ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದ ಡಾಲಿ ಧನಂಜಯ್ (Daali Dhananjay) ಇತ್ತೀಚೆಗೆ ಕೇವಲ ಉತ್ತಮ ಕತೆಯುಳ್ಳ ಸಿನಿಮಾಗಳನ್ನಷ್ಟೆ ಆರಿಸಿಕೊಂಡು ನಟಿಸಲು ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಾತ್ರವೇ ಅಲ್ಲದೆ ಪರಭಾಷೆಗಳಲ್ಲಿಯೂ ಡಾಲಿ ಧನಂಜಯ್ಗೆ ಬೇಡಿಕೆ ಇದೆ. ತೆಲುಗಿನ ‘ಭೈರವಗೀತ’, ‘ಪುಷ್ಪ’ ಸಿನಿಮಾದಲ್ಲಿ ನಟಿಸಿರುವ ಡಾಲಿ, ಇದೀಗ ಮತ್ತೊಂದು ಪರಭಾಷೆಯ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ.
‘ಝೀಬ್ರಾ’ ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟ ಸತ್ಯದೇವ್ ಸಹ ಡಾಲಿ ಧನಂಜಯ್ ಜೊತೆಗೆ ನಟಿಸಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿ ವಿಲನ್ ಆಗಿದ್ದ ಡಾಲಿ, ‘ಝೀಬ್ರಾ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಚಿತ್ರೀಕರಣ ಪ್ರಾರಂಭ ಆದಾಗಿನಿಂದಲೂ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ.
‘ಝೀಬ್ರಾ’ ಪಕ್ಕಾ ಮಾಸ್ ಎಂಟರ್‌ಟೇನರ್ ಸಿನಿಮಾ ಆಗಿದೆ. ಡಾಲಿ ಜೊತೆ ಸತ್ಯದೇವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಾಲಿ ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್ನ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ, ಬದಲಿಗೆ ನಾಯಕನಾಗಿಯೇ ಕಾಣಿಸಿಕೊಂಡಿದ್ದಾರೆ. ಸತ್ಯದೇವ್ ಸಹ ಸಿನಿಮಾದ ನಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇಬ್ಬರೂ ನಟರಿಗೆ ಇದು 26ನೇ ಸಿನಿಮಾ ಎಂಬುದು ವಿಶೇಷ.
ಇದನ್ನೂ ಓದಿ:‘ಟಗರು ಪಲ್ಯ’ ಚಿತ್ರಕ್ಕೆ ಜನಮೆಚ್ಚುಗೆ; ನಿರ್ಮಾಪಕನಾಗಿ ಡಾಲಿ ಧನಂಜಯ್ಗೆ ಹ್ಯಾಟ್ರಿಕ್ ಗೆಲುವು
‘ಝೀಬ್ರಾ’ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ಸೇರಿದಂತೆ ಇನ್ನೂ ಕೆಲವು ಭಾಷೆಗಳಲ್ಲಿ ಮೂಡಿ ಬರಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್, ಸತ್ಯರಾಜ್, ಸುನೀಲ್ ವರ್ಮ, ಜೆನಿಫರ್ , ಸುರೇಶ್‌ಚಂದ್ರ ಮೆನನ್, ಕಲ್ಯಾಣಿ ನಟರಾಜ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಸಿನಿಮಾವನ್ನು ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಿದ್ದು, ಕತೆ-ಚಿತ್ರಕತೆ ಅವರದ್ದೇ. ಪ್ಯಾನ್ ಇಂಡಿಯಾ ‘ZEBRA’ ಚಿತ್ರಕ್ಕೆ ಕೆಜಿಎಫ್ ಚಿತ್ರ ಖ್ಯಾತಿಯ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರ ಆದಷ್ಟು ಬೇಗ ಬಿಡುಗಡೆ ಆಗಲಿದೆ.
ಡಾಲಿ ಧನಂಜಯ್ ಪ್ರಸ್ತುತ ‘ಉತ್ತರಕಾಂಡ’, ‘ಪುಷ್ಪ 2’, ‘ಅಣ್ಣ ಫ್ರಂ ಮೆಕ್ಸಿಕೊ’, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಕೆಲವು ಸಿನಿಮಾಗಳ ನಿರ್ಮಾಣದಲ್ಲಿಯೂ ಡಾಲಿ ಧನಂಜಯ್ ತೊಡಗಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ