ದರ್ಶನ್​ಗೆ ರಾಜಾತಿಥ್ಯ ಪ್ರಕರಣ: ಕಾರಾಗೃಹ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿಗೆ ನೋಟಿಸ್

| Updated By: ಮದನ್​ ಕುಮಾರ್​

Updated on: Aug 30, 2024 | 9:40 PM

ಪರಪ್ಪನ ಅಗ್ರಹಾರದಲ್ಲಿ ವಿಐಪಿ ಟ್ರೀಟ್​ಮೆಂಟ್​ ಪಡೆದ ಬಳಿಕ ದರ್ಶನ್​ ಹಾಗೂ ಇನ್ನುಳಿದ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್​ ಮಾಡಲಾಯಿತು. ಈಗ ಜೈಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈ ಕೇಸ್​ಗೆ ಸಂಬಂಧಿಸಿದಂತೆ ಕಾರಾಗೃಹ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ನೋಟಿಸ್​ ನೀಡಲಾಗಿದ್ದು, ಅಕ್ರಮಗಳ ಬಗ್ಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.

ದರ್ಶನ್​ಗೆ ರಾಜಾತಿಥ್ಯ ಪ್ರಕರಣ: ಕಾರಾಗೃಹ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿಗೆ ನೋಟಿಸ್
ದರ್ಶನ್​
Follow us on

ನಟ ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್​ ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ದರ್ಶನ್​ ಅವರು ತಮ್ಮ ಪ್ರಭಾವ ಬಳಸಿ ವಿಐಪಿ ಟ್ರೀಟ್​ಮೆಂಟ್​ ಪಡೆದುಕೊಂಡಿದ್ದರು. ಅವರ ವಿಡಿಯೋ ಮತ್ತು ಫೋಟೋ ಲೀಕ್​ ಆಯಿತು. ಆ ಬಳಿಕ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಆರಂಭಿಸಲಾಯಿತು. ಇದರ ಬೆನ್ನಲ್ಲೇ ಕಾರಾಗೃಹ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ನೋಟಿಸ್ ನೀಡಲಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಈ ನೋಟಿಸ್ ನೀಡಲಾಗಿದೆ. ಜೈಲಿನಲ್ಲಿ ನಡೆದ ಅಕ್ರಮದ ಬಗ್ಗೆ ವಿವರಣೆ ನೀಡುವಂತೆ ಕಾರಾಗೃಹ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿಗೆ ನೋಟಿಸ್ ನೀಡಿರುವುದು ತಿಳಿದುಬಂದಿದೆ. ಕೃಷ್ಣಮೂರ್ತಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ನೋಟಿಸ್​ನಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವಂತೆ ತಿಳಿಸಲಾಗಿದೆ.

ಜೈಲಿನ ಅಕ್ರಮ ತಡೆಗಟ್ಟುವ ವಿಚಾರದಲ್ಲಿ ನೀವು ಕೈಗೊಂಡ ಕ್ರಮಗಳೇನು? ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳು ನಿಮ್ಮ ಗಮನಕ್ಕೆ ಬಂದಿರಲಿಲ್ವಾ? ನೀವು ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದೀರಿ ಎಂದು ಏಕೆ ಭಾವಿಸಬಾರದು? ಮುಂತಾದ ಪ್ರಶ್ನೆಗಳಿಗೆ ವಿವರವಾದ ಉತ್ತರ ನೀಡುವಂತೆ ಮಾಲಿನಿ ಕೃಷ್ಣಮೂರ್ತಿಗೆ ತಾಕೀತು ಮಾಡಲಾಗಿದೆ. ಮಾಲಿನಿ ಕೃಷ್ಣಮೂರ್ತಿ ನೀಡುವ ಉತ್ತರವನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಜೈಲಲ್ಲಿ ದರ್ಶನ್​ಗೆ ರಾಜಾತಿಥ್ಯ; ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು?

ಜೈಲಿನ ನಿಯಮಗಳನ್ನು ಉಲ್ಲಂಘನೆ ಮಾಡಿ ದರ್ಶನ್​ ಅವರು ಹಲವು ಸೌಲಭ್ಯಗಳನ್ನು ಪಡೆದುಕೊಂಡಿದ್ದರು. ಜೈಲಿನಿಂದಲೇ ವಿಡಿಯೋ ಕಾಲ್​ ಮೂಲಕ ಹೊರಗಿನ ರೌಡಿಶೀಟರ್​ಗಳ ಜೊತೆ ಅವರು ಮಾತನಾಡಿದ್ದರು. ಅಲ್ಲದೇ, ಜೈಲಿನ ಒಳಗೆ ಇರುವ ರೌಡಿ ವಿಲ್ಸನ್​ ಗಾರ್ಡನ್​ ನಾಗ, ಕುಳ್ಳ ಸೀನಾ ಮುಂತಾದವರ ಜೊತೆ ಅವರು ಸಿಗರೇಟ್​ ಸೇದುತ್ತಾ, ಹರಟೆ ಹೊಡೆಯುತ್ತ ಕುಳಿತ ಫೋಟೋ ವೈರಲ್​ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.