ಹಾಸಿಗೆ, ದಿಂಬು ಕೋರಿ ದರ್ಶನ್ ಅರ್ಜಿ: ಹೊರಬಿತ್ತು ಕೋರ್ಟ್ ಆದೇಶ

Darshan Thoogudeepa case: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್, ತಮಗೆ ಮಲಗಲು ಹೆಚ್ಚುವರಿ ಹಾಸಿಗೆ, ದಿಂಬು ಮತ್ತು ಬೆಡ್​​ಶೀಟ್ ಬೇಕೆಂದು ಕೋರ್ಟ್​​ಗೆ ಮನವಿ ಮಾಡಿದ್ದರು. ದರ್ಶನ್ ಮನವಿ ಬಗ್ಗೆ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆದಿದ್ದವು. ಇಂದು (ಅಕ್ಟೋಬರ್ 29) ಆದೇಶ ಹೊರಬಿದ್ದಿದೆ.

ಹಾಸಿಗೆ, ದಿಂಬು ಕೋರಿ ದರ್ಶನ್ ಅರ್ಜಿ: ಹೊರಬಿತ್ತು ಕೋರ್ಟ್ ಆದೇಶ
Darshan Thoogudeepa

Updated on: Oct 29, 2025 | 12:28 PM

ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ತಮಗೆ ಮಲಗಲು ಹೆಚ್ಚುವರಿ ಹಾಸಿಗೆ ಮತ್ತು ದಿಂಬು ಬೇಕೆಂದು ಮನವಿ ಮಾಡಿದ್ದರು. ಜೈಲಧಿಕಾರಿಗಳು ಹೆಚ್ಚುವರಿ ಹಾಸಿಗೆ-ದಿಂಬು ನೀಡಲು ನಿರಾಕರಿಸಿದ ಕಾರಣ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದರು. ಕೆಲ ದಿನಗಳ ಹಿಂದೆ ನಡೆದ ವಾದದ ಸಮಯದಲ್ಲಿ ನಟ ದರ್ಶನ್ ಪರ ವಕೀಲರು, ಜೈಲಧಿಕಾರಿಗಳು ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ. ದರ್ಶನ್ ಅವರಿಗೆ ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್​​ಶೀಟ್ ನೀಡಿಲ್ಲ ಎಂದು ವಾದಿಸಿದ್ದರು. ಅರ್ಜಿಯ ಬಗ್ಗೆ ಹಲವು ಬಾರಿ ವಾದ-ಪ್ರತಿವಾದಗಳು ನಡೆದಿದ್ದವು, ಜೈಲಿಗೆ ಕಾನೂನು ಪ್ರಾಧಿಕಾರ ಸದಸ್ಯರು ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದ್ದರು. ವಾದಗಳನ್ನು ಆಲಿಸಿದ್ದ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದರು. ಇಂದು (ಅಕ್ಟೊಬರ್ 29) ಆದೇಶ ಹೊರಬಿದ್ದಿದೆ.

ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಅವರಿಗೆ ತಿಂಗಳಿಗೊಮ್ಮೆ ಹಾಸಿಗೆ, ಬಟ್ಟೆಗಳನ್ನು ಒದಗಿಸುವಂತೆ ನ್ಯಾಯಾಲಯ ಆದೇಶಿಸಿದೆ. ಮತ್ತೊಬ್ಬ ಆರೋಪಿ ಪವಿತ್ರಾ ಅವರಿಗೂ ಇದೇ ಆದೇಶ ಅನ್ವಯ ಆಗಲಿದೆ.  ಆದರೆ ದರ್ಶನ್ ಕೇಳಿದಂತೆ ದಿಂಬು, ಕನ್ನಡಿ, ಬಾಚಣಿಗೆ ಹಾಗೂ ಇನ್ನಿತರೆ ಸೌಲಭ್ಯಗಳು ಅವರಿಗೆ ಸಿಕ್ಕಿಲ್ಲ. ಈ ಹಿಂದೆ ದರ್ಶನ್ ಹಾಗೂ ಇತರೆ ಆರೋಪಿಗಳ ಜಾಮೀನು ರದ್ದು ಮಾಡಿದ್ದ ಸುಪ್ರೀಂಕೋರ್ಟ್, ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ವಿಶೇಷ ಸೌಲಭ್ಯ ನೀಡದಂತೆ ಸೂಚಿಸಿತ್ತು. ಅದರಂತೆ ಜೈಲಧಿಕಾರಿಗಳು ದರ್ಶನ್​​ಗೆ ಯಾವುದೇ ಸೌಲಭ್ಯಗಳನ್ನು ನೀಡಿರಲಿಲ್ಲ. ಹಾಗಾಗಿ ದರ್ಶನ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದ ಈಗಿನ ಆದೇಶದಿಂದ ದರ್ಶನ್​​ಗೆ ಪೂರ್ಣ ಸಂತುಷ್ಟಿ ಸಿಕ್ಕಂತಿಲ್ಲ.

ಇದನ್ನೂ ಓದಿ:ದರ್ಶನ್​​ಗೆ ಗಲ್ಲು ಶಿಕ್ಷೆ ಕೊಡಿ: ಕೋರ್ಟ್​​ನಲ್ಲಿ ಅಬ್ಬರಿಸಿದ ದರ್ಶನ್ ಪರ ವಕೀಲ

ತಮ್ಮನ್ನು ಬೇರೆ ಬ್ಯಾರಕ್​ಗೆ ಸಹ ಸ್ಥಳಾಂತರ ಮಾಡುವಂತೆಯೂ ಸಹ ದರ್ಶನ್ ಕೇಳಿಕೊಂಡಿದ್ದರು. ಆದರೆ ಈ ಅಧಿಕಾರವನ್ನು ಜೈಲಧಿಕಾರಿಗಳಿಗೆ ನ್ಯಾಯಾಲಯ ನೀಡಿದೆ. ದರ್ಶನ್ ಅನ್ನು ಬೇರೆ ಬ್ಯಾರಕ್​​ಗೆ ಸ್ಥಳಾಂತರಿಸುವ ನಿರ್ಣಯವನ್ನು ಜೈಲಧಿಕಾರಿಗಳು ಕೈಗೊಳ್ಳಲಿ ಎಂದಿದೆ ನ್ಯಾಯಾಲಯ. ದರ್ಶನ್ ಅವರು ಈಗಿರುವ ಬ್ಯಾರಕ್​​ನಲ್ಲಿ ಬೆಳಕು ಬರುವುದಿಲ್ಲ. ಬಿಸಿಲು ಕಾಣದೆ ಫಂಗಸ್ ಆಗಿದೆ ಎಂದು ಆರೋಪಿಸಿದ್ದರು. ಆದರೆ ದರ್ಶನ್ ಭದ್ರತೆ ದೃಷ್ಟಿಯಿಂದ ಬೇರೆ ಬ್ಯಾರಕ್​​ಗೆ ಅವರನ್ನು ಸ್ಥಳಾಂತರ ಮಾಡಿಲ್ಲ ಎಂದು ಜೈಲಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು.

A1 ಪವಿತ್ರಾಗೌಡ, A2 ದರ್ಶನ್ ಸೇರಿ 6 ಆರೋಪಿಗಳು ಇಂದಿನ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಶೀಘ್ರ ಸಾಕ್ಷ್ಯ ವಿಚಾರಣೆ ಕೋರಿ ಪ್ರಾಸಿಕ್ಯೂಷನ್ ಹಾಕಲಾಗಿದ್ದ ಅರ್ಜಿಯ ಬಗ್ಗೆ, ಸಾಕ್ಷ್ಯ ವಿಚಾರಣೆಗೆ 2 ಕಡೆಯವರು ಸಹಕರಿಸುವಂತೆ ಕೋರ್ಟ್ ಸೂಚನೆ ನೀಡಿತು. ಇದರ ಜೊತೆಗೆ ತಮ್ಮನ್ನು ಆರೋಪದಿಂದ ಕೈಬಿಡುವಂತೆ ಐದನೇ ಆರೋಪಿ ನಂದೀಶ್ ಅರ್ಜಿ ಹಾಕಿದ್ದ, ಆದರೆ ಆ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಬಾರಿ ಬಂಧಿತರಾಗಿದ್ದ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಪಡೆದಿದ್ದರು. ದರ್ಶನ್, ಇತರೆ ಕೆಲವು ಆರೋಪಿಗಳ ಜೊತೆಗೆ ಕೂತು ಜೈಲಿನಲ್ಲಿಯೇ ಸಿಗರೇಟು ಕುಡಿಯುತ್ತಿರುವ ಫೋಟೊ ವೈರಲ್ ಆಗಿತ್ತು. ಬಳಿಕ ಜೈಲಿನಿಂದ ವಿಡಿಯೋ ಕಾಲ್ ಮಾಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು. ಬಳಿಕ ಅವರು ಆರೋಗ್ಯದ ಕಾರಣ ನೀಡಿ ಜಾಮೀನು ಪಡೆದು ಹೊರಗೆ ಬಂದಿದ್ದರು. ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದ ಕಾರಣ ಈಗ ಮತ್ತೆ ಜೈಲು ಸೇರಿದ್ದಾರೆ. ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಸಮಯ ದೂಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Wed, 29 October 25