ಇಂದು ನ್ಯಾಯಾಲಯಕ್ಕೆ ಹಾಜರಾಗಲ್ಲ ದರ್ಶನ್ ಆ್ಯಂಡ್ ಗ್ಯಾಂಗ್​; ಕಾರಣವೇನು?

|

Updated on: Jul 04, 2024 | 6:55 AM

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಎ2 ಆಗಿರುವ ದರ್ಶನ್​ ​ಅವರ ಜೈಲು ವಾಸ ಜೂನ್​ 22ರಿಂದ ಆರಂಭ ಆಗಿತ್ತು. ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇಂದು ನ್ಯಾಯಾಂಗ ಬಂಧನ ಅಂತ್ಯವಾಗಲಿದೆ. ಆದಾಗ್ಯೂ ಅವರನ್ನು ಕೋರ್ಟ್​ಗೆ ಹಾಜರುಪಡಿಸುತ್ತಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಇಂದು ನ್ಯಾಯಾಲಯಕ್ಕೆ ಹಾಜರಾಗಲ್ಲ ದರ್ಶನ್ ಆ್ಯಂಡ್ ಗ್ಯಾಂಗ್​; ಕಾರಣವೇನು?
ದರ್ಶನ್-ಪವಿತ್ರಾ
Follow us on

ರೇಣುಕಾ ಸ್ವಾಮಿ ಅವರನ್ನು ಹೀನಾಯವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿ ದರ್ಶನ್ ಅವರು ರೇಣುಕಾ ಸ್ವಾಮಿಯನ್ನು ಕೊಂದರು ಎನ್ನುವ ಆರೋಪ ಇದೆ. ಸದ್ಯ ಈ ಪ್ರಕರಣದಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿದೆ. ವಿಚಾರಣಾಧೀನ ಕೈದಿಗಳಾಗಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಇಂದು (ಜುಲೈ 4) ಎಲ್ಲರ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ, ದರ್ಶನ್ ಹಾಗೂ ಅವರ ಟೀಂ ಕೋರ್ಟ್​ಗೆ ಹಾಜರಾಗಬೇಕಿತ್ತು. ಆದರೆ, ಇಂದು ದರ್ಶನ್ ಅವರು ನೇರವಾಗಿ ಕೋರ್ಟ್​ಗೆ ಬರುತ್ತಿಲ್ಲ, ಬದಲಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸಲಿದ್ದಾರೆ.

ದರ್ಶನ್ ಅವರನ್ನು ಬಂಧಿಸಿ ತಿಂಗಳಾಗುತ್ತಾ ಬಂದಿದೆ. ಮೊದಲು ಕೆಲವು ದಿನ ದರ್ಶನ್ ಅವರನ್ನು ತೀವ್ರವಾಗಿ ವಿಚಾರಣೆ ಮಾಡಲಾಯಿತು. ಆ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈಗ ದರ್ಶನ್ ಅವರು ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇಂದು ಅವರ ಪಾಲಿಗೆ ಮಹತ್ವದ ದಿನ ಆಗಿದೆ. ಅವರು ಜೈಲಿನಿಂದ ಹೊರ ಬರುತ್ತಾರೋ ಅಥವಾ ಜೈಲಿನಲ್ಲಿ ಉಳಿಯುತ್ತಾರೋ ಎಂಬುದು ತಿಳಿಯಲಿದೆ.

ದರ್ಶನ್ ಸ್ಟಾರ್ ಹೀರೋ. ಹೀಗಾಗಿಯೇ ಈ ಕೊಲೆ ಪ್ರಕರಣ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದೆ. ಈ ಕಾರಣದಿಂದಲೇ ದರ್ಶನ್ ಅವರನ್ನು ಕೋರ್ಟ್ ಎದುರು ಹಾಜರುಪಡಿಸುವಾಗ ಫ್ಯಾನ್ಸ್ ನೆರೆಯುತ್ತಿದ್ದಾರೆ. ಮಾಧ್ಯಮದವರು ಮುತ್ತಿಕೊಳ್ಳುತ್ತಿದ್ದಾರೆ. ಈ ತೊಂದರೆಯೇ ಬೇಡ ಎಂಬ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಅವರ ವಿಚಾರಣೆ ಮಾಡಲು ನಿರ್ಧರಿಸಲಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಪವಿತ್ರಾ ಗೌಡ ದರ್ಶನ್​ ಪತ್ನಿ ಅಲ್ಲ’: ಪೊಲೀಸ್​ ಆಯುಕ್ತರಿಗೆ ಪತ್ರ ಬರೆದ ವಿಜಯಲಕ್ಷ್ಮಿ

ಈ ಬಗ್ಗೆ ಪವಿತ್ರಾ ಗೌಡ ಪರ ವಕೀಲರು ಮಾಹಿತಿ ನೀಡಿದ್ದಾರೆ. ‘ಇಂದು ವಿಚಾರಣೆಗೆ ನ್ಯಾಯಾಲಯಕ್ಕೆ ಆರೋಪಿಗಳು ಹಾಜರಾಗುವುದಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ’ ಎಂದಿದ್ದಾರೆ. ಈ ಪ್ರಕರಣದಲ್ಲಿ ಸದ್ಯ ತನಿಖೆ ನಡೆಯುತ್ತಿದೆ. ದರ್ಶನ್ ಅವರು ಪ್ರಭಾವಿ ವ್ಯಕ್ತಿ. ಅವರು ಹೊರ ಬಂದರೆ ಸಾಕ್ಷಿ ನಾಶ ಆಗಬಹುದು. ಹೀಗಾಗಿ, ಅವರಿಗೆ ಜಾಮೀನು ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.