AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಿಗ ರವಿ ಬಸ್ರೂರು ಸಂಗೀತ ಕದ್ದ ಹಾಲಿವುಡ್ ಸಿನಿಮಾ

Ravi Basruru movie: ಕನ್ನಡದ ಸಂಗೀತ ನಿರ್ದೇಶಕ ರವಿ ಬಸ್ರೂರು ಈಗ ಪ್ಯಾನ್ ಇಂಡಿಯಾ ಸಂಗೀತ ನಿರ್ದೇಶಕರಾಗಿದ್ದಾರೆ. ಬಾಲಿವುಡ್ ಸೇರಿದಂತೆ ಹಲವಾರು ಭಾಷೆಗಳ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಮಾಸ್ ಸಿನಿಮಾಗಳಿಗೆ ರವಿ ಅವರಂತೆ ಇನ್ಯಾರೂ ಸಂಗೀತ ನೀಡರು ಎಂಬ ಮಾತಿದೆ. ಇದೀಗ ಹಾಲಿವುಡ್ ಸಿನಿಮಾ ಒಂದು ರವಿ ಬಸ್ರೂರು ಅವರ ಸಂಗೀತ ಕದ್ದಿರುವ ಆರೋಪ ಕೇಳಿ ಬಂದಿದೆ.

ಕನ್ನಡಿಗ ರವಿ ಬಸ್ರೂರು ಸಂಗೀತ ಕದ್ದ ಹಾಲಿವುಡ್ ಸಿನಿಮಾ
Ravi Basrur The Lost Bus
ಮಂಜುನಾಥ ಸಿ.
|

Updated on: Oct 10, 2025 | 9:47 AM

Share

ರವಿ ಬಸ್ರೂರು ಪ್ಯಾನ್ ಇಂಡಿಯಾ ಸಂಗೀತ ನಿರ್ದೇಶಕ. ಬಸ್ರೂರು ಹೆಸರಿನ ಸಣ್ಣ ಊರಿನಿಂದ ಬಂದು ಸಂಗೀತ ನಿರ್ದೇಶಕನಾಗಲು ನಾನಾ ತಾಪತ್ರೆಯ ಪಟ್ಟು ಈಗ ಹಲವು ಚಿತ್ರರಂಗಗಳಲ್ಲಿ ಬೇಡಿಕೆ ಇರುವ ಸ್ಟಾರ್ ಸಂಗೀತ ನಿರ್ದೇಶಕ ಆಗಿದ್ದಾರೆ. ‘ಉಗ್ರಂ’, ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳ ಮೂಲಕ ಮಾಸ್ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಹೇಗಿರಬೇಕು ಎಂಬುದನ್ನು ಭಾರತೀಯ ಚಿತ್ರರಂಗಕ್ಕೆ ತೋರಿಸಿಕೊಟ್ಟವರ ರವಿ ಬಸ್ರೂರು. ಇವರ ಸಂಗೀತ ಈಗಾಗಲೇ ದೇಶ, ವಿದೇಶಗಳಲ್ಲಿ ಸದ್ದು ಮಾಡುತ್ತಿದೆ. ಹೀಗಿರುವಾಗ, ರವಿ ಬಸ್ರೂರು ಅವರ ಸಂಗೀತವನ್ನು ಹಾಲಿವುಡ್​​ನವರು ಕದ್ದಿದ್ದಾರೆ ಎಂಬ ಆರೋಪವನ್ನು ಕೆಲ ಸಿನಿಮಾ ಪ್ರೇಮಿಗಳು ಮಾಡುತ್ತಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶಿಸಿ, ಪ್ರಭಾಸ್ ನಾಯಕನಾಗಿ ನಟಿಸಿರುವ ‘ಸಲಾರ್’ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದರು. ಈ ಸಿನಿಮಾದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಕೂಡಲೇ ಹಿಟ್ ಆಗಲಿಲ್ಲವಾದರೂ ಸಮಯ ಕಳೆದಂತೆ ಸಾಮಾಜಿಕ ಜಾಲತಾಣದಲ್ಲಿ ಹಿನ್ನೆಲೆ ಸಂಗೀತದ ಬಿಟ್​​ಗಳು ವೈರಲ್ ಆದವು. ಹಿನ್ನೆಲೆ ಸಂಗೀತದ ಮ್ಯಾಜಿಕ್ ಅನ್ನು ತುಸು ತಡವಾಗಿ ಪ್ರೇಕ್ಷಕರು ಗುರುತಿಸಿದರು. ಈ ಬಗ್ಗೆ ಇತ್ತೀಚೆಗಷ್ಟೆ ಸ್ವತಃ ರವಿ ಬಸ್ರೂರು ಮಾತನಾಡಿದ್ದರು. ಇದೀಗ ‘ಸಲಾರ್’ ಸಿನಿಮಾದ ಸಂಗೀತವನ್ನು ಹಾಲಿವುಡ್ ಸಿನಿಮಾ ಒಂದು ಕದ್ದಿದೆ ಎಂಬ ಆರೋಪವನ್ನು ಕೆಲ ಸಿನಿಮಾ ಪ್ರೇಮಿಗಳು ಮಾಡಿದ್ದಾರೆ.

ಹಾಲಿವುಡ್​ನ ಖ್ಯಾತ ನಟ, ಆಸ್ಕರ್ ವಿಜೇತ ಮ್ಯಾಥ್ಯೂ ಮೆಕಾನ್​ಹೇ ನಟಿಸಿರುವ ‘ದಿ ಲೊಸ್ಟ್ ಬಸ್’ ಸಿನಿಮಾ ಕಳೆದ ತಿಂಗಳು ಬಿಡುಗಡೆ ಆಗಲಿದ್ದು, ಸಿನಿಮಾದ ಟ್ರೈಲರ್, ಟೀಸರ್​​ಗಳು ಯೂಟ್ಯೂಬ್​​ನಲ್ಲಿವೆ. ಸಿನಿಮಾದ ಟ್ರೈಲರ್​​ನಲ್ಲಿ ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತವನ್ನು ಬಳಸಲಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಕೆಲವರು ಯೂಟ್ಯೂಬ್​​​ನಲ್ಲಿ ಈ ಕುರಿತು ಪ್ರತ್ಯೇಕ ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿಯೂ ಸಹ ‘ಸಲಾರ್’ ಸಿನಿಮಾದ ಸಂಗೀತ ಬಳಸಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಸಲಾರ್’ ಸಂಗೀತ ಹಿಟ್ ಆಗದಿರಲು ‘ಕೆಜಿಎಫ್’ ಕಾರಣ: ರವಿ ಬಸ್ರೂರು ವಿಶ್ಲೇಷಣೆ ಏನು?

‘ದಿ ಲೊಸ್ಟ್ ಬಸ್’ ಸಿನಿಮಾದ ಟ್ರೈಲರ್​​ನ 1:13ನೇ ನಿಮಿಷದಲ್ಲಿ, 1:22ರಲ್ಲಿ ಮತ್ತು 1:34ನೇ ನಿಮಿಷದಲ್ಲಿ ಬಳಸಿರುವ ಸಂಗೀತ ‘ಸಲಾರ್’ ಸಿನಿಮಾನಲ್ಲಿ ರವಿ ಬಸ್ರೂರು ನೀಡಿರುವ ಸಂಗೀತವಾಗಿದೆ. ಅದನ್ನು ಯಥಾವತ್ತು ಕಾಪಿ ಮಾಡಲಾಗಿದೆ ಎಂಬ ಆರೋಪವನ್ನು ಕೆಲವರು ಮಾಡಿದ್ದು, ‘ದಿ ಲೊಸ್ಟ್ ಬಸ್’ ಸಿನಿಮಾ ಟ್ರೈಲರ್​​ನ ಕಮೆಂಟ್​ ಬಾಕ್ಸ್​​ನನಲ್ಲಿಯೂ ಸಹ ಈ ಬಗ್ಗೆ ಕೆಲವು ಪ್ರಭಾಸ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಸಂಗೀತ ಕದಿಯಲಾಗಿದೆ ಎಂದು ಆರೋಪ ಮಾಡಿದ್ದಾರಾದರೂ ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರವೇ ಎರಡೂ ಸಿನಿಮಾಗಳಲ್ಲಿ ಸಂಗೀತದಲ್ಲಿ ಸಾಮ್ಯತೆ ಕಾಣುತ್ತದೆ.

‘ದಿ ಲೊಸ್ಟ್ ಬಸ್’ ಸಿನಿಮಾ 2018ರಲ್ಲಿ ಕ್ಯಾಲಿಫೋರ್ನಿಯಾನಲ್ಲಿ ಕಾಣಿಸಿಕೊಂಡು ಭೀಕರ ಕಾಡ್ಗಿಚ್ಚಿನ ಕುರಿತಾದ ಕತೆ ಒಳಗೊಂಡಿದೆ. ಶಾಲಾ ಬಸ್ ಡ್ರೈವರ್ ಕೆವಿನ್ ಮೆಕೇ ಎಂಬಾತ ಹೇಗೆ ಆ ಭೀಕರ ಕಾಡ್ಗಿಚ್ಚಿನ ನಡುವೆ 22 ಮಂದಿ ಮಕ್ಕಳು ಹಾಗೂ ಶಿಕ್ಷಕರಿದ್ದ ಬಸ್ ಅನ್ನು ತನ್ನ ಜೀವ ಒತ್ತೆಯಿಟ್ಟು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಬಂದರು ಎಂಬ ಕತೆಯನ್ನು ಸಿನಿಮಾ ಒಳಗೊಂಡಿದೆ. ಕಳೆದ ತಿಂಗಳು ಬಿಡುಗಡೆ ಆದ ಈ ಸಿನಿಮಾ, ಇದೇ ತಿಂಗಳು 3ನೇ ತಾರೀಖಿನಿಂದ ಆಪಲ್ ಟಿವಿ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ.

ರವಿ ಬಸ್ರೂರು ಪ್ರಸ್ತುತ ಹಲವಾರು ಸಿನಿಮಾಗಳಿಗೆ ಸಂಗೀತ ನೀಡುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶಿಸಿ, ಜೂ ಎನ್​​ಟಿಆರ್ ನಟಿಸುತ್ತಿರುವ ಹೊಸ ಸಿನಿಮಾಕ್ಕೆ ಅವರು ಸಂಗೀತ ನೀಡುತ್ತಿದ್ದಾರೆ. ‘ಸಲಾರ್ 2’ಗೆ ಸಹ ಅವರೇ ಸಂಗೀತ ನೀಡಲಿದ್ದಾರೆ. ಮಲಯಾಳಂನ ‘ಟಿಕಿ-ಟಕ’, ‘ಕಾಲಿಯಾನ್’, ‘ದಿಂಸೋಲ್’, ‘ಕಟಕ’ ಇವುಗಳ ಜೊತೆಗೆ ಪ್ರಧಾನಿ ಮೋದಿ ಕುರಿತಾದ ‘ಮಾ ವಂದೆ’ ಇನ್ನೂ ಕೆಲ ಸಿನಿಮಾಗಳಿಗೆ ಸಂಗೀತ ನೀಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ