ದರ್ಶನ್​ ಬೆನ್ನುನೋವಿಗೆ ಕಾರಣವೇನು? ಚಿಕಿತ್ಸೆ ಹೇಗಿರಲಿದೆ? ವಾಸಿಯಾಗಲು ಬೇಕಾಗುವ ಸಮಯವೆಷ್ಟು?

|

Updated on: Oct 31, 2024 | 11:42 AM

Darshan Health: ದರ್ಶನ್​ ಬೆನ್ನುಹುರಿಯ ಎಲ್​1ಎಲ್​5 ಭಾಗದಲ್ಲಿ ಸಮಸ್ಯೆ ಉಂಟಾಗಿದೆ. ಇದಕ್ಕೆ ಕಾರಣ ಏನು? ಚಿಕಿತ್ಸೆ ಹೇಗೆ? ಯಾವ ರೀತಿಯ ಚಿಕಿತ್ಸೆ ಲಭ್ಯವಿದೆ? ಗುಣಮುಖವಾಗಲು ಎಷ್ಟು ಸಮಯ ಬೇಕಾಗಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ.

ದರ್ಶನ್​ ಬೆನ್ನುನೋವಿಗೆ ಕಾರಣವೇನು? ಚಿಕಿತ್ಸೆ ಹೇಗಿರಲಿದೆ? ವಾಸಿಯಾಗಲು ಬೇಕಾಗುವ ಸಮಯವೆಷ್ಟು?
Follow us on

ಕೊಲೆ ಆರೋಪಿ ದರ್ಶನ್​ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಅದರ ಚಿಕಿತ್ಸೆಗೆಂದು ಈಗ ಆರು ವಾರಗಳ ಮಧ್ಯಂತರ ಜಾಮೀನು ನೀಡಲಾಗಿದೆ. ದರ್ಶನ್​ರ ಬೆನ್ನುಹುರಿಯ ಎಲ್​1 ಎಲ್​5 ಭಾಗದಲ್ಲಿ ಸಮಸ್ಯೆ ಇದೆ ಎಂದು ವೈದ್ಯರು ವರದಿ ನೀಡಿದ್ದಾರೆ. ದರ್ಶನ್ ಪರ ವಕೀಲ ನಾಗೇಶ್ ಅವರು ನ್ಯಾಯಾಲಯದಲ್ಲಿ ಹೇಳಿರುವಂತೆ, ದರ್ಶನ್​ಗೆ ಬೆನ್ನುನೋವಿನ ಸಮಸ್ಯೆಯಿಂದಾಗಿ ಈಗಾಗಲೇ ಕಾಲಿನಲ್ಲಿ ಸ್ಪರ್ಷಜ್ಞಾನ ಕಡಿಮೆ ಆಗಿದೆ. ಮುಂದಿನ ದಿನಗಳಲ್ಲಿ ಮೂತ್ರಪಿಂಡದ ಸಮಸ್ಯೆ ಸಹ ಕಾಣಿಸಿಕೊಳ್ಳಬಹುದು, ದೇಹದ ಕೆಳಭಾಗ ಪಾರ್ಶ್ವವಾಯುವಿಗೆ ತುತ್ತಾಗಬಹುದು ಎಂದಿದ್ದಾರೆ. ಹಾಗಿದ್ದರೆ ಈ ಎಲ್​1ಎಲ್​5 ಸಮಸ್ಯೆ ಏನು? ಇದು ಉಂಟಾಗಲು ಕಾರಣವೇನು? ಚಿಕಿತ್ಸೆ ಹೇಗೆ? ಗುಣಮುಖವಾಗಲು ಎಷ್ಟು ದಿನ ಹಿಡಿಯಲಿದೆ? ಇಲ್ಲಿದೆ ಮಾಹಿತಿ.

ಮಾನವ ದೇಹದ ಅತ್ಯಂತ ಉದ್ದನೆಯ ಮೂಳೆಯ ರಚನೆ ಎಂದರೆ ಅದು ಬೆನ್ನು ಹುರಿ. ಈ ಬೆನ್ನುಹುರಿಯನ್ನು ವೈದ್ಯಕೀಯ ಕಾರಣಗಳಿಗಾಗಿ ಅದರ ರಚನೆ ಮತ್ತು ಕಾರ್ಯದ ಆಧಾರದಲ್ಲಿ ಹಲವು ಭಾಗಗಳಾಗಿ ವಿಂಗಡಿಸಲಾಗಿದೆ. ಬೆನ್ನು ಹುರಿಯ ಕೆಳಹಂತದ ಭಾಗವನ್ನು ಲಂಬಾರ್ ಎಂದು ಕರೆಯಲಾಗಿದ್ದು, ಈ ಲಂಬಾರ್ ಭಾಗದಲ್ಲಿರುವ ಒಂದಕ್ಕೊಂದು ಲಂಭವಾಗಿ ಅಂಟಿಕೊಂಡಿರುವ ಮೂಳೆಗಳ ಐದು ತುಣುಕುಗಳನ್ನು ಎಲ್​ 1, ಎಲ್​2, ಎಲ್​3, ಎಲ್​4 ಮತ್ತು ಎಲ್​5 ಎಂದು ಕರೆಯಲಾಗಿದೆ. ಈಗ ದರ್ಶನ್​ಗೆ ಎಲ್​1 ಮತ್ತು ಎಲ್​5 ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.

ಪ್ರತಿ ಮೂಳೆಗಳ ತುಣುಕುಗಳ ನಡುವೆ ತೆಳ್ಳನೆಯ ಮಾಂಸದ ಪದರ ಮತ್ತು ನರಗಳು ಹಾದು ಹೋಗಿರುತ್ತವೆ. ಇವು ಮೂಳೆಗಳ ಘರ್ಷಣೆಯನ್ನು ಕಡಿಮೆ ಮಾಡುವ ಜೊತೆಗೆ ಕಾಲುಗಳಿಗೆ ರಕ್ತಪರಿಚಲನೆ, ಶಕ್ತಿ ಮತ್ತು ಚಲನೆಯನ್ನು ನೀಡುತ್ತವೆ. ಆದರೆ ಈ ಮೂಳೆಗಳ ನಡುವಿನ ಮಾಂಸದ ಪದರ ಸವೆದಾಗ ಅಥವಾ ಎರಡು ಮೂಳೆಗಳ ತುಣುಕಗಳ ನಡುವೆ ಒತ್ತಡ ಹೆಚ್ಚಾದಾಗ ನರಗಳ ಮೇಲೆ ಭಾರವಾಗಿ ರಕ್ತಪರಿಚಲನೆ ಕಡಿಮೆ ಆಗುತ್ತದೆ ಅವುಗಳ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಆಗ ಕಾಲಿನಲ್ಲಿ ತೀವ್ರ ನೋವು, ಸ್ಪರ್ಷ ಹೀನತೆ, ಅನಿಯಮಿತ ಮೂತ್ರವಿಸರ್ಜನೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈಗ ದರ್ಶನ್​ಗೆ ಆಗಿರುವ ಸಮಸ್ಯೆ ಇದೆ.

ಇದನ್ನೂ ಓದಿ:‘ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ’; ದರ್ಶನ್ ಕ್ಷಮೆ ಕೇಳಿದ್ದು ಯಾರ ಬಳಿ?

ಟಿವಿ9 ಜೊತೆ ಮಾತನಾಡಿರುವ ನುರಿತ ವೈದ್ಯ ರಾಕೇಶ್, ‘ದರ್ಶನ್​ ಅವರು ಎಡಗಾಲು ಕುಂಟುತ್ತಿದ್ದಾರೆ. ಅದನ್ನು ನೋಡಿದರೆ ಅವರ ಬೆನ್ನುಹುರಿಯಲ್ಲಿ ಸಮಸ್ಯೆ ಹೆಚ್ಚಾಗಿದೆ ಎಂದು ಊಹಿಸಬಹುದಾಗಿದೆ. ಅವರಿಗೆ ಚಿಕಿತ್ಸೆಯ ಅವಶ್ಯಕತೆ ಖಂಡಿತ ಇದೆ. ಈ ರೀತಿಯ ಸಮಸ್ಯೆಗಳು ಜೀವನ ಶೈಲಿ, ಹಳೆಯ ಪೆಟ್ಟು ಇನ್ನಿತರೆ ಕಾರಣಗಳಿಂದ ಬರುತ್ತದೆ. ನಾವು ಕೂರುವ ಭಂಗಿ, ಅತಿಯಾದ ವಾಹನ ಚಾಲನೆ, ಯಾವಾಗಲಾದರು ಪೆಟ್ಟಾಗಿರುವುದು, ಅತಿಯಾದ ಭಾರ ಎತ್ತುವಿಕೆ ಇಂಥಹುವೇ ಕೆಲವು ಕಾರಣಗಳಿಗೆ ಈ ರೀತಿಯ ಸಮಸ್ಯೆ ಬರಬಹುದು’ ಎನ್ನುತ್ತಾರೆ ಅವರು.

ಈ ರೀತಿಯ ಸಮಸ್ಯೆಗಳಿಗೆ ಡೈಸ್ಕೆಕ್ಟಮಿ ಹೆಸರಿನ ಶಸ್ತ್ರಚಿಕಿತ್ಸೆ ಮಾಡುವ ಆಯ್ಕೆ ಇದೆ. ಅದನ್ನು ಹೊರತುಪಡಿಸಿದರೆ ಫಿಸಿಯೋಥೆರಪಿ ಮೂಲಕ ಸಮಸ್ಯೆ ಸರಿಪಡಿಸಲಾಗುತ್ತದೆ. ಅಥವಾ ಎಪಿಡುರಲ್ ಇಂಜೆಕ್ಷನ್ ಅನ್ನು ಕೊಟ್ಟು ನೋವು ನಿವಾರಿಸಲಾಗುತ್ತದೆ. ಸಾಮಾನ್ಯವಾಗಿ ಇಂಥಹಾ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಕೊನೆಯ ಆಯ್ಕೆ ಆಗಿರುತ್ತದೆ. ಬೆನ್ನುಹುರಿಯ ಶಸ್ತ್ರಚಿಕಿತ್ಸೆ ಅತ್ಯಂತ ಕ್ಲಿಷ್ಟಕರವಾದ ಪ್ರಕ್ರಿಯೆಯಾಗಿದ್ದು ಫಿಸಿಯೋಥೆರಪಿ ಹಾಗೂ ಜೀವನ ಶೈಲಿಯ ಬದಲಾವಣೆಯಿಂದ ಈ ಸಮಸ್ಯೆಯಿಂದ ಶಾಶ್ವತ ಅಲ್ಲದಿದ್ದರೂ ಪರಿಣಾಮಾತ್ಮಕ ಫಲಿತಾಂಶ ಪಡೆಯಬಹುದಾಗಿದೆ ಎನ್ನುತ್ತಾರೆ ವೈದ್ಯರು.

ಈ ರೀತಿಯ ಸಮಸ್ಯೆಗಳಲ್ಲಿ ಗುಣಮುಖವಾಗಲು ಇಂಥಿಷ್ಟೆ ಸಮಯ ಸಾಕಾಗುತ್ತದೆ ಎಂದು ಹೇಳಲು ಬಾರದು. ಫಿಸಿಯೋಥೆರಪಿ ಚಿಕಿತ್ಸೆಗೆ ಸತತ ಎರಡು ತಿಂಗಳು ಚಿಕಿತ್ಸೆ, ವ್ಯಾಯಾಮ ಮತ್ತು ವಿಶ್ರಾಂತಿಗೆ ಸೂಚಿಸಲಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿಯೂ ಸಹ ಗುಣಮುಖವಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದಿದ್ದಾರೆ. ದರ್ಶನ್​ಗೆ ಆರು ವಾರಗಳ ಕಾಲ ಸಯ ನೀಡಲಾಗಿದೆ. ಆದರೆ ಅಷ್ಟರಲ್ಲಿ ದರ್ಶನ್​ ಗುಣಮುಖವಾಗುವುದು ಸುಲಭ ಸಾಧ್ಯವಲ್ಲ ಎಂಬ ಅಭಿಪ್ರಾಯವನ್ನೂ ಸಹ ಅವರು ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ