ಬೆನ್ನು ನೋವಿನಿಂದ ನಟ ದರ್ಶನ್ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಒಂದು ವಾರದ ಒಳಗೆ ಅವರು ಚಿಕಿತ್ಸೆಯ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಬೇಕಿದೆ. ಈಗಾಗಲೇ ಜಾಮೀನು ಪಡೆದು 2 ದಿನ ಕಳೆದಿದೆ. ಆದ್ದರಿಂದ ಸಮಯ ವ್ಯರ್ಥ ಮಾಡದೇ ಇಂದು (ನವೆಂಬರ್ 1) ಅವರು ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್ ಆಗಮಿಸಿರುವ ಕಾರಣದಿಂದ ಆಸ್ಪತ್ರೆಗೆ ಹೊರಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ನೆರೆದಿದ್ದಾರೆ. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
ನಾಲ್ಕು ತಿಂಗಳ ಬಳಿಕ ಜೈಲಿನಿಂದ ಹೊರಗೆ ಬಂದಿರುವ ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿರುವುದರಿಂದ ಬಿಜಿಎಸ್ ಆಸ್ಪತ್ರೆಯ ಬಳಿ ಕೆಂಗೇರಿ ಠಾಣೆ ಪೊಲೀಸರಿಂದ ಬಂದೋಬಸ್ತ್ ಮಾಡಲಾಗಿದೆ. ಒಂದು ಕೆಎಸ್ಆರ್ಪಿ ತುಕಡಿ ಜೊತೆ 50ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
2013ರಲ್ಲೂ ಬೆನ್ನುನೋವಿನ ಚಿಕಿತ್ಸೆಗೆ ದರ್ಶನ್ ಅವರು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ‘ಬೃಂದಾವನ’ ಸಿನಿಮಾದ ಶೂಟಿಂಗ್ ವೇಳೆ ಕುದುರೆ ಮೇಲಿಂದ ಬಿದ್ದಿದ್ದರಿಂದ ಅವರಿಗೆ ನೋವು ಕಾಣಿಸಿಕೊಂಡಿತ್ತು. ಆಗಲೂ ಇದೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಈಗ ಪತ್ನಿ ವಿಜಯಲಕ್ಷ್ಮಿ ಹಾಗೂ ಸ್ನೇಹಿತ ಧನ್ವೀರ್ ಜೊತೆ ದರ್ಶನ್ ಅವರು ಆಸ್ಪತ್ರೆಗೆ ಬಂದಿದ್ದಾರೆ.
ನಟ ದರ್ಶನ್ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು
ಮೊದಲು ದರ್ಶನ್ ಅವರು ಜಾಮೀನು ಪಡೆಯಲು ಪ್ರಯತ್ನಿಸಿದ್ದಾಗ ಅರ್ಜಿ ವಜಾ ಆಗಿತ್ತು. ಆ ಬಳಿಕ ಅವರಿಗೆ ಬೆನ್ನು ನೋವಿನ ಸಮಸ್ಯೆ ಜಾಸ್ತಿ ಆಯಿತು. ದರ್ಶನ್ ನಡೆಯಲು ಕೂಡ ಕಷ್ಟಪಡುವಂತಹ ಪರಿಸ್ಥಿತಿ ಬಂತು. ಹಾಗಾಗಿ ಬಳ್ಳಾರಿಯಲ್ಲಿ ವೈದ್ಯರು ತಪಾಸಣೆ ನಡೆಸಿ, ಸರ್ಜರಿಯ ಅಗತ್ಯ ಇದೆ ಎಂದು ಹೇಳಿದ್ದರು. ಆ ವರದಿಯ ಆಧಾರದಲ್ಲಿ ಮತ್ತೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಬುಧವಾರ (ಅ.30) ಅವರಿಗೆ ಜಾಮೀನು ನೀಡಲಾಯಿತು. ಆರು ವಾರದ ಒಳಗೆ ಅವರು ಚಿಕಿತ್ಸೆ ಪಡೆಯಬೇಕಿದೆ. ಒಟ್ಟು 131 ದಿನಗಳ ಕಾಲ ಜೈಲಿನಲ್ಲಿ ಇದ್ದ ದರ್ಶನ್ ಈಗ ಹೊರಗೆ ಬಂದಿದ್ದಾರೆ. ಹಲವು ಷರತ್ತುಗಳ ಮೇಲೆ ಜಾಮೀನು ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.