ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ದರ್ಶನ್ ಹಾಗೂ ಗ್ಯಾಂಗ್ನ ಅರೆಸ್ಟ್ ಮಾಡಲಾಗಿದೆ. ಸದ್ಯ ದರ್ಶನ್ ಹಾಗೂ ಆತನ ಸಹಚರರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇಂದು (ಜುಲೈ 18) ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ, ಅವರನ್ನು ಮತ್ತೆ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗುತ್ತಿದೆ. ಈ ವೇಳೆ ಅವರುಗಳ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ ಆಗೋ ಸಾಧ್ಯತೆ ಇದೆ.
ನಟ ದರ್ಶನ್ ಹಾಗೂ ಇತರರು ಜೂನ್ 11ರಂದು ಬಂಧನಕ್ಕೆ ಒಳಗಾದರು. ಬಂಧನದ ಬಳಿಕ ಒಂದೊಂದೇ ಸತ್ಯ ಹೊರ ಬರುತ್ತಿದೆ. ಇನ್ನೂ ಚಾರ್ಜ್ಶೀಟ್ ಸಲ್ಲಿಕೆ ಮಾಡಿಲ್ಲ. ಇದೇ ಕಾರಣ ಇಟ್ಟುಕೊಂಡು ದರ್ಶನ್ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಗೆ ಕೋರಲು ನಿರ್ಧರಿಸಲಾಗಿದೆ. ಆರೋಪಿಗಳನ್ನು ಜಡ್ಜ್ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಜೈಲು ಊಟದಿಂದ ದರ್ಶನ್ಗೆ ಆಗಿದೆ ಹಲವು ಆರೋಗ್ಯ ಸಮಸ್ಯೆ; ಇಲ್ಲಿದೆ ವಿವರ
ನಟ ದರ್ಶನ್ ಅವರು ಪ್ರಭಾವಿ ವ್ಯಕ್ತಿ. ಅವರಿಗೆ ಜಾಮೀನು ಸಿಕ್ಕರೆ ಹೊರ ಬಂದು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಪೊಲೀಸರು ಕೋರ್ಟ್ ಎದುರು ಆತಂಕ ಹೊರಹಾಕಲಿದ್ದಾರೆ. ಇದರ ಜೊತೆಗೆ ಅವರು ವಿದೇಶಕ್ಕೆ ತೆರಳುವ ಭಯವೂ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಇದರ ನಡುವೆ ಮನೆ ಊಟ ಕಲ್ಪಿಸುವಂತೆ ಕೋರಿ ರಿಟ್ ಅರ್ಜಿಯೂ ಇಂದು ವಿಚಾರಣೆ ನಡೆಯಲಿದೆ. ನಟ ದರ್ಶನ್ ಅರ್ಜಿಗೆ ಜೈಲು ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಲಿದ್ದಾರೆ. ಪ್ರಕರಣದ ತನಿಖಾಧಿಕಾರಿಗಳಿಂದಲೂ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಮಧ್ಯಾಹ್ನದ ಬಳಿಕ ನಟ ದರ್ಶನ್ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.