ದರ್ಶನ್ ಅಭಿಮಾನಿಯೆಂದು ಹೇಳಿಕೊಂಡವನಿಂದ ಯುವಕನ ಮೇಲೆ ದೌರ್ಜನ್ಯ

|

Updated on: Jan 14, 2024 | 3:46 PM

Darshan Fan: ತನ್ನನ್ನು ತಾನು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ ಮೆರೆದಿದ್ದಾನೆ. ಬರಿಗೈ ಮೇಲೆ ಕರ್ಪೂರ ಹಚ್ಚಿ ದರ್ಶನ್ ಚಿತ್ರಕ್ಕೆ ಬೆಳಗುವಂತೆ ಹೇಳಿದ್ದು ವಿಡಿಯೋ ವೈರಲ್ ಆಗಿದೆ.

ದರ್ಶನ್ ಅಭಿಮಾನಿಯೆಂದು ಹೇಳಿಕೊಂಡವನಿಂದ ಯುವಕನ ಮೇಲೆ ದೌರ್ಜನ್ಯ
ದರ್ಶನ್
Follow us on

ದರ್ಶನ್ (Darshan) ಅಭಿಮಾನಿ ಎಂದು ಹೇಳಿಕೊಂಡಿರುವ ದೊಡ್ಡೇಶ್ ಎಂಬಾತ ನೈತಿಕ ಪೊಲೀಸ್ ಗಿರಿ ಮೆರೆದಿದ್ದು, ದರ್ಶನ್ ಬಗ್ಗೆ ಕೆಟ್ಟದಾಗಿ ಪೋಸ್ಟ್ ಹಾಕಿದ್ದ ಎಂದು ಆರೋಪಿಸಿ ಯುವಕನೊಬ್ಬನಿಗೆ ಶಿಕ್ಷೆ(!?) ನೀಡಿದ್ದಾನೆ. ದಾವಣಗೆರೆಯಲ್ಲಿ ಈ ಘಟನೆ ನಡೆದಿದ್ದು, ತಾನು, ಯುವಕನೊಬ್ಬನಿಗೆ ಶಿಕ್ಷೆ ನೀಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ದೊಡ್ಡೇಶ್ ಹಂಚಿಕೊಂಡಿದ್ದಾನೆ. ವಿಡಿಯೋನಲ್ಲಿ ಯುವಕನೊಬ್ಬನನ್ನು ಬಲವಂತದಿಂದ ಬಸ್ಕಿ ಹೊಡೆಯುವಂತೆ ಮಾಡಿದ್ದು, ಬರಿಗೈನಲ್ಲಿ ಕರ್ಪೂರ ಹಚ್ಚಿ, ದರ್ಶನ್​ರ ಕಟೌಟ್​ಗೆ ಬೆಳಗುವಂತೆ ದರ್ಪದಿಂದ ಆದೇಶಿಸಿದ್ದಾನೆ. ಭಯಗೊಂಡ ಯುವಕ ದೊಡ್ಡೇಶ್ ಹೇಳಿದಂತೆ ಬರಿಗೈಯಲ್ಲಿ ಕರ್ಪೂರ ಹಚ್ಚಿಕೊಂಡು ಆರತಿ ಮಾಡಿದ್ದಾನೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ವಡ್ನಳ್ಳಿ ಗ್ರಾಮದ ಯುವಕ ಲಿಂಗರಾಜು ಹೆಸರಿನ ಯುವಕ ಕೆಲವು ದಿನಗಳ ಹಿಂದೆ ದರ್ಶನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ಯುವಕ ಪುನೀತ್ ರಾಜ್​ಕುಮಾರ್ ಅಭಿಮಾನಿ ಎಂದು ಸಹ ಹೇಳಲಾಗುತ್ತಿದೆ. ಈ ಯುವಕನ್ನು ಹಿಡಿದು ತಂದು ‘ಕಾಟೇರ’ ಸಿನಿಮಾ ಪ್ರದರ್ಶನವಾಗುತ್ತಿರುವ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದ ಮುಂದೆ ನಿಲ್ಲಿಸಿ ಆತನಿಗೆ ಶಿಕ್ಷೆ ನೀಡಿದ್ದಾನೆ ದೊಡ್ಡೆಶ್. ಇದೀಗ ಹರಿದಾಡುತ್ತಿರುವ ವಿಡಿಯೋನಲ್ಲಿ ‘ಡಿ ಬಾಸ್ ಎಂದು ಹೇಳುತ್ತಾ ಕಿವಿ ಹಿಡಿದುಕೊಂಡು ಬಸ್ಕಿ’ ಹೊಡಿ ಎಂದು ಯುವಕನಿಗೆ ದೊಡ್ಡೇಶ್ ಆದೇಶಿಸಿದ್ದಾನೆ. ಯುವಕ ಹಾಗೆಯೇ ಮಾಡಿದ್ದಾನೆ. ಮತ್ತೊಂದು ವಿಡಿಯೋನಲ್ಲಿ ಯುವಕ ಬರಿಗೈಗೆ ಕರ್ಪೂರ ಕೊಟ್ಟು, ಆ ಕರ್ಪೂರಕ್ಕೆ ಬೆಂಕಿ ಹೊತ್ತಿಸಿ ಬೆಳಗುವಂತೆ ಬೆದರಿಸಿದ್ದಾನೆ.

ಇದನ್ನೂ ಓದಿ:ನಿಮಗೆ ತಾಕತ್ತಿದ್ದರೆ, ಧೈರ್ಯ ಇದ್ದರೆ: ಪೊಲೀಸರಿಗೆ ಸವಾಲೆಸೆದ ದರ್ಶನ್ ಪರ ವಕೀಲ

ಯುವಕನ ಮೇಲೆ ನೈತಿಕ ಪೊಲೀಸ್​ಗಿರಿ ನಡೆಸಿರುವ ದೊಡ್ಡೇಶ್​ ಈ ಹಿಂದೆ ದುನಿಯಾ ವಿಜಯ್ ಅಭಿಮಾನಿ ಸಂಘದಲ್ಲಿದ್ದ ಎನ್ನಲಾಗುತ್ತಿದೆ. ಇದೀಗ ತಾನು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ಈಗ ಈ ಕೃತ್ಯ ಎಸಗಿದ್ದಾನೆ. ದೊಡ್ಡೇಶ್​ ಮೇಲೆ ಈ ಹಿಂದೆಯೂ ನೈತಿಕ ಪೊಲೀಸ್​ಗಿರಿ ಎಸಗಿದ ಆರೋಪವಿದೆ. ಚಿತ್ರಮಂದಿರವೊಂದರಲ್ಲಿ ಒಮ್ಮೆ ಯುವಕ ಹಾಗೂ ಯುವತಿಯ ಮೇಲೆ ಹಲ್ಲೆ ಎಸಗಿದ್ದನಂತೆ ದೊಡ್ಡೇಶ್.

ಕನ್ನಡದ ಸ್ಟಾರ್ ನಟರ ಅಭಿಮಾನಿಗಳು ಹೀಗೆ ನೈತಿಕ ಪೊಲೀಸ್​ಗಿರಿ ಎಸಗುವ ಪ್ರಕರಣ ಆಗಾಗ್ಗೆ ದಾಖಲಾಗುತ್ತಲೇ ಇರುತ್ತವೆ. ತಮ್ಮ ಮೆಚ್ಚಿನ ನಟನ ನಡೆ, ನಟನೆ ವಿರೋಧಿಸಿ ಪೋಸ್ಟ್ ಹಾಕುವವರು, ನಿಂದಿಸಿ ಪೋಸ್ಟ್ ಹಾಕುವವರನ್ನು ಹಿಡಿದು ‘ಬೆದರಿಕೆ ಮಾದರಿ ಬುದ್ಧಿಹೇಳುವ’, ಒಮ್ಮೊಮ್ಮೆ ಥಳಿಸುವ ಘಟನೆಗಳು ನಡೆಯುತ್ತಲೇ ಬಂದಿವೆ. ದರ್ಶನ್ ಅಭಿಮಾನಿಗಳು ಒಮ್ಮೆ ನಟ, ಸಂಸದ ಜಗ್ಗೇಶ್​ಗೂ ಮುತ್ತಿಗೆ ಹಾಕಿದ್ದರು, ಕೆಲವರು ಜಗ್ಗೇಶ್​ರನ್ನು ಏಕವಚನದಲ್ಲಿ ಬೈದಿದ್ದರು ಸಹ. ಸುದೀಪ್ ಅಭಿಮಾನಿಗಳು ಸಹ ಸುದೀಪ್​ರನ್ನು ಟೀಕಿಸುತ್ತಿದ್ದ ಅಹೋರಾತ್ರ ಮೇಲೆ ದಾಳಿ ನಡೆಸಿ ನಿಂದಿಸಿದ್ದರು. ಅಪ್ಪು ಅಭಮಾನಿಗಳು ಸಹ ಹೀಗೆ ಮಾಡಿದ ಉದಾಹರಣೆಯಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:45 pm, Sun, 14 January 24