
ರಿಷಬ್ ಶೆಟ್ಟಿಯ (Rishab Shetty) ಅಪಾರ ಪರಿಶ್ರಮ, ಪ್ರತಿಭೆಯಿಂದಾಗಿ ಮೂಡಿಬಂದಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರಮಂದಿರಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ಸಿನಿಮಾಕ್ಕಾಗಿ ಸುಮಾರು ಮೂರು ವರ್ಷಗಳ ಕಾಲ ರಿಷಬ್ ಶೆಟ್ಟಿ ಮತ್ತು ಅವರ ತಂಡ ಹಗಲು-ರಾತ್ರಿಗಳನ್ನು ಒಂದುಮಾಡಿ ಕೆಲಸ ಮಾಡಿದೆ. ಅದಕ್ಕೆ ತಕ್ಕ ಪ್ರತಿಫಲವನ್ನು ಪ್ರೇಕ್ಷಕರು ನೀಡುತ್ತಿದ್ದಾರೆ. ಒಂದೆಡೆ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದ್ದರೆ, ಮತ್ತೊಂದೆಡೆ ಕೆಲ ಅಪವಾದಗಳು ಸಹ ಸಿನಿಮಾಕ್ಕೆ ಸುತ್ತಿಕೊಳ್ಳುತ್ತಿವೆ. ಸಿನಿಮಾದ ಬಗ್ಗೆ ಕೆಲ ದೈವಾರಾಧಕರು, ದೈವನರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೈವದ ಅನುಗ್ರಹ ಇಲ್ಲದ ಕಾರಣಕ್ಕೆ ಚಿತ್ರೀಕರಣದ ಸಮಯದಲ್ಲಿಯೂ ಅವಘಡಗಳು ಸಂಭವಿಸಿವೆ ಎನ್ನಲಾಗುತ್ತಿದೆ. ಆದರೆ ಇದೆಲ್ಲದರ ಬಗ್ಗೆ ರಿಷಬ್ ಶೆಟ್ಟಿಯವರಿಗೆ ದೈವ ಮೂರು ವರ್ಷಗಳ ಮೊದಲೇ ಎಚ್ಚರಿಕೆ ನೀಡಿತ್ತು.
‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ 2022 ರಲ್ಲೇ ರಿಷಬ್ ಶೆಟ್ಟಿ ಮತ್ತೊಂದು ‘ಕಾಂತಾರ’ ಅಥವಾ ಈಗಿನ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮಾಡಲು ದೈವದ ಅನುಮತಿ ಕೇಳಿದ್ದರು. ಆಗಲೇ ದೈವ ರಿಷಬ್ ಶೆಟ್ಟಿ ಅವರಿಗೆ ಎಚ್ಚರಿಕೆ ನೀಡಿತ್ತು. ಮಂಗಳೂರಿನ ಬಂದಲೆಯ ಮಡಿವಾಳಬೆಟ್ಟು ದೈವದ ನರ್ತನ ಸೇವೆ ವೇಳೆ ಅಣ್ಣಪ್ಪ ಪಂಜುರ್ಲಿ ದೈವದ ಬಳಿ ರಿಷಬ್ ಶೆಟ್ಟಿ ಅನುಮತಿ ಕೇಳಿದ್ದರು. ಆಗ ಸೂಚ್ಯವಾಗಿ ನುಡಿ ನುಡಿದಿದ್ದ ದೈವ, ‘ಈಗ ಹತ್ತು ಹೆಜ್ಜೆ ಇಟ್ಟು ಆ ಸಿನಿಮಾ ಮಾಡಿದ್ದೀರಿ, ಇದಕ್ಕೆ ನೂರು ಹೆಜ್ಜೆ ಇಡಿ’ ಎಂದಿತ್ತು.
ಇದನ್ನೂ ಓದಿ:ಹೈದರಾಬಾದ್ನಲ್ಲಿ ಕನ್ನಡ ಮಾತನಾಡಿದ್ದೇಕೆ, ಕಾರಣ ಕೊಟ್ಟ ರಿಷಬ್ ಶೆಟ್ಟಿ
ಕಾಂತಾರ ಮೊದಲ ಭಾಗದ ಹರಕೆ ನೇಮ ಸಲ್ಲಿಸಲು ಬಂದಿದ್ದ ರಿಷಬ್ ಶೆಟ್ಟಿ, ಎರಡನೇ ಭಾಗದ ಬಗ್ಗೆ ಕೇಳಿದ್ದರು. ಆಗ ಎರಡನೇ ಭಾಗ ಮಾಡುವ ಮುಂಚೆ ಧರ್ಮಸ್ಥಳ ಮಂಜುನಾಥೇಶ್ವರನ ಒಪ್ಪಿಗೆ ಕೇಳುವಂತೆ ದೈವ ಸೂಚಿಸಿತ್ತು. ಬಹಳ ಆಲೋಚನೆಯಲ್ಲಿ ಮುಂದಿನ ಸಿನಿಮಾ ಮಾಡಿ, ಮೊದಲ ಚಿತ್ರದಲ್ಲಿ ಒಳ್ಳೆಯದು ಆಗಿದೆ, ಅಪವಾದವೂ ಬಂದಿದೆ. ಹತ್ತು ಹೆಜ್ಜೆ ಇಟ್ಟು ಆ ಸಿನಿಮಾ ಮಾಡಿದ್ದೀರಿ, ಇದಕ್ಕೆ ನೂರು ಹೆಜ್ಜೆ ಇಡಿ ಅಂತ ದೈವ ನುಡಿ.ಧರ್ಮ ಪ್ರಕಾರ, ಆಚಾರ ವಿಚಾರದಲ್ಲಿ ಹೋಗಿ’ ಎಂದು ದೈವ ಹೇಳಿತ್ತು. ಬಳಿಕ ರಿಷಬ್ ಶೆಟ್ಟಿ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥಸ್ವಾಮಿಯ ದರ್ಶನ ಪಡೆದು, ವೀರೇಂದ್ರ ಹೆಗ್ಗಡೆಯವರನ್ನು ಸಹ ಭೇಟಿ ಮಾಡಿದ್ದರು.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಸಾಕಷ್ಟು ನೇಮ-ನಿಷ್ಠೆಗಳನ್ನು ರಿಷಬ್ ಮತ್ತು ತಂಡ ಪಾಲಿಸಿತ್ತು. ಅದಾಗಿಯೂ ಕೆಲವಾರು ಅವಘಡಗಳು ಚಿತ್ರೀಕರಣದ ಸಮಯದಲ್ಲಿ ನಡೆಯಿತು. ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದ, ಮಾಡಿದ್ದ ಕೆಲವರು ಅಚಾನಕ್ಕಾಗಿ ನಿಧನ ಹೊಂದಿದರು. ಸೆಟ್ನಲ್ಲಿಯೂ ಸಹ ಕೆಲ ಅವಘಡಗಳು ಸಂಭವಿಸಿದವು. ಒಮ್ಮೆ ಬೋಟ್ ಅನಾಹುತವಾಯ್ತು. ಈಗ ಕೆಲ ದೈವಾರಾಧಕರು, ದೈವನರ್ತಕರು ಸಿನಿಮಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ನಮ್ಮ ನಂಬಿಕೆಯಾದ ದೈವಾರಾಧನೆಯನ್ನು ಹಣಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ