ಸಮಂತಾ ಜೊತೆಗೆ ದಿಗಂತ್ ಸಿನಿಮಾ, ಜೊತೆಗೆ ಇನ್ನೊಬ್ಬ ಕನ್ನಡಿಗ
Samantha Ruth Prabhu: ಸಮಂತಾ ಋತ್ ಪ್ರಭು ಬಲು ಜನಪ್ರಿಯ ನಟಿ. ಹಲವು ರಾಜ್ಯಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ನಿರ್ಮಾಪಕಿಯೂ ಆಗಿರುವ ಸಮಂತಾ, ಇದೀಗ ಎರಡನೇ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಸ್ವತಃ ಅವರೂ ನಟಿಸುತ್ತಿದ್ದಾರೆ. ಸಮಂತಾ ಜೊತೆಗೆ ಇಬ್ಬರು ಕನ್ನಡಿಗರು ನಟಿಸುತ್ತಿರುವುದು ವಿಶೇಷ.

ಸಮಂತಾ ಋತ್ ಪ್ರಭು (Samantha Ruth Prabhu) ದಕ್ಷಿಣದ ಸ್ಟಾರ್ ನಟಿಯರಲ್ಲಿ ಒಬ್ಬರು. ಆದರೆ ಇತ್ತೀಚೆಗೆ ಅವರೇ ಹೇಳಿಕೊಂಡಿದ್ದಂತೆ ಅವರಿಗೆ ತೆಲುಗು ಸಿನಿಮಾ ಅವಕಾಶಗಳು ಕಡಿಮೆ ಆಗಿವೆಯಂತೆ. ಕೆಲ ತಿಂಗಳ ಹಿಂದಿನ ವರೆಗೂ ಸಮಂತಾ ಕೈಯಲ್ಲಿ ಒಂದೂ ಸಿನಿಮಾ ಇರಲಿಲ್ಲ. ‘ಮಾ ಇಂಟಿ ಬಂಗಾರಂ’ ಸಿನಿಮಾ ಘೋಷಿಸಿ ತಿಂಗಳುಗಳು ಆಗಿದ್ದವಾದರೂ ಸಿನಿಮಾ ಸೆಟ್ಟೇರಿರಲಿಲ್ಲ. ಇದೀಗ ಈ ಸಿನಿಮಾಕ್ಕೆ ಅವರೇ ಬಂಡವಾಳ ಹೂಡುತ್ತಿದ್ದು, ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ನಡೆಯಿತು. ವಿಶೇಷವೆಂದರೆ ಈ ಸಿನಿಮಾನಲ್ಲಿ ಸಮಂತಾ ಜೊತೆಗೆ ಇಬ್ಬರು ಕನ್ನಡಿಗರು ನಟಿಸುತ್ತಿದ್ದಾರೆ.
‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ಸಮಂತಾ ಜೊತೆಗೆ ದೂದ್ಪೇಡ ಎಂದೇ ಹೆಸರಾಗಿರುವ ದಿಗಂತ್ ನಟಿಸುತ್ತಿದ್ದಾರೆ. ದಿಗಂತ್ ಪಾಲಿಗೆ ಇದು ಅವರ ಎರಡನೇ ತೆಲುಗು ಸಿನಿಮಾ ಆಗಲಿದೆ. ‘ಮುಂಗಾರು ಮಳೆ’ ಸಿನಿಮಾದ ತೆಲುಗು ರೀಮೇಕ್ ‘ವಾನ’ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು, ದಿಗಂತ್. ಅಸಲಿಗೆ ದಶಕದ ಮುಂಚೆಯೇ ತೆಲುಗಿಗೆ ಹೋಗಲಿದ್ದರು ದಿಗಂತ್, ವಿಜಯ್ ದೇವರಕೊಂಡ ಜೊತೆಗೆ ಸಹ ನಾಯಕನಾಗಿ ಸಿನಿಮಾ ಒಂದಕ್ಕೆ ಸಹಿ ಮಾಡಿದ್ದರು. ಬೈಕರ್ಗಳ ಬಗೆಗಿನ ಆ ಸಿನಿಮಾಕ್ಕೆ ಚೆನ್ನೈನಲ್ಲಿ ವಿಜಯ್ ಮತ್ತು ದಿಗಂತ್ ಒಟ್ಟಿಗೆ ತರಬೇತಿ ಸಹ ಪಡೆದುಕೊಂಡಿದ್ದರು. ಆದರೆ ಸಿನಿಮಾ ಸೆಟ್ಟೇರಲಿಲ್ಲ. ಆದರೆ ಹಲವು ವರ್ಷಗಳ ಬಳಿಕ ಇದೀಗ ‘ಮಾ ಇಂಟಿ ಬಂಗಾರಂ’ ಸಿನಿಮಾ ಮೂಲಕ ದಿಗಂತ್ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ಕನ್ನಡಿಗ ಗುಲ್ಷನ್ ದೇವಯ್ಯ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಬಾಲಿವುಡ್ನಲ್ಲಿ ಹಲವಾರು ಅದ್ಭುತ ಸಿನಿಮಾ, ವೆಬ್ ಸರಣಿಗಳಲ್ಲಿ ನಟಿಸಿ ಹೆಸರು ಮಾಡಿರುವ ಕನ್ನಡಿಗ ಗುಲ್ಷನ್ ದೇವಯ್ಯ, ಇತ್ತೀಚೆಗಷ್ಟೆ ಬಿಡುಗಡೆ ಆದ ‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ಕುಲಶೇಖರನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಇದೀಗ ‘ಮಾ ಇಂಟಿ ಬಂಗಾರಂ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ:ಸಮಂತಾ ಋತ್ ಪ್ರಭುವನ್ನು ಕೊಂಡಾಡಿದ ಬಾಲಿವುಡ್ ಸ್ಟಾರ್ ನಿರ್ದೇಶಕ
‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ನಂದಿನಿ ರೆಡ್ಡಿ ಅವರು ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಸಮಂತಾ ನಟಿಸಿದ್ದ ‘ಓಹ್ ಬೇಬಿ’ ಸಿನಿಮಾವನ್ನು ಇದೇ ನಂದಿನಿ ರೆಡ್ಡಿ ನಿರ್ದೇಶನ ಮಾಡಿದ್ದರು. ನಂದಿನಿ ರೆಡ್ಡಿ ಮತ್ತು ಸಮಂತಾ ಪರಸ್ಪರ ಒಳ್ಳೆಯ ಗೆಳೆಯರು. ಇದೀಗ ‘ಮಾ ಇಂಟಿ ಬಂಗಾರಂ’ ಸಿನಿಮಾಕ್ಕೆ ಸ್ವತಃ ಸಮಂತಾ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಹಲವು ತಿಂಗಳ ಹಿಂದೆಯೇ ಬಿಡುಗಡೆ ಆಗಿತ್ತು. ಪೋಸ್ಟರ್ನಲ್ಲಿ ಸೀರೆ ಉಟ್ಟಿರುವ ಸಮಂತಾ ಕೈಯಲ್ಲಿ ಬಂದೂಕು ಹಿಡಿದು ಫೋಸು ನೀಡಿದ್ದರು. ಇದು ರೆಬಲ್ ಮಹಿಳೆಯ ಬಗೆಗಿನ ಸಿನಿಮಾ ಎನ್ನಲಾಗುತ್ತಿದೆ.
ನಿರ್ಮಾಪಕಿಯಾಗಿ ಸಮಂತಾಗೆ ಇದು ಎರಡನೇ ಸಿನಿಮಾ. ಮೊದಲು ‘ಶುಭಂ’ ಹೆಸರಿನ ಸಿನಿಮಾ ನಿರ್ಮಿಸಿದ್ದರು. ಕಡಿಮೆ ಬಜೆಟ್ನ ಆ ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತ್ತು. ಇದೀಗ ತುಸು ದೊಡ್ಡ ಬಜೆಟ್ ಹಾಕಿ ‘ಮಾ ಇಂಟಿ ಬಂಗಾರಂ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ಒಳ್ಳೆಯ ಸಿನಿಮಾಗಳನ್ನು ಜನರಿಗೆ ಕೊಡುವುದೇ ನಮ್ಮ ನಿರ್ಮಾಣ ಸಂಸ್ಥೆಯ ಉದ್ದೇಶ’ ಎಂದಿದ್ದಾರೆ ಸಮಂತಾ. ರಾಜ್ ನಿಧಿಮೋರು ಸಹ ಸಮಂತಾರ ಈ ಜರ್ನಿಯಲ್ಲಿ ಜೊತೆಗೆ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




