ನ್ಯಾಯಾಲಯಕ್ಕೆ ಹಾಜರಾದ ದರ್ಶನ್, ಪವಿತ್ರಾ ಗೌಡ, ವಿಚಾರಣೆ ಮುಂದೂಡಿಕೆ
Darshan Thoogudeepa: ರೇಣುಕಾ ಸ್ವಾಮಿ ಕೊಲೆ ಆರೋಪಿಗಳೆಲ್ಲ ಇಂದು (ಜನವರಿ 10) ಸಿಸಿಎಚ್ 57 ಕೋರ್ಟ್‌ಗೆ ಹಾಜರಾಗಿದ್ದರು. ಜಾಮೀನು ನೀಡುವ ಸಮಯದಲ್ಲಿ ಪ್ರತಿ ತಿಂಗಳೂ ಕೋರ್ಟ್‌ಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಇದೇ ಕಾರಣಕ್ಕೆ ಇಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲರೂ ಕೋರ್ಟ್‌ಗೆ ಹಾಜರಾಗಿದ್ದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳೆಲ್ಲರೂ ಇಂದು (ಜನವರಿ 10) ಬೆಂಗಳೂರಿನ ಸಿಸಿಎಚ್ 57ರ ಕೋರ್ಟ್‌ಗೆ ಹಾಜರಾಗಿದ್ದಾರೆ. ಪವಿತ್ರಾ ಗೌಡ, ಪ್ರದೋಶ್ ಸೇರಿದಂತೆ ಹಲವು ಆರೋಪಿಗಳು ನ್ಯಾಯಾಲಯಕ್ಕೆ ಮೊದಲೇ ಹಾಜರಾಗಿದ್ದರು. ನಟ ದರ್ಶನ್ ಮಾತ್ರ ತುಸು ತಡವಾಗಿ ನ್ಯಾಯಾಲಯದ ಬಳಿ ಬಂದರು. ಜಾಮೀನು ದೊರೆತ ಬಳಿಕ ಇದೇ ಮೊದಲ ಬಾರಿಗೆ ರೇಣುಕಾ ಸ್ವಾಮಿ ಕೊಲೆ ಆರೋಪಿಗಳೆಲ್ಲ ಒಟ್ಟಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಜಾಮೀನು ನೀಡುವ ಸಮಯದಲ್ಲಿ ಪ್ರತಿ ತಿಂಗಳು ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು. ಅದರಂತೆ ಶುಕ್ರವಾರ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು ಆಗಲು ದಿನಾಂಕ ನಿಗಧಿ ಮಾಡಲಾಗಿತ್ತು. ಹಾಗಾಗಿ ಇಂದು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಮೊದಲೇ ಬಂದಿದ್ದ ಪವಿತ್ರಾ ಗೌಡ, ತಮ್ಮ ವಕೀಲರೊಂದಿಗೆ ಕೋರ್ಟ್ ಆವರಣದಲ್ಲಿ ಚರ್ಚಿಸುತ್ತಾ ನಿಂತಿದ್ದರು. ಇತರೆ ಆರೋಪಿಗಳು ಸಹ ತಮ್ಮ ತಮ್ಮ ವಕೀಲರೊಡನೆ ಕೋರ್ಟ್‌ಗೆ ಹಾಜರಾಗಿದ್ದರು.
ದರ್ಶನ್, ನಟ ಧನ್ವೀರ್ ಜೊತೆ ಕಾರಿನಲ್ಲಿ ನ್ಯಾಯಾಲಯಕ್ಕೆ ಆಗಮಿಸಿದರು. ಅವರೊಟ್ಟಿಗೆ ವಕೀಲರು ಸಹ ಇದ್ದರು. ದರ್ಶನ್, ನ್ಯಾಯಾಲಯದ ಬಳಿ ಬಂದಾಗ ಜನ ಮತ್ತು ಮಾಧ್ಯಮಗಳು ಸುತ್ತುವರೆದರು. ದರ್ಶನ್ ಇಂದು ಕುಟುಂತ್ತ ನಡೆಯಲಿಲ್ಲ, ಬದಲಿಗೆ ಆರಾಮವಾಗಿಯೇ ನಡೆಯುತ್ತಾ ನ್ಯಾಯಾಲಯ ಸಂಕೀರ್ಣದ ಒಳಗೆ ಹೋದರು. ರೇಣುಕಾ ಸ್ವಾಮಿ ಪ್ರಕರಣದಲ್ಲಿ ಬಂಧನವಾದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾ-ಮುಖಿ ಆಗುತ್ತಿದ್ದಾರೆ. ಒಂದೇ ನ್ಯಾಯಾಲಯದ ಹಾಲ್ನಲ್ಲಿ ಎಲ್ಲ ಆರೋಪಿಗಳು ನ್ಯಾಯಾಧೀಶರ ಮುಂದೆ ನಿಂತು ಹಾಜರಿ ನೀಡಲಿದ್ದಾರೆ.
ಎಲ್ಲ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದ ಬಳಿಕ ಹಾಜರಿ ಪಡೆದುಕೊಂಡ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿ ಆದೇಶಿಸಿದರು. ಫೆಬ್ರವರಿ 25ಕ್ಕೆ ಮತ್ತೆ ಎಲ್ಲ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:12 am, Fri, 10 January 25