ಪತ್ನಿ ಜೊತೆ ಮೈಸೂರಿನಲ್ಲಿ ಸಂಕ್ರಾಂತಿ ಆಚರಿಸಿದ ದರ್ಶನ್
Darshan: ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಪ್ರಕರಣದಲ್ಲಿ ಜಾಮೀನು ದೊರೆತ ಮೇಲೆ ತುಸು ನಿರಾಳರಾಗಿದ್ದಾರೆ. ಮೈಸೂರಿಗೆ ತೆರಳಲು ನ್ಯಾಯಾಲಯದ ಅನುಮತಿ ಪಡೆದಿದ್ದ ನಟ ದರ್ಶನ್, ಇದೀಗ ಮೈಸೂರಿನ ಫಾರಂಹೌಸ್ನಲ್ಲಿ ಪತ್ನಿ ವಿಜಯಲಕ್ಷ್ಮಿ ಜೊತೆ ಸಂಕ್ರಾಂತಿ ಆಚರಣೆ ಮಾಡುತ್ತಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಫಾರಂ ಹೌಸ್ನಲ್ಲಿ ಒಟ್ಟಿಗೆ ಪ್ರಾಣಿಗಳ ಆರೈಕೆ ಮಾಡುತ್ತಿರುವ ಚಿತ್ರ ಇದೀಗ ವೈರಲ್ ಆಗಿದೆ.
ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್, ಪ್ರಕರಣದಲ್ಲಿ ನಿಯಮತಿ ಜಾಮೀನು ದೊರೆತ ಮೇಲೆ ತುಸು ನಿರಾಳವಾದಂತಿದೆ. ಕಳೆದ ವಾರ ಜಾಮೀನಿನ ಷರತ್ತಿನಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದ ದರ್ಶನ್, ಮೈಸೂರಿಗೆ ತೆರಳಲು ನ್ಯಾಯಾಲಯದ ಅನುಮತಿ ಕೋರಿದ್ದರು. ಅಂತೆಯೇ ನ್ಯಾಯಾಲಯ ಅವರಿಗೆ ಅನುಮತಿ ನೀಡಿತ್ತು. ಇದೀಗ ಮೈಸೂರಿನ ಫಾರಂ ಹೌಸ್ಗೆ ತೆರಳಿರುವ ನಟ ದರ್ಶನ್, ಅಲ್ಲಿ ಪತ್ನಿಯೊಂದಿಗೆ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ.
ನಟ ದರ್ಶನ್ ಪ್ರತಿವರ್ಷವೂ ಸಂಕ್ರಾಂತಿ ಹಬ್ಬವನ್ನು ತಮ್ಮ ಫಾರಂ ಹೌಸ್ನಲ್ಲಿ ಆಚರಣೆ ಮಾಡುತ್ತಾರೆ. ಫಾರಂ ಹೌಸ್ನಲ್ಲಿರುವ ಎತ್ತುಗಳು, ಹಸು, ಕುದುರೆ ಇನ್ನಿತರೆ ಪ್ರಾಣಿಗಳಿಗೆ ಸ್ನಾನ ಮಾಡಿಸಿ, ಅಲಂಕಾರ ಮಾಡಿಸಿ ಅವುಗಳನ್ನು ಬೆಂಕಿ ಹಾಯಿಸುತ್ತಾರೆ. ಈ ಸಂಪ್ರದಾಯವನ್ನು ಹಲವು ವರ್ಷಗಳಿಂದಲೂ ಅವರು ಪಾಲಿಸಿಕೊಂಡು ಬಂದಿದ್ದಾರೆ. ಈ ವರ್ಷವೂ ಆ ಸಂಪ್ರದಾಯವನ್ನು ಮುಂದುವರೆಸುತ್ತಿದ್ದಾರೆ ನಟ ದರ್ಶನ್.
ಈ ಬಾರಿ ದರ್ಶನ್ಗೆ ಆರೋಗ್ಯ ಸರಿಯಿಲ್ಲವಾದ ಕಾರಣ ಪ್ರಾಣಿಗಳ ಶುಚಿ ಕಾರ್ಯದಲ್ಲಿ ದರ್ಶನ್ ತೊಡಗಿಕೊಂಡಂತಿಲ್ಲ. ಆದರೆ ಹಬ್ಬ ಆಚರಣೆ ಮಾಡಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರುಗಳು ಫಾರಂ ಹೌಸ್ನಲ್ಲಿ ಪ್ರಾಣಿಗಳನ್ನು ಆರೈಕೆ ಮಾಡುತ್ತಿರುವ ಚಿತ್ರ ಇದೀಗ ವೈರಲ್ ಆಗಿದೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಇಬ್ಬರೂ ಸಹ ಚಿತ್ರದಲ್ಲಿ ಮುಖ ತೋರಿಸಿಲ್ಲ. ವಿಜಯಲಕ್ಷ್ಮಿ ತಮ್ಮ ಮುದ್ದಿನ ನಾಯಿಯನ್ನು ಫಾರಂ ಹೌಸ್ಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಯೇ ಪತಿಯೊಂದಿಗೆ ಹಬ್ಬ ಆಚರಿಸುತ್ತಿದ್ದಾರೆ. ಪುತ್ರ ಸಹ ಫಾರಂ ಹೌಸ್ನಲ್ಲಿಯೇ ಇದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಹ್ಯಾಪಿ ಮೂಡ್ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ; ಎಲ್ಲವೂ ಮೊದಲಿನಂತಾದ ಖುಷಿ
ರೇಣುಕಾ ಸ್ವಾಮಿ ಕೊಲೆ ಆರೋಪಿಯಾಗಿರುವ ದರ್ಶನ್, ಬೆನ್ನು ನೋವಿನ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಬಳಿಕ ಅವರಿಗೆ ಹೈಕೋರ್ಟ್ನಲ್ಲಿ ನಿಯಮಿತ ಜಾಮೀನು ಸಹ ಲಭ್ಯವಾಯ್ತು. ಇದೇ ಪ್ರಕರಣದ ಆರೋಪಿ, ದರ್ಶನ್ ಆಪ್ತೆ ಪವಿತ್ರಾ ಗೌಡಗೂ ಸಹ ಜಾಮೀನು ದೊರೆತಿದ್ದು, ಪವಿತ್ರಾ ದೇವಾಲಯಗಳಿಗೆ ತೆರಳಲು ಹಾಗೂ ಉದ್ಯಮದ ನಿಮಿತ್ತ ಹೊರರಾಜ್ಯಗಳಿಗೆ ಹೋಗಲು ಅನುಮತಿ ಕೋರಿದ್ದರು. ಅವರಿಗೆ ಅನುಮತಿ ನೀಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 25ಕ್ಕೆ ನಿಗದಿ ಪಡಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ