ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಬರೆದ ಕಥೆ ಆಧರಿಸಿದ ‘ಡೇರ್ಡೆವಿಲ್ ಮುಸ್ತಫಾ’ (Daredevil Musthafa) ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿಮರ್ಶಕರ ವಲಯದಿಂದಲೂ ಪಾಸಿಟಿವ್ ಮಾತುಗಳು ಕೇಳಿಬಂದಿವೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದೆ. ಬಳಿಕ ಚಿತ್ರಮಂದಿರಗಳ ಸಂಖ್ಯೆಯನ್ನೂ ಹೆಚ್ಚಿಸಲಾಯಿತು. ಈಗ ಪ್ರೇಕ್ಷಕರಿಗೆ ಈ ಸಿನಿಮಾ ತಂಡದ ಕಡೆಯಿಂದ ಒಂದು ಬಂಪರ್ ಆಫರ್ ನೀಡಲಾಗಿದೆ. ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರದ ಟಿಕೆಟ್ ಬೆಲೆಯನ್ನು (Daredevil Musthafa Ticket Price) ತಗ್ಗಿಸಲಾಗಿದೆ. ಏಕಪರದೆ ಚಿತ್ರಮಂದಿರಗಳು ಮಾತ್ರವಲ್ಲದೇ ಮಲ್ಟಿಪ್ಲೆಕ್ಸ್ಗಳಲ್ಲೂ ಟಿಕೆಟ್ ದರ ಕಡಿತ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಸೆಕೆಂಡ್ ಕ್ಲಾಸ್ಗೆ 50 ರೂಪಾಯಿ ಹಾಗೂ ಬಾಲ್ಕನಿಗೆ 75 ರೂಪಾಯಿ ನಿಗದಿ ಮಾಡಲಾಗಿದೆ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ (Multiplex) 99 ರೂಪಾಯಿಗೆ ಟಿಕೆಟ್ ಲಭ್ಯವಾಗುತ್ತಿವೆ.
ಒಳ್ಳೆಯ ಸಿನಿಮಾಗಳು ಬಂದಾಗ ಜನರು ಖಂಡಿತವಾಗಿಯೂ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಗಾಂಧಿನಗರದಲ್ಲಿದೆ. ಅದು ‘ಡೇರ್ಡೆವಿಲ್ ಮುಸ್ತಫಾ’ ವಿಚಾರದಲ್ಲಿ ನಿಜವಾಗಿದೆ. ಇದು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಾಣ ಮಾಡಿರುವ ಸಿನಿಮಾ. ಶಶಾಂಕ್ ಸೋಗಾಲ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಈಗ ಟಿಕೆಟ್ ಬೆಲೆ ತಗ್ಗಿಸಿರುವುದರಿಂದ ಇನ್ನಷ್ಟು ಜನರನ್ನು ತಲುಪಲು ಸಾಧ್ಯವಾಗಲಿದೆ. ಚಿತ್ರತಂಡದ ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: Daredevil Musthafa: ವಿದೇಶಕ್ಕೆ ಹೊರಟ ‘ಡೇರ್ಡೆವಿಲ್ ಮುಸ್ತಫಾ’; ಜೋರಾಯ್ತು ಕನ್ನಡ ಸಿನಿಮಾದ ಹವಾ
ಸಿನಿಮಾಗಳ ಟಿಕೆಟ್ ದರ ಜಾಸ್ತಿ ಇರುವುದರಿಂದಲೇ ಪ್ರೇಕ್ಷಕರು ಸಿನಿಮಾ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಿಗೆ ಬರುತ್ತಿಲ್ಲ ಎಂಬ ಮಾತಿದೆ. ಹಾಗಾಗಿ ಟಿಕೆಟ್ ಬೆಲೆ ತಗ್ಗಿಸುವ ಮೂಲಕ ಪ್ರೇಕ್ಷಕರು ಸೆಳೆಯುವ ಪ್ರಯತ್ನ ಬೇರೆ ಸಿನಿಮಾಗಳಿಂದ ಈ ಮೊದಲು ಕೂಡ ಆಗಿದ್ದುಂಟು. ಆಗೆಲ್ಲ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ‘ಡೇರ್ಡೆವಿಲ್ ಮುಸ್ತಫಾ’ ಸಿನಿಮಾಗೆ ಕಲೆಕ್ಷನ್ ಹೆಚ್ಚುವ ನಿರೀಕ್ಷೆ ಇದೆ.
ಇದನ್ನೂ ಓದಿ: Daredevil Musthafa Review: ಭರಪೂರ ನಗಿಸುತ್ತಾ ಮತಗಳ ಜಗಳ ಬಿಡಿಸುವ ‘ಡೇರ್ಡೆವಿಲ್ ಮುಸ್ತಫಾ’
ಶಿಶಿರ್ ಬೈಕಾಡಿ, ಆದಿತ್ಯ ಆಶ್ರೀ, ಸುಪ್ರೀತ್ ಭಾರದ್ವಾಜ್, ಆಶಿತ್ ಶ್ರೀವತ್ಸಾ, ಅಭಯ್, ಮಂಡ್ಯ ರಮೇಶ್, ಉಮೇಶ್, ಪ್ರೇರಣಾ ಮುಂತಾದ ಕಲಾವಿದರು ‘ಡೇರ್ಡೆವಿಲ್ ಮುಸ್ತಫಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು. ‘ನಾವೆಲ್ಲರೂ ಸೌಹಾರ್ದಯುತವಾಗಿ ಬದುಕಬೇಕು ಎಂಬುದನ್ನು ಈ ಸಿನಿಮಾ ನೋಡಿ ಕಲಿಯಬೇಕು. ಎಲ್ಲರೂ ಅನುಸರಿಸಬಹುದಾದ ಸಂದೇಶ ಇದರಲ್ಲಿ ಇದೆ. ಬೋಧನೆ ಮಾಡುವಂತಹ ಸ್ಟೋರಿ ಇದಲ್ಲ. ಇದು ಖುಷಿ ನೀಡುತ್ತದೆ. ಸಾಕಷ್ಟು ಮನರಂಜನೆ ಇದೆ. ಸಣ್ಣ ಪಾತ್ರಗಳಿಗೂ ಪ್ರತಿ ಕಲಾವಿದರು ಜೀವ ತುಂಬಿದ್ದಾರೆ’ ಎಂದು ಅವರು ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.