಲಿವೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ.
ಇದನ್ನೂ ಓದಿ: ಡಾಲಿ ಧನಂಜಯ ನಟನೆಯ ‘ಕೋಟಿ’ ಸಿನಿಮಾ ಬಿಡುಗಡೆ ಮಾಡಲಿರುವ ‘ಕೆಆರ್ಜಿ’
‘ಕೋಟಿ’ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಟ್ರೇಲರ್ನಲ್ಲಿ ಮೇಕಿಂಗ್ ಗುಣಮಟ್ಟವನ್ನು ಕಂಡು ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಟ್ರೇಲರ್ನಲ್ಲಿ ಡೈಲಾಗ್ ಕೂಡ ಗಮನ ಸೆಳೆದಿದೆ. ‘ವ್ಯವಹಾರ ಯಾರ ಜೊತೆ ಬೇಕಾದರೂ ಆಗಬಹುದು. ಆದರೆ ಎರಡು ಮುಖ ಇರುವವರ ಜೊತೆ ಮಾತ್ರ ಮಾಡಬಾರದು. ಯಾಕೆಂದರೆ, ಅವರಿಂದ ಮೋಸ ಆದಾಗ ಯಾವ ಮುಖಕ್ಕೆ ಬಾರಿಸೋದು ಅನ್ನೋ ಕನ್ಫ್ಯೂಷನ್ನಲ್ಲೇ ಟೈಮ್ ವೇಸ್ಟ್ ಆಗಿಬಿಡುತ್ತೆ’ ಎಂದು ಡಾಲಿ ಡೈಲಾಗ್ ಹೊಡೆದಿದ್ದಾರೆ.
ಡಾಲಿ ಧನಂಜಯ್, ರಮೇಶ್ ಇಂದಿರಾ ಅವರ ಜೊತೆಗೆ ರಂಗಾಯಣ ರಘು, ತಾರಾ ಅನುರಾಧಾ, ಮೋಕ್ಷಾ ಕುಶಾಲ್, ತನುಶಾ ವೆಂಕಟೇಶ್, ಪೃಥ್ವಿ ಶ್ಯಾಮನೂರ್, ಅಭಿಷೇಕ್ ಶ್ರೀಕಾಂತ್ ಮುಂತಾದವರು ‘ಕೋಟಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಮೂಲಕ ಜ್ಯೋತಿ ದೇಶಪಾಂಡೆ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ವಾಸುಕಿ ವೈಭವ್ ಅವರ ಸಂಗೀತ, ನೋಬಿನ್ ಪೌಲ್ ಅವರ ಹಿನ್ನೆಲೆ ಸಂಗೀತ ಈ ಸಿನಿಮಾಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.