ಡಾರ್ಲಿಂಗ್ ಕೃಷ್ಣ ಸಂದರ್ಶನ: ‘ಲವ್ ಬರ್ಡ್ಸ್’ ಚಿತ್ರದಲ್ಲಿದೆ ಅನಿರೀಕ್ಷಿತ ಕ್ಲೈಮ್ಯಾಕ್ಸ್
Love Birds Movie: ಚಿತ್ರರಂಗದಲ್ಲಿ ಪ್ರೇಕ್ಷಕರಿಗೆ ಒಂದಷ್ಟು ಫೇವರಿಟ್ ಜೋಡಿಗಳು ಇರುತ್ತವೆ. ಅವರು ಒಟ್ಟಾಗಿ ನಟಿಸಿದರೆ ಜನರಿಗೆ ನಿರೀಕ್ಷೆ ಹೆಚ್ಚಾಗುತ್ತದೆ. ನಿಜ ಜೀವನದ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಕಾಂಬಿನೇಷನ್ನ ಸಿನಿಮಾ ಬಗ್ಗೆಯೂ ಸಿನಿಪ್ರಿಯರಿಗೆ ಕುತೂಹಲ ಇದೆ.
ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಮಿಲನಾ ನಾಗರಾಜ್ ಕಾಂಬಿನೇಷನ್ ಎಂದಾಕ್ಷಣ ಸಿನಿಪ್ರಿಯರಿಗೆ ಒಂದು ನಿರೀಕ್ಷೆ ಹುಟ್ಟುತ್ತದೆ. ಈಗಾಗಲೇ ‘ಲವ್ ಮಾಕ್ಟೇಲ್’ ಹಾಗೂ ‘ಲವ್ ಮಾಕ್ಟೇಲ್ 2’ ಸಿನಿಮಾ ಮೂಲಕ ಇವರ ಕೆಮಿಸ್ಟ್ರಿ ಹೇಗಿದೆ ಎಂಬುದು ಗೊತ್ತಾಗಿದೆ. ಈಗ ಈ ಜೋಡಿ ‘ಲವ್ ಬರ್ಡ್ಸ್’ ಆಗಿ ತೆರೆಮೇಲೆ ಬರುತ್ತಿದೆ. ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಕೃಷ್ಣ ಹಾಗೂ ಮಿಲನಾ (Milana Nagaraj) ಮಾಡಿದ ಪಾತ್ರಕ್ಕೆ ತದ್ವಿರುದ್ಧವಾಗಿ ‘ಲವ್ ಬರ್ಡ್ಸ್’ ಪಾತ್ರ ಮೂಡಿಬಂದಿದೆ. ಪಿ ಸಿ ಶೇಖರ್ ನಿರ್ದೇಶನದ ಈ ಸಿನಿಮಾದಲ್ಲಿ ಸಂಯುಕ್ತ ಹೊರನಾಡು, ಸಾಧುಕೋಕಿಲ, ರಂಗಾಯಣ ರಘು, ಅವಿನಾಶ್, ವೀಣಾ ಸುಂದರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಸಿನಿಮಾ ಬಗ್ಗೆ, ತಮ್ಮ ಪಾತ್ರದ ಬಗ್ಗೆ, ಮಿಲನಾ ಜತೆಗಿನ ಕಾಂಬಿನೇಷನ್ ಬಗ್ಗೆ ನಟ ಡಾರ್ಲಿಂಗ್ ಕೃಷ್ಣ ಅವರು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ್ದಾರೆ.
ಭಿನ್ನ ಪಾತ್ರ
ಚಿತ್ರರಂಗದಲ್ಲಿ ಪ್ರೇಕ್ಷಕರಿಗೆ ಒಂದಷ್ಟು ಫೇವರಿಟ್ ಜೋಡಿಗಳು ಇರುತ್ತವೆ. ಅವರು ಒಟ್ಟಾಗಿ ನಟಿಸಿದರೆ ಜನರಿಗೆ ನಿರೀಕ್ಷೆ ಹೆಚ್ಚಾಗುತ್ತದೆ. ನಿಜ ಜೀವನದ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಕಾಂಬಿನೇಷನ್ನ ಸಿನಿಮಾ ಬಗ್ಗೆಯೂ ಸಿನಿಪ್ರಿಯರಿಗೆ ಕುತೂಹಲ ಇದೆ. ‘ಲವ್ ಮಾಕ್ಟೇಲ್, ಲವ್ ಮಾಕ್ಟೇಲ್ 2 ಬಳಿಕ ‘ಲವ್ ಬರ್ಡ್ಸ್’ನಲ್ಲಿ ನಾವು ನಟಿಸಿದ್ದೇವೆ. ನನ್ನದು ಮಿಲನಾ ಕಾಂಬಿನೇಷನ್ ಎಂದಾಗ ಜನರಿಗೆ ಒಂದು ನಿರೀಕ್ಷೆ ಇರುತ್ತದೆ. ಈ ಟೈಟಲ್ ಜನರಿಗೆ ತುಂಬಾನೇ ಹತ್ತಿರವಾಗುತ್ತದೆ. ಲವ್ ಮಾಕ್ಟೇಲ್ ಚಿತ್ರದಲ್ಲಿ ಆದಿ ಮತ್ತು ನಿಧಿ ಡ್ರೀಮ್ ಕ್ಯಾರೆಕ್ಟರ್ ಆಗಿತ್ತು. ಹೀಗು ಇರ್ತಾರಾ ಎನ್ನುವ ರೀತಿಯಲ್ಲಿ ಪಾತ್ರ ಮೂಡಿ ಬಂದಿತ್ತು. ಆದರೆ, ಲವ್ ಬರ್ಡ್ಸ್ನಲ್ಲಿ ಹಾಗಿಲ್ಲ. ಇದು ಮನೆಮನೆಯ ಕಥೆ. ಸಣ್ಣ ವಿಚಾರಕ್ಕೂ ಗಂಡ-ಹೆಂಡತಿ ಮಧ್ಯೆ ಜಗಳ ಆಗೋ ಕಥೆ’ ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.
ಯಾರೂ ಊಹಿಸದ ಕ್ಲೈಮ್ಯಾಕ್ಸ್
ಪ್ರತಿ ಚಿತ್ರಕ್ಕೆ ಕ್ಲೈಮ್ಯಾಕ್ಸ್ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಕ್ಲೈಮ್ಯಾಕ್ಸ್ ಚೆನ್ನಾಗಿದ್ದರೆ ಸಿನಿಮಾ ಗೆದ್ದಂತೆ. ‘ಲವ್ ಬರ್ಡ್ಸ್’ ಚಿತ್ರಕ್ಕೆ ಸಖತ್ ಆಗಿರೋ ಕ್ಲೈಮ್ಯಾಕ್ಸ್ ನೀಡಲಾಗಿದೆಯಂತೆ. ‘ಸಿನಿಮಾದಲ್ಲಿ ಬರುವ ಪ್ರತಿ ವಿಚಾರವೂ ತುಂಬಾ ರಿಲೇಟಬಲ್ ಆಗಿದೆ. ಸಿನಿಮಾಗೆ ಅನಿರೀಕ್ಷಿತ ಕ್ಲೈಮ್ಯಾಕ್ಸ್ ಇದೆ. ಸಿನಿಮಾ ತುಂಬಾ ಎಮೋಷನಲ್ ಆಗಿದೆ. ಸಣ್ಣ ವಿಚಾರಗಳೂ ಮನಸ್ಸಿಗೆ ಹತ್ತಿರ ಆಗುತ್ತವೆ’ ಅನ್ನೋದು ಡಾರ್ಲಿಂಗ್ ಕೃಷ್ಣ ಅಭಿಪ್ರಾಯ.
ಒಂದಷ್ಟು ಹಾಸ್ಯ, ಒಂದೊಳ್ಳೆಯ ಮೆಸೇಜ್
ಡಾರ್ಲಿಂಗ್ ಕೃಷ್ಣ ಸಿನಿಮಾದಲ್ಲಿ ಕಾಮಿಡಿ ಹೈಲೈಟ್ ಆಗಿರುತ್ತದೆ. ‘ಲವ್ ಮಾಕ್ಟೇಲ್’, ‘ಲವ್ ಮಾಕ್ಟೇಲ್ 2’ ಚಿತ್ರದಲ್ಲಿ ಹಾಸ್ಯ ಕೆಲಸ ಮಾಡಿತ್ತು. ‘ಲವ್ ಬರ್ಡ್ಸ್’ನಲ್ಲೂ ಅದು ಮುಂದುವರಿಯುತ್ತಿದೆ. ‘ಸಿನಿಮಾದಲ್ಲಿ ಮಿಲನಾ ಜೊತೆಗಿನ ಜಗಳದ ದೃಶ್ಯಗಳನ್ನು ನೋಡಿದಾಗ ಅಯ್ಯೋ ಇವರೇಕೆ ಇಷ್ಟು ಜಗಳ ಆಡುತ್ತಿದ್ದಾರೆ ಎನಿಸುವುದಿಲ್ಲ. ಬದಲಿಗೆ ಅದು ಹಾಸ್ಯವಾಗಿ ಕಾಣುತ್ತದೆ. ಸಿನಿಮಾದಲ್ಲಿ ಫನ್ ಇದೆ. ಒಂದೊಳ್ಳೆಯ ಫ್ಯಾಮಿಲಿ ಸಿನಿಮಾ. ಎಲ್ಲಿಯೂ ಮುಜುಗರ ಆಗಲ್ಲ. ಚಿತ್ರಕ್ಕೆ ಯು ಪ್ರಮಾಣಪತ್ರ ಸಿಕ್ಕಿದೆ. ಒಂದೊಳ್ಳೆಯ ಮೆಸೇಜ್ ಇದೆ’ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ.
ನಮ್ಮನ್ನು ಬೇರೆ ರೀತಿ ನೋಡ್ತೀರಾ
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕ್ಯೂಟ್ ಕಪಲ್. ಅವರು ಅನೇಕರಿಗೆ ಮಾದರಿ. ‘ಲವ್ ಬರ್ಡ್ಸ್’ನಲ್ಲಿ ಅವರ ಪಾತ್ರ ಭಿನ್ನವಾಗಿದೆ. ‘ನಮ್ಮಿಬ್ಬರನ್ನು ಇಷ್ಟಪಡೋರಿಗೆ ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಮೂಡಿದೆ. ನಮ್ಮನ್ನು ಬೇರೆ ರೀತಿ ನೋಡ್ತಾರೆ. ಲವ್ ಮಾಕ್ಟೇಲ್ ಹಾಗೂ ಲವ್ ಬರ್ಡ್ಸ್ ಎರಡೂ ತದ್ವಿರುದ್ಧ ಪಾತ್ರಗಳು’ ಎಂದು ಮಾಹಿತಿ ನೀಡುತ್ತಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:07 am, Thu, 16 February 23