ನಟ ದರ್ಶನ್ ಅವರಿಗೆ ಜೈಲೂಟ ಸೇರುತ್ತಿಲ್ಲ. ಇದರಿಂದ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತಿದೆ ಎನ್ನಲಾಗಿದೆ. ದರ್ಶನ್ ಅವರು ಜೈಲೂಟದಿಂದ ಸಾಕಷ್ಟು ದೇಹದ ತೂಕ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಹೈಕೋರ್ಟ್ನಲ್ಲಿ ನಟ ದರ್ಶನ್ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಮನೆಯಿಂದ ಊಟ, ಹಾಸಿಗೆ, ಪುಸ್ತಕ ತರಲು ಅವಕಾಶ ನೀಡಿ ಜೈಲು ಅಧಿಕಾರಿಗಳಿಗೆ ನಿರ್ದೇಶನ ಮಾಡುವಂತೆ ಕೋರಲಾಗಿತ್ತು. ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಸಿದೆ. ‘ಈ ಪ್ರಕರಣವನ್ನು ಇತರ ಪ್ರಕರಣಗಳಂತೆ ಪರಿಗಣಿಸಲಾಗುವುದು’ ಎಂದು ಅವರು ಹೇಳಿದ್ದಾರೆ.
ದರ್ಶನ್ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಾಡಿದ್ದಾರೆ. ‘ಜೈಲು ನಿಯಮಾವಳಿಗಳಲ್ಲಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ದರ್ಶನ್ಗೆ ಮನೆ ಊಟದ ಅವಕಾಶ ನೀಡಿಲ್ಲ’ ಎಂದು ವಾದ ಮಾಡಿದ್ದಾರೆ. ಈ ವಾದದ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರು, ‘ಮನೆಯಿಂದ ಊಟ, ಹಾಸಿಗೆ, ಪುಸ್ತಕ ಪಡೆಯಲು ಕೋರಿದ್ದೀರಿ. ಈ ಬಗ್ಗೆ ಈ ಹಿಂದಿನ ಕೋರ್ಟ್ ತೀರ್ಪುಗಳಿವೆಯೇ? ಜೈಲು ಕೈಪಿಡಿಯಲ್ಲಿ ಮನೆ ಊಟದ ಬಗ್ಗೆ ನಿಯಮವಿದೆಯೇ? ಜೈಲು ಅಧಿಕಾರಿಗಳಿಗೆ ನೀವು ಮನವಿ ಮಾಡಿದ್ದೀರಿ. ವಿಚಾರಣಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸದೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬಹುದೇ? ಕೈದಿಗಳಿಗಿರುವ ಕಾನೂನು ಈ ಬಗ್ಗೆ ಏನು ಹೇಳುತ್ತದೆ’ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ‘ದರ್ಶನ್ ಬಿಡುಗಡೆಯಾಗುವವರೆಗೂ ಚಪ್ಪಲಿ ಧರಿಸುವುದಿಲ್ಲ’; ಅಭಿಮಾನಿ ಶಪಥ
‘ಇದನ್ನು ಬೇರೆ ಪ್ರಕರಣಗಳಂತೆ ಪರಿಗಣಿಸಲಾಗುವುದು. ಕಾನೂನಿನ ಅನುಸಾರವೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ನ್ಯಾಯಮೂರ್ತಿ ಕೃಷ್ಣಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ತನಿಖಾಧಿಕಾರಿಗಳು, ಜೈಲು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸದ್ಯ ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಲಾಗಿದೆ.
ಊಟ, ಹಾಸಿಗೆ, ಪುಸ್ತಕ, ಬಟ್ಟೆ, ಚಮಚವನ್ನು ಮನೆಯಿಂದ ನೀಡಬೇಕು ಎಂದು ದರ್ಶನ್ ಕೋರ್ಟ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇವುಗಳನ್ನೆಲ್ಲಾ ಮನೆಯಿಂದ ಪಡೆಯಲು ಜೈಲು ಅಧಿಕಾರಿಗಳು ಅನುಮತಿಸಿಲ್ಲ. ಈ ಕಾರಣದಿಂದಲೇ ದರ್ಶನ್ ಕೋರ್ಟ್ ಮೊರೆ ಹೋಗಿದ್ದಾರೆ. ಅವರಿಗೆ ದೇಹದ ತೂಕ ಕಡಿಮೆ ಆಗುತ್ತಿರೋ ಭಯ ಕಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.