ಕನ್ನಡ ಸಿನಿಮಾರಂಗದ ರೂಪಾಂತರದ ಕಾಲದಲ್ಲಿ ಬರುತ್ತಿರುವ ‘ರೂಪಾಂತರ’
ರಾಜ್ ಬಿ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ರೂಪಾಂತರ’ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿದ್ದು ಸಿನಿಮಾ ಜುಲೈ 26ಕ್ಕೆ ತೆರೆಗೆ ಬರಲಿದೆ.
ಕನ್ನಡ ಚಿತ್ರರಂಗ ಕಾಲ-ಕಾಲಕ್ಕೆ ರೂಪಾಂತರ ಹೊಂದುತ್ತಲೇ ಬಂದಿದೆ. ಹೊಸ ಪ್ರತಿಭೆಗಳು ಹೊಸ ಬಗೆಯ ಸಿನಿಮಾಗಳೊಟ್ಟಿಗೆ, ಕತೆಗಳೊಟ್ಟಿಗೆ ಬರುತ್ತಿದ್ದಾರೆ. ಪ್ರೇಕ್ಷಕ ತನಗೆ ಇಷ್ಟವಾದುದನ್ನು ಇರಿಸಿಕೊಂಡು ಉಳಿದವರನ್ನು ಹೊರಗೆ ಕಳಿಸುತ್ತಿದ್ದಾನೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಮಾಸ್ ಮಸಾಲ ಸಿನಿಮಾಗಳ ಜೊತೆಗೆ ಸಂವೇದನಾತ್ಮಕ ಸಿನಿಮಾಗಳನ್ನು ನೋಡುವ ಅಭಿರುಚಿಯೂ ಕನ್ನಡ ಪ್ರೇಕ್ಷಕರಿಗೆ ಹೆಚ್ಚಿದೆ. ಅವರ ಅಭಿರುಚಿಯ ತಣಿಸುವ ಕೆಲವು ಸಿನಿಮಾಗಳೂ ಸಹ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಆಗುತ್ತಿವೆ. ಅದೇ ಸಾಲಿನಲ್ಲಿ ನಿಲ್ಲುವ ‘ರೂಪಾಂತರ’ ಹೆಸರಿನ ಹೊಸ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.
ತಮ್ಮ ಅಭಿನಯ, ಸಿನಿಮಾ ನಿರ್ದೇಶನದಿಂದ ಈಗಾಗಲೇ ಕನ್ನಡ ಸಿನಿಮಾ ಪ್ರೇಕ್ಷಕರ ಮನದಲ್ಲಿ ಜಾಗ ಪಡೆದಿರುವ ರಾಜ್ ಬಿ ಶೆಟ್ಟಿ ‘ರೂಪಾಂತರ’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇದೀಗ ಬಿಡುಗಡೆ ಆಗಿರುವ ‘ರೂಪಾಂತರ’ ಸಿನಿಮಾದ ಟ್ರೈಲರ್ ತನ್ನ ಭಿನ್ನತೆಯಿಂದ ಗಮನ ಸೆಳೆಯುತ್ತಿದೆ. ಟ್ರೈಲರ್ನಲ್ಲಿ ಹಿಂಸಾತ್ಮಕ ಪ್ರವೃತ್ತಿಯವೊಬ್ಬನಿದ್ದಾನೆ, ಹಳ್ಳಿಯ ಮುದಿ ಪತಿ-ಪತ್ನಿ ಮತ್ತು ಅವರ ನಗರದ ಕನಸುಗಳಿವೆ. ಒಬ್ಬಂಟಿ ಯುವಕನಿದ್ದಾನೆ, ಭಿಕ್ಷೆ ಬೇಡುವ ಯುವತಿ ಇದ್ದಾಳೆ, ಅವಳೊಟ್ಟಿಗೆ ಪುಟ್ಟ ಮಗುವೊಂದಿದೆ, ಇದೆಲ್ಲದರ ಜೊತೆಗೆ ನೂರಾರು ವರ್ಷಗಳ ನಂತರ ಭೂಮಿ ಅಲ್ಲಿ ವಾಸಿಸುತ್ತಿರುವ ಕೈಯಲ್ಲಿ ಅತ್ಯಾಧುನಿಕ ಆಯುಧಗಳನ್ನು ಹಿಡಿದ ಜನರಿದ್ದಾರೆ. ಒಟ್ಟಾರೆಯಾಗಿ ಟ್ರೈಲರ್ ಬಹಳ ಕುತೂಹಲ ಮೂಡಿಸುತ್ತಿದ್ದು ಸಿನಿಮಾ ಜುಲೈ 26 ರಂದು ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ:ಸಿನಿಮಾಕ್ಕೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂದು ಹೆಸರಿಟ್ಟಿದ್ದೇಕೆ? ವಿವರಿಸಿದ್ದಾರೆ ರಾಜ್ ಬಿ ಶೆಟ್ಟಿ
ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ, ‘ನಾವು ಮಂಗಳೂರಿನಲ್ಲಿ ಸಿನಿಮಾ ಮಾಡಬೇಕಾದರೆ ಈಗ ಮಾರುಕಟ್ಟೆಯಲ್ಲಿರುವುದಕ್ಕಿಂತಲೂ ಭಿನ್ನವಾದ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು. ಆಗ ಜನರು ಸಿನಿಮಾಗಳನ್ನು ನೋಡುತ್ತಾರೆ ಎಂಬ ಉದ್ದೇಶದಿಂದ ಸಿನಿಮಾ ಮಾಡಲು ಆರಂಭಿಸಿದ್ದೆವು. ಅದೇ ಉದ್ದೇಶದಿಂದ ಈ ಸಿನಿಮಾವನ್ನು ಮಾಡಿದ್ದೇವೆ. ಇದು ನನಗೆ ಬಹಳ ಇಷ್ಟವಾದ ಸಿನಿಮಾ. ಏಕೆಂದರೆ ಈ ಚಿತ್ರದಲ್ಲಿ ನಾನು ನಟ ಮಾತ್ರ. ಸಂಭಾಷಣೆಗೆ ಸ್ವಲ್ಪ ಸಹಾಯ ಮಾಡಿದ್ದೇನೆ. ಮಿಕ್ಕಿದೆಲ್ಲಾ ಈ ತಂಡದ ಕನಸು. ನನ್ನ ಬಿಟ್ಟು ಬೇರೆ ಮುಖ್ಯಪಾತ್ರಗಳು ಈ ಸಿನಿಮಾದಲ್ಲಿವೆ. ಅವರೆಲ್ಲಾ “ರೂಪಾಂತರ” ಗೊಳ್ಳುವುದೆ ಚಿತ್ರದ ಕಥೆ. “ಒಂದು ಮೊಟ್ಟೆಯ ಕಥೆ ” ಚಿತ್ರ ಮಾಡಿದ ತಂಡದೊಂದಿಗೆ ಈ ಚಿತ್ರ ಮಾಡಿರುವುದು ಖುಷಿಯಾಗಿದೆ’ ಎಂದರು.
ನಿರ್ಮಾಪಕ ಸುಹಾನ್ ಪ್ರಸಾದ್ ಮಾತನಾಡಿ, ‘ಮಂಗಳೂರಿನವರು ಮಂಗಳೂರಿಗರಿಗೆ ಸಿನಿಮಾ ಮಾಡುತ್ತಾರೆ ಎಂಬ ಮಾತಿದೆ. ಆದರೆ ಈ ಚಿತ್ರವನ್ನು ನಾವು ಬೆಂಗಳೂರಿನಲ್ಲಿ ಮಾಡಿದ್ದೇವೆ. ರಾಜ್ ಬಿ ಶೆಟ್ಟಿ ಅವರನ್ನು ಹೊರತು ಪಡಿಸಿ ಮಿಕ್ಕೆಲ್ಲ ನಟರು ಬೇರೆ ಬೇರೆ ಪ್ರಾಂತ್ಯದವರು. ಇದೇ 26 ರಂದು ಚಿತ್ರ ಬಿಡುಗಡೆಯಾಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ’ ಎಂದರು.
ಐದು ಪ್ರಮುಖಪಾತ್ರಗಳ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ. ರಾಜ್ ಬಿ ಶೆಟ್ಟಿ ಸೇರಿದಂತೆ ಚಿತ್ರತಂಡದ ಸಹಕಾರದಿಂದ ಈ ಚಿತ್ರ ಚೆನ್ನಾಗಿ ಬಂದಿದೆ ಎಂದರು ನಿರ್ದೇಶಕ ಮಿಥಿಲೇಶ್ ಎಡವಲತ್. ಚಿತ್ರದಲ್ಲಿ ನಟಿಸಿರುವ ಅಂಜನ್ ಭಾರದ್ವಾಜ್ ಹಾಗೂ ಲೇಖಾ ನಾಯ್ಡು ಅವರು ತಮ್ಮ ಪಾತ್ರದ ಕುರಿತು ಮಾತನಾಡಿದರು. ಸಂಗೀತವನ್ನು ಮಿದುನ್ ಮುಕುಂದನ್ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ