ಡಾರ್ಲಿಂಗ್ ಕೃಷ್ಣ (Darling Krishna) ಪ್ರಸ್ತುತ ಕನ್ನಡ ಚಿತ್ರರಂಗದ ಪ್ರೇಮಕತೆಗಳ ಸರದಾರನೇ ಆಗಿದ್ದಾರೆ. ಸಾಲು ಸಾಲು ಪ್ರೇಮಕತೆ, ರೊಮ್ಯಾಂಟಿಕ್ ಹಾಸ್ಯಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಸ್ಯಾಂಡಲ್ವುಡ್ನ ಬ್ಯುಸಿ ಯುವನಟರೂ ಆಗಿರುವ ಡಾರ್ಲಿಂಗ್ ಕೃಷ್ಣ ಅವರ ಹೊಸ ಸಿನಿಮಾವೊಂದರ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು ಸಿನಿಮಾದ ಬಿಡುಗಡೆ ದಿನಾಂಕವನ್ನು ಅವರ ಹುಟ್ಟುಹಬ್ಬದ ದಿನವಾದ ಜೂನ್ 12 (ನಿನ್ನೆ) ಘೋಷಿಸಲಾಗಿದೆ. ಕೃಷ್ಣ ಜೊತೆಗೆ ರಚಿತಾ ರಾಮ್ (Rachita Ram) ಸಹ ನಟಿಸಿರುವ ಈ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆಗಳನ್ನು ಕೃಷ್ಣ ಇರಿಸಿಕೊಂಡಿದ್ದಾರೆ.
ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ‘ಲವ್ ಮೀ ಆರ್ ಹೇಟ್ ಮೀ’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಬಹ ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ 29 ರಂದು ಬಿಡುಗಡೆಯಾಗಲಿದೆ. ದೀಪಕ್ ಗಂಗಾಧರ್ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ದೀಪಕ್ ಗಂಗಾಧರ್ ಮೂವೀಸ್ ಲಾಂಛನದಲ್ಲಿ ದೀಪಕ ಗಂಗಾಧರ್ ಅವರ ಜೊತೆಗೆ ಸುನೀಲ್ ಬಿ.ಎನ್, ಮದನ್ ಗಂಗಾಧರ್, ಚಂದನ್ ಜೆ ಹಾಗೂ ನಾಗರಾಜ್ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಲವ್ ಸ್ಟೋರಿ ಜಾನರ್ ಈ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಐದು ಹಾಡುಗಳಿರುವ ಈ ಚಿತ್ರಕ್ಕೆ ಶ್ರೀನಿಧರ್ ಸಂಭ್ರಮ್ – ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಮುರಳಿ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್, ರಘು ನಡವಳ್ಳಿ ಹಾಗೂ ರಘು ಸಂಭಾಷಣೆ ಬರೆದಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ರಚಿತಾರಾಮ್ ನಟಿಸುತ್ತಿದ್ದಾರೆ. ರೂಪೇಶ್ ಶೆಟ್ಟಿ, ನಂದಿನಿ, ರಾಕೇಶ್ ಪೂಜಾರಿ, ದೀಪಿಕಾ, ಪ್ರವೀಣ್, ಸುಂದರ್ ವೀಣಾ, ರಮೇಶ್ ಭಟ್ ಮುಂತಾದವರು “ಲವ್ ಮೀ ಆರ್ ಹೇಟ್ ಮೀ” ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ:ಡಾರ್ಲಿಂಗ್ ಕೃಷ್ಣ ಸಂದರ್ಶನ: ‘ಲವ್ ಬರ್ಡ್ಸ್’ ಚಿತ್ರದಲ್ಲಿದೆ ಅನಿರೀಕ್ಷಿತ ಕ್ಲೈಮ್ಯಾಕ್ಸ್
ಡಾರ್ಲಿಂಗ್ ಕೃಷ್ಣ ನಟನೆಯ ಮಿಸ್ಟರ್ ಬ್ಯಾಚುಲರ್ ಹಾಗೂ ಲವ್ ಬರ್ಡ್ಸ್ ಸಿನಿಮಾಗಳು ಇತ್ತೀಚೆಗೆ ಬಿಡುಗಡೆ ಆಗಿವೆ. ಆದರೆ ಎರಡೂ ಸಿನಿಮಾಗಳು ಹೆಚ್ಚೇನು ಕಲೆಕ್ಷನ್ ಮಾಡಿಲ್ಲ. ಲವ್ ಬರ್ಡ್ಸ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಅವರ ಪತ್ನಿ ಮಿಲನಾ ನಾಗರಾಜ್ ಒಟ್ಟಿಗೆ ನಟಿಸಿದ್ದರು. ಇದೀಗ ಮೂರು ಸಿನಿಮಾಗಳು ಡಾರ್ಲಿಂಗ್ ಕೃಷ್ಣ ಕೈಯಲ್ಲಿವೆ. ಲವ್ ಮೀ ಆರ್ ಹೇಟ್ ಮೀ, ಕೌಸಲ್ಯಾ ಸುಪ್ರಜಾ ರಾಮ ಸಿನಿಮಾಗಳು ಬಹುತೇಕ ಚಿತ್ರೀಕರಣ ಮುಗಿಸಿವೆ. ಇವುಗಳ ಜೊತೆಗೆ ಮತ್ತೊಂದು ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ಒಪ್ಪಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ ಸ್ವತಃ ನಿರ್ದೇಶಕ ಹಾಗೂ ನಿರ್ಮಾಪಕರೂ ಆಗಿದ್ದು ಈಗಾಗಲೇ ಲವ್ ಮಾಕ್ಟೆಲ್, ಲವ್ ಮಾಕ್ಟೆಲ್ 2 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಲವ್ ಮಾಕ್ಟೆಲ್ 3 ಸಿನಿಮಾವನ್ನು ಸಹ ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.
2010 ರಲ್ಲಿ ಜಾಕಿ ಸಿನಿಮಾದಲ್ಲಿ ಸಣ್ಣ ಪಾತ್ರದ ಮೂಲಕ ನಟನೆಗೆ ಕಾಲಿಟ್ಟ ಡಾರ್ಲಿಂಗ್ ಕೃಷ್ಣ ಸಣ್ಣ ಪಾತ್ರಗಳು, ಪೋಷಕ ಪಾತ್ರಗಳು ಮಾಡುತ್ತಾ ಕೊನೆಗೆ ನಾಯಕ ನಟರಾದವರು. ನಟನಾಗುವ ಜೊತೆಗೆ ಅಸಿಸ್ಟೆಂಟ್ ಡೈರೆಕ್ಟರ್ ಸಹ ಆಗಿದ್ದ ಡಾರ್ಲಿಂಗ್ ಕೃಷ್ಣಗೆ ಆರಂಭದ ದಿನಗಳಲ್ಲಿ ನಟ ಪುನೀತ್ ರಾಜ್ಕುಮಾರ್ ಬಹುವಾಗಿ ಬೆಂಬಲ ನೀಡಿದ್ದರು. ಅವರ ಜಾಕಿ, ಹುಡುಗರು, ದೊಡ್ಮನೆ ಹುಡುಗ ಸಿನಿಮಾಗಳಲ್ಲಿ ಅವಕಾಶ ನೀಡಿ ಬೆಂಬಲಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ