ನಿಮಗೆ ತಾಕತ್ತಿದ್ದರೆ, ಧೈರ್ಯ ಇದ್ದರೆ…: ಪೊಲೀಸರಿಗೆ ಸವಾಲೆಸೆದ ದರ್ಶನ್ ಪರ ವಕೀಲ
Darshan Lawyer: ತಡರಾತ್ರಿ ಪಾರ್ಟಿ ಮಾಡಿದ್ದ ಪ್ರಕರಣದಲ್ಲಿ ದರ್ಶನ್ ಇಂದು ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ದರ್ಶನ್ ಪರ ವಕೀಲ, ಪೊಲೀಸರ ವಿರುದ್ಧ ಕೆಂಡಾಮಂಡಲವಾಗಿದ್ದು, ಪೊಲೀಸರಿಗೆ ಸವಾಲು ಹಾಕಿದ್ದಾರೆ.
‘ಕಾಟೇರ’ (Kaatera) ಸಿನಿಮಾದ ಸಕ್ಸಸ್ ಮೀಟ್ ಬಳಿಕ ಬೆಂಗಳೂರಿನ ಜೆಟ್ ಲ್ಯಾಗ್ ಪಬ್ನಲ್ಲಿ ದರ್ಶನ್ ಹಾಗೂ ಇತರೆ ಕೆಲವು ಸೆಲೆಬ್ರಿಟಿಗಳು ತಡರಾತ್ರಿ ವರೆಗೆ ಪಾರ್ಟಿ ಮಾಡಿದ್ದಾರೆಂದು ಆರೋಪಿಸಿ ಪೊಲೀಸರು ದರ್ಶನ್ ಸೇರಿದಂತೆ ಡಾಲಿ ಧನಂಜಯ್, ಚಿಕ್ಕಣ್ಣ, ನೀನಾಸಂ ಸತೀಶ್, ಡಾಲಿ ಧನಂಜಯ್ ಇನ್ನೂ ಕೆಲವರಿಗೆ ನೊಟೀಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅಂತೆಯೇ ಇಂದು (ಶುಕ್ರವಾರ) ದರ್ಶನ್ ಹಾಗೂ ನೊಟೀಸ್ ಪಡೆದಿದ್ದ ಇತರರು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಹೇಳಿಕೆ ದಾಖಲಿಸಿದ್ದಾರೆ.
ಹೇಳಿಕೆ ದಾಖಲಿಸಿ ಹೊರಬಂದ ಬಳಿಕ ನಟ ದರ್ಶನ್, ಪ್ರಕರಣದ ಬಗ್ಗೆ ಏನೂ ಮಾತನಾಡದೆ ತೆರಳಿದ್ದಾರೆ. ಆದರೆ ದರ್ಶನ್ ಪರ ವಕೀಲರು, ಮಾಧ್ಯಮಗಳ ಬಳಿ ಮಾತನಾಡಿ, ದರ್ಶನ್ ಹಾಗೂ ಇತರರಿಗೆ ನೊಟೀಸ್ ನೀಡಿದ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಾತ್ರವಲ್ಲದೆ, ಪೊಲೀಸರು ಕೆಲವರ ಕೈಗೊಂಬೆಯಾಗಿದ್ದಾರೆಂದು ಆರೋಪಿಸಿದ್ದಾರೆ.
‘ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಯಾರಿಗೋ ನಾಯಿ ಕಚ್ಚಿದರೆ ದರ್ಶನ್ಗೆ ನೊಟೀಸ್ ಕೊಟ್ಟು ಪೊಲೀಸ್ ಠಾಣೆಗೆ ಕರೆಸೋದು, ಈಗ ಊಟಕ್ಕೆ ಹೋದರೂ ನೊಟೀಸ್ ನೀಡಿ ಸ್ಟೇಷನ್ಗೆ ಕರೆಸೋ ಕೆಲಸ ಮಾಡ್ತಿದ್ದಾರೆ. ದರ್ಶನ್ ಏಳಿಗೆ ಸಹಿಸದ ಕೆಲವರು ಪೊಲೀಸರನ್ನು ದರ್ಶನ್ ವಿರುದ್ಧ ಬಳಸಿಕೊಳ್ಳುತ್ತಿದ್ದಾರೆ. ಕ್ಷುಲ್ಲಕ ಕಾರಣಗಳಿಗೆ ದರ್ಶನ್ ಅವರಿಗೆ ನೊಟೀಸ್ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಹಲವು ಎಂಪೈರ್ ಹೋಟೆಲ್ಗಳಿವೆ, ಎಲ್ಲ ಎಂಪೈರ್ ಹೋಟೆಲ್ಗಳು ಬೆಳಗಿನ ಜಾವ ಮೂರು ಗಂಟೆ ವರೆಗೂ ತೆರೆದಿರುತ್ತವೆ. ಎಷ್ಟೋಂದು ಜನ ಊಟಕ್ಕೆ ಅಲ್ಲಿಗೆ ಹೋಗ್ತಾರೆ ಅವರಿಗೆಲ್ಲ ನೊಟೀಸ್ ಕೊಡ್ತಾರಾ ಪೊಲೀಸಿನವರು’ ಎಂದು ವಕೀಲರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:‘ಆ ಉದ್ದೇಶ ನಮಗೆ ಇರಲಿಲ್ಲ’: ‘ಕಾಟೇರ’ ಪಾರ್ಟಿ ಕೇಸ್ ಬಗ್ಗೆ ರಾಕ್ಲೈನ್ ಮೊದಲ ಪ್ರತಿಕ್ರಿಯೆ
‘ಬೆಂಗಳೂರಿನ ಎಷ್ಟೋ ಫೈವ್ ಸ್ಟಾರ್ ಹೋಟೆಲ್ಗಳು ರಾತ್ರಿಪೂರ್ತಿ ಕೆಲಸ ಮಾಡುತ್ತವೆ. ಊಟ ನೀಡಲಾಗುತ್ತದೆ. ಪಾರ್ಟಿಗಳು ನಡೆಯುತ್ತವೆ. ರಾಜಕಾರಣಿಗಳು ತಾಜ್ ವೆಸ್ಟೆಂಡ್ ಇನ್ನೂ ಕೆಲವು ಐಶಾರಾಮಿ ಹೋಟೆಲ್ಗಳಿಗೆ ಹೋಗಿ ಊಟ ಮಾಡ್ತಾರೆ, ರಾತ್ರಿ 3-4 ಗಂಟೆ ವರೆಗೆ ಪಾರ್ಟಿ ಮಾಡ್ತಾರೆ. ಸಿಎಂ ಕೂಡ ರಾತ್ರಿ ಹೊತ್ತು ಊಟ ಮಾಡ್ತಾರೆ, ಪಾರ್ಟಿ ಮಾಡ್ತಾರೆ. ಎಲ್ಲರಿಗೂ ಪೊಲೀಸರು ನೊಟೀಸ್ ಕೊಡುತ್ತಾರಾ? ಈಗ ದರ್ಶನ್ಗೆ ನೊಟೀಸ್ ನೀಡಿರುವುದು ಅವರ ವಿರುದ್ಧ ಪಿತೂರಿ’ ಎಂದಿದ್ದಾರೆ ವಕೀಲ.
‘ಪೊಲೀಸರು ಯಾರ ಕೈಗೊಂಬೆಯೂ ಆಗಬಾರ್ದು, ಪೊಲೀಸರು ದರ್ಶನ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾದರೆ ಅವರಿಗೆ ರಾತ್ರಿ ಮೂರು ಗಂಟೆ ವರೆಗೆ ತೆರೆದು ಸೇವೆ ಕೊಡುತ್ತಿರುವ ಎಂಪೈರ್ ಹೋಟೆಲ್ ಕಾಣಲಿಲ್ಲವೇ? ಎಂಪೈರ್ ಹೊಟೆಲ್ ಮೇಲೆ ಸುಮೊಮೊಟೊ ಪ್ರಕರಣ ದಾಖಲಿಸುವಷ್ಟು ಧೈರ್ಯ, ಶಕ್ತಿ ನಿಮಗಿಲ್ಲವಾ? ಯಾಕೆ ದರ್ಶನ್ ಹೋಗಿ ಊಟ ಮಾಡಿದ ಹೋಟೆಲ್ ಅನ್ನೇ ಟಾರ್ಗೆಟ್ ಮಾಡಿರಿ, ಆ ಜೆಟ್ ಲ್ಯಾಗ್ ಹೋಟೆಲ್ನ ಮಾಲೀಕ ನಿಮಗೆ ಬೇಕಾಗಿರುವುದು ಕೊಟ್ಟಿಲ್ಲವಾ? ಅದಕ್ಕೆ ಕೇಸು ನೊಂದಣಿ ಮಾಡಿದ್ದೀರಾ? ಇದು ನಮ್ಮ ಪ್ರಶ್ನೆ’ ಎಂದು ಪೊಲೀಸರನ್ನು ದರ್ಶನ್ ಪರ ವಕೀಲ ಪ್ರಶ್ನೆ ಮಾಡಿದರು.
ಇದನ್ನೂ ಓದಿ:ಎರಡು ವಾರಕ್ಕೆ ‘ಕಾಟೇರ’ ಸಿನಿಮಾ ಮಾಡಿದ ಗಳಿಕೆ ಎಷ್ಟು? ಬಾಕ್ಸ್ ಆಫೀಸ್ ಸುಲ್ತಾನ್ ಆದ ದರ್ಶನ್
‘‘160 ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಂಡಿದ್ದೀರಾ, ಅದೇ ಕಾನೂನು ಹೇಳುತ್ತದೆ. ಹೇಳಿಕೆ ನೀಡಲು ಬರುವ ವ್ಯಕ್ತಿಯ ಸಂಚಾರ, ಭದ್ರತೆ ವೆಚ್ಚ ಪೊಲೀಸರೇ ಭರಿಸಬೇಕು ಎಂದು, ನೀವು ದರ್ಶನ್ರ ಸಂಚಾರ, ಭದ್ರತೆ ವೆಚ್ಚ ಭರಿಸುತ್ತೀರ? ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ ಎಂದು ತೋರಿಸಿಕೊಳ್ಳಲು ನೊಟೀಸ್ ಕೊಟ್ಟಿದ್ದೀರ? ಇನ್ನೂ ಹಲವು ಪ್ರಶ್ನೆಗಳನ್ನು ನಾವು ಪೊಲೀಸರಿಗೆ ಕೇಳುತ್ತೇವೆ. ನೀವು ದರ್ಶನ್ ಅವರನ್ನು ಎಷ್ಟು ಟಾರ್ಗೆಟ್ ಮಾಡುತ್ತೀರೋ ಅವರು ಅಷ್ಟು ಬೆಳೆಯುತ್ತಾರೆ. ಈಗ ಪೊಲೀಸರು ಕೊಟ್ಟಿರುವುದು ಕಾನೂನಿಗೆ ವಿರುದ್ಧ ಅಲ್ಲಿ ಯಾವುದೇ ಕಾನೂನಿಗೆ ವಿರುದ್ಧವಾದ ಯಾವುದೇ ಕಾರ್ಯ ನಡೆದಿಲ್ಲ’ ಎಂದಿದ್ದಾರೆ.
‘ರಾತ್ರಿ ಎಷ್ಟು ಹೊತ್ತಿಗೆ ಬೇಕಾದರೂ ಊಟ ಮಾಡಬಹುದು, ಪಾರ್ಟಿ ಸಹ ಮಾಡಬಹುದು ಅದು ಅವರ ಹಕ್ಕು. ದರ್ಶನ್ ಅವರು ಊಟಕ್ಕೆ ಹೋಗಿದ್ದರು ಊಟ ಮಾಡಿದರು, ಒಂದೊಮ್ಮೆ ಅಲ್ಲಿ ಮದ್ಯ ಸೇವಿಸಿದ್ದರೂ ಸಹ ಅದು ತಪ್ಪಲ್ಲ ಅದು ಅವರ ಹಕ್ಕು. ರಾತ್ರಿ 1 ಗಂಟೆ ಮೇಲೆ ಹೋಗಿದ್ದಾರೆ ಎನ್ನುತ್ತಿದ್ದಾರೆ. ಅಲ್ಲಿಗೆ ಅವರು ಗ್ರಾಹಕರಾಗಿ ಹೋಗಿದ್ದಲ್ಲ, ಬದಲಿಗೆ ಅಲ್ಲಿನ ಮಾಲೀಕರು ಕರೆದಿದ್ದ ವೈಯಕ್ತಿಕ ಆಹ್ವಾನದ ಮೇಲೆ ಹೋಗಿದ್ದರು. ಅಲ್ಲಿ ಆತಿಥ್ಯ ನಡೆದಿದೆಯೇ ವಿನಃ ವ್ಯಾಪಾರವಲ್ಲ. ಪಬ್ ಗೆ ಗ್ರಾಹಕರು ಬರದಂತೆ ತಡೆದು, ಅದರ ಮಾಲೀಕರು ವೈಯಕ್ತಿಕ ಆತಿಥ್ಯವನ್ನು ನೀಡಿದ್ದಾರೆ. ಅದು ನಿಯಮಕ್ಕೆ ವಿರುದ್ಧವಾದುದಲ್ಲ’ ಎಂದು ವಕೀಲರು ಹೇಳಿದ್ದಾರೆ.
‘ಒಂದೊಮ್ಮೆ ತಪ್ಪು ನಡೆದಿದೆ, ನಿಯಮ ಮೀರಲಾಗಿದೆ ಎಂದಾಗಿದ್ದರೆ ಪಬ್ನ ಮಾಲೀಕರನ್ನು ಪ್ರಶ್ನೆ ಮಾಡಬೇಕಿತ್ತು, ಆದರೆ ಅಲ್ಲಿಗೆ ಊಟಕ್ಕೆ ಹೋದ ದರ್ಶನ್ ಅವರಿಗೆ ನೊಟೀಸ್ ನೀಡಿರುವುದು ಕಾನೂನಿಗೆ ವಿರುದ್ಧವಾದುದು. ರಾಜಕಾರಣಿಗಳೇ ಆಗಲಿ, ಪೊಲೀಸರೇ ಆಗಲಿ ನಿಮಗೆ ತಾಕತ್ತಿದ್ದರೆ, ಧೈರ್ಯವಿದ್ದರೆ ರಾತ್ರಿ ಮೂರು ಗಂಟೆ ವರೆಗೆ ಸೇವೆ ನೀಡುತ್ತಿರುವ ಎಂಪೈರ್ ಹೋಟೆಲ್ ಅನ್ನು ನಿಲ್ಲಿಸಿ ನೋಡೋಣ’ ಎಂದು ಸವಾಲು ಎಸೆದಿದ್ದಾರೆ ದರ್ಶನ್ ಪರ ವಕೀಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:35 pm, Fri, 12 January 24