ರೇಣುಕಾ ಸ್ವಾಮಿ ಕೊಲೆ ಆರೋಪಿಗಳಿಗೆಲ್ಲ ಜಾಮೀನು ದೊರೆತಿದೆ. ಜೈಲಿನಿಂದ ಬಿಡುಗಡೆ ಆದ ಬಳಿಕ ಇದೇ ಮೊದಲ ಬಾರಿಗೆ ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಒಟ್ಟಿಗೆ ಸೇರಿದ್ದರು. ದರ್ಶನ್, ಪವಿತ್ರಾ ಗೌಡ, ಪ್ರದೋಶ್, ವಿನಯ್, ನಾಗರಾಜು ಸೇರಿದಂತೆ ಎಲ್ಲ ಆರೋಪಿಗಳು ಇಂದು (ಜನವರಿ 10) ಸಿಸಿಎಚ್ 57ರ ಕೋರ್ಟ್‌ನಲ್ಲಿ ಹಾಜರಾದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರುಗಳು ಪರಸ್ಪರ ಮುಖಾಮುಖಿ ಆದರು.
ಪವಿತ್ರಾ ಗೌಡ ಹಾಗೂ ಇನ್ನಿತರೆ ಆರೋಪಿಗಳು ತುಸು ಮುಂಚಿತವಾಗಿಯೇ ನ್ಯಾಯಾಲಯಕ್ಕೆ ಬಂದಿದ್ದರು. ಪವಿತ್ರಾ ಗೌಡ ಅವರು ತಮ್ಮ ವಕೀಲರೊಂದಿಗೆ ಚರ್ಚೆ ಮಾಡುತ್ತಾ ನ್ಯಾಯಾಧೀಶರ ಆಗಮನಕ್ಕೆ ಕಾಯುತ್ತಾ ನಿಂತಿದ್ದರು. ದರ್ಶನ್ ತುಸು ತಡವಾಗಿ ನ್ಯಾಯಾಲಯಕ್ಕೆ ಬಂದರು. ಅವರನ್ನು ಅವರ ಗೆಳೆಯ ಧನ್ವೀರ್ ಗೌಡ ಕಾರಿನಲ್ಲಿ ಕರೆದುಕೊಂಡು ಬಂದರು. ನ್ಯಾಯಾಲಯಕ್ಕೆ ಬಂದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಮಾತನಾಡಿದರು.
ದರ್ಶನ್ ಅವರ ಆರೋಗ್ಯವನ್ನು ಪವಿತ್ರಾ ಗೌಡ ವಿಚಾರಿಸಿದರು. ಪವಿತ್ರಾರ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಆ ಬಳಿಕ ಪವಿತ್ರಾರ ಆರೋಗ್ಯವನ್ನು ದರ್ಶನ್ ವಿಚಾರಿಸಿದ್ದಲ್ಲದೆ, ಅವರ ಬೆನ್ನು ಸವರಿ ಅವರನ್ನು ಸಂತೈಸಿದರು ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ನ್ಯಾಯಾಧೀಶರು ಆಗಮಿಸಿ, ಎಲ್ಲರ ಹಾಜರಿ ಪಡೆದು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿದರು. ಮತ್ತೆ ಮುಂದಿನ ತಿಂಗಳು 25ರಂದು ಎಲ್ಲ ಆರೋಪಿಗಳು ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.
ಇದನ್ನೂ ಓದಿ:ನ್ಯಾಯಾಲಯಕ್ಕೆ ಹಾಜರಾದ ದರ್ಶನ್, ಪವಿತ್ರಾ ಗೌಡ, ವಿಚಾರಣೆ ಮುಂದೂಡಿಕೆ
ಈ ನಡುವೆ ಪವಿತ್ರಾ ಗೌಡ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ದೇವಾಲಯಕ್ಕೆ ಹೋಗಲು ಅನುಮತಿ ನೀಡುವಂತೆ ಕೋರಿದ್ದಾರೆ. ಪವಿತ್ರಾ ಗೌಡ ಹೊರ ರಾಜ್ಯದ ದೇವಾಲಯವೊಂದಕ್ಕೆ ತೆರಳಬೇಕಿದ್ದು, ಇದಕ್ಕಾಗಿ ನ್ಯಾಯಾಧೀಶರ ಬಳಿ ಅನುಮತಿ ಕೋರಿದ್ದಾರೆ. ಪವಿತ್ರಾ ಅವರಿಗೆ ಅನುಮತಿ ದೊರಕುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ